ಕಲ್ಯಾಣದ ಕೈಗಾರಿಕಾಭಿವೃದ್ಧಿಗೆ ತ್ವರಿತ ಕ್ರಮ ಕೈಗೊಳ್ಳಿ

ಬೆಂಗಳೂರಿನಲ್ಲಿ ಎಫ್​ಕೆಸಿಸಿಐ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಅವರು ಕೆಐಎಡಿಬಿ ಸಿಇಒ ಗೋವಿಂದರೆಡ್ಡಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಉಮಾ ರೆಡ್ಡಿ ಇತರರಿದ್ದರು.
ಬೆಂಗಳೂರಿನಲ್ಲಿ ಎಫ್​ಕೆಸಿಸಿಐ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಅವರು ಕೆಐಎಡಿಬಿ ಸಿಇಒ ಗೋವಿಂದರೆಡ್ಡಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಉಮಾ ರೆಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಗ್ರಹ
  • ಕೆಐಎಡಿಬಿ ಸಿಇಒ ಗೋವಿಂದರೆಡ್ಡಿಗೆ ಮನವಿ ಸಲ್ಲಿಕೆ
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಕೈಗಾರಿಕೆಗಳ ಅಭಿವೃದ್ಧಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಕೆಸಿಸಿಐ) ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಆಗ್ರಹಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂದಿಂದ ಬೆಂಗಳೂರಿನಲ್ಲಿ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯ ಗೋವಿಂದ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕೆಗಳು ಹಾಗೂ ಎಂಎಸ್​ಎಂಇ ವಲಯ ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ. ಕಲಬುರಗಿ ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್​ ಪಾರ್ಕ್​ ಅಭಿವೃದ್ಧಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಅಗತ್ಯ ಸೌಕರ್ಯ ಹಾಗೂ ಅನುಮೋದನೆ ಶೀಘ್ರ ಪೂರ್ಣಗೊಳಿಸಲು ಕೆಐಎಡಿಬಿಗೆ ನಿರ್ದೇಶನ ನೀಡಬೇಕು. ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿನ ಬಾಕಿ ಉಳಿದಿರುವ ಎಲ್ಲ ಮೂಲಸೌಕರ್ಯ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಭೂಮಿಗೆ ಸಂಬಂಧಿಸಿದ ಸಣ್ಣಪುಟ್ಟ ಬದಲಾವಣೆ ಹಾಗೂ ಆಡಳಿತಾತ್ಮಕ ಅನುಮೋದನೆಗಳಿಗೆ ಜಿಲ್ಲಾ ಮಟ್ಟದ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಕ್ರಿಯಾತ್ಮಕ ವಿಳಂಬದಿಂದ ಸಂಕಷ್ಟದಲ್ಲಿರುವ ಕೈಗಾರಿಕಾ ನಿವೇಶನಗಳಿಗೆ ಎರಡು ವರ್ಷಗಳ ಅವಧಿ ವಿಸ್ತರಣೆ ನೀಡಬೇಕು. ಜಿಲ್ಲಾ ಮಟ್ಟದ ಏಕಗವಾ ಯೋಜನಾ ಅನುಮೋದನೆಗಳ ಮಿತಿ ಹಾಗೂ ಭೂಮಿ ಹಂಚಿಕೆ ಮಿತಿ ಹೆಚ್ಚಿಸಬೇಕು. ಕೈಗಾರಿಕೆಗಳಿಗೆ ಬಾಕಿ ಉಳಿದಿರುವ ಬಂಡವಾಳ ಸಹಾಯಧನ ಶೀಘ್ರ ಬಿಡುಗಡೆ ಮಾಡಬೇಕು. ಕಪನೂರ ಕೈಗಾರಿಕಾ ಪ್ರದೇಶ (ಹಂತ-1) ರಸ್ತೆಗಳ ಅಭಿವೃದ್ಧಿ ಕಾಮಗಾರಿ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು. ಕೈಗಾರಿಕೆಗಳಿಗೆ ಅಗತ್ಯ ನೀರು ಸರಬರಾಜು ವ್ಯವಸ್ಥೆ ಶೀಘ್ರ ಕಲ್ಪಿಸಬೇಕು ಎಂದು ಕೋರಿದರು.
ಎಫ್​ಕೆಸಿಸಿಐ ಅಧ್ಯೆಕ್ಷ ಉಮಾ ರೆಡ್ಡಿ, ಕೈಗಾರಿಕೆ ಹಾಗೂ ಎಂಎಸ್​ಎಂಇ ಸಮಿತಿ ಸಂಚಾಲಕ ಅಭಿಜಿತ್​ ಪಡಶೆಟ್ಟಿ, ಸಂತೋಷ್​ ನಂದ್ಯಾಳ, ಇತರರಿದ್ದರು.
"

ಕಲಬುರಗಿ ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್​ ಪಾರ್ಕ್​ನ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು 400 ಕೋಟಿ ರೂ. ಅನುದಾನ ಈಗಾಗಲೇ ಮಂಜೂರಾಗಿದ್ದು, ಕಾಮಗಾರಿ ಶೀಘ್ರ ಆರಂಭಿಸಿ ಬೇಗ ಪೂರ್ಣಗೊಳಿಸಲಾಗುವುದು. ಜತೆಗೆ ಕೆಕೆಸಿಸಿಐ ಸಲ್ಲಿಸಿರುವ ಎಲ್ಲ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

— > ಗೋವಿಂದ ರೆಡ್ಡಿ, ಸಿಇಒ, ಕೆಐಎಡಿಬಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net