ನಗರದ ಮುಖ್ಯ ರಸ್ತೆಯಲ್ಲಿ ಕೆಲಸಕ್ಕಾಗಿ ಕಾಯುತ್ತಿದ್ದ ಕೂಲಿ ಕಾರ್ಮಿಕರನ್ನು ಶುಕ್ರವಾರ ಬೆಳಗ್ಗೆ ಭೇಟಿ ಮಾಡಿ ಮಾತನಾಡಿದ ಅವರು, ನೇರವಾಗಿ ವಿಬಿ-ಜಿ ರಾಮ್ ಜಿ ಯೋಜನೆಯ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಕಾರ್ಮಿಕರು ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಒಂದು ಕುಟುಂಬಕ್ಕೆ ವರ್ಷಕ್ಕೆ ೧೨೫ ದಿನಗಳ ಕೆಲಸ ನೀಡಲಾಗುತ್ತಿದ್ದು, ಪ್ರತಿದಿನ ೩೮೨ ರೂ. ದಿನಗೂಲಿ ನಿಗದಿಪಡಿಸಲಾಗಿದೆ. ಕೆರೆ ಅಭಿವೃದ್ಧಿ, ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ, ಸಸಿ ನೆಡುವಿಕೆ ಹಾಗೂ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ದನದ ಕೊಟ್ಟಿಗೆ ಮತ್ತು ಕೋಳಿ ಸಾಕಣೆ ಶೆಡ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.