ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಿ

ಸೋಮವಾರಪೇಟೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಕಸ ಸಂಗ್ರಹವಾಗಿದ್ದ ಸ್ಥಳಕ್ಕೆ ಶಾಸಕ ಡಾ.ಮಂತರ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃಷ್ಣಪ್ರಸಾದ್, ಸತೀಶ್, ಶೀಲಾ, ರುಬಿನಾ ಇದ್ದರು.
ಸೋಮವಾರಪೇಟೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಕಸ ಸಂಗ್ರಹವಾಗಿದ್ದ ಸ್ಥಳಕ್ಕೆ ಶಾಸಕ ಡಾ.ಮಂತರ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃಷ್ಣಪ್ರಸಾದ್, ಸತೀಶ್, ಶೀಲಾ, ರುಬಿನಾ ಇದ್ದರು.
Published on
ಸೋಮವಾರಪೇಟೆ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯುವವರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಅವರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೋಮವಾರ ಸೂಚಿಸಿದರು.
ಮಡಿಕೇರಿ ರಸ್ತೆಯ ಯೂನಿಯನ್ ಬ್ಯಾಂಕ್‌ಗೆ ಸೇರಿದ ಜಾಗದಲ್ಲಿ ಸಂಗ್ರಹವಾಗಿದ್ದ ಸ್ಥಳಕ್ಕೆ ಭೇಟಿ ನೀಡಿದ ಅವರು, ತ್ಯಾಜ್ಯ ವಿಲೇವಾರಿಗೆ ಕ್ರಮ ತೆಗೆದುಕೊಂಡು ನಂತರ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರಿಗೆ ಕೆಲವು ಸಲಹೆಗಳನ್ನು ನೀಡಿದರು.
ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಕೈಜೋಡಿಸಬೇಕು. ರಸ್ತೆ ಬದಿಯಲ್ಲಿ ಕಸ ಎಸೆದರೆ, ಇಡೀ ಪರಿಸರ ಗಬ್ಬೆದ್ದು ನಾರುತ್ತದೆ. ಸಾಂಕ್ರಾಮಿಕ ರೋಗಗಳು ಹರಡಿ ದೊಡ್ಡ ಮಟ್ಟದ ಸಮಸ್ಯೆಯಾಗುತ್ತದೆ. ಈ ರಸ್ತೆಯಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಅನೇಕ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅವರ ಕಷ್ಟವನ್ನು ನಾವೆಲ್ಲರೂ ಕೇಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ರಸ್ತೆ ಬದಿಯಲ್ಲಿ ಕಸ ಸಂಗ್ರಹವಾಗುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ನಿರ್ವಹಣೆ ಮಾಡಬೇಕು. ಅನಾಗರಿಕರಂತೆ ರಸ್ತೆ ಬದಿಯಲ್ಲಿ ಕಸ ಎಸೆಯುವವರು ಸಿಕ್ಕಿಬಿದ್ದರೆ, ಕಾನೂನು ಕ್ರಮ ಕೈಗೊಳ್ಳಬೇಕು. ನಿರಂತರ ತಪ್ಪು ಮಾಡಿದರೂ ಶಿಕ್ಷೆ ಆಗದಿದ್ದರೆ ಕಸ ಎಸೆಯುವುದನ್ನು ಬಿಡುವುದಿಲ್ಲ ಎಂದು ಹೇಳಿದ ಶಾಸಕರು, ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಮುಖ್ಯಾಧಿಕಾರಿಗೆ ತಿಳಿಸಿದರು.
ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮಾತನಾಡಿ, ಪ್ರತಿದಿನ ಒಣಕಸ ಮತ್ತು ಹಸಿ ಕಸ ಸಂಗ್ರಹಕ್ಕೆ ಪಂಚಾಯಿತಿ ವಾಹನ ಮನೆ ಮುಂದೆಯೇ ಬರಲಿದ್ದು, ಸಾರ್ವಜನಿಕರು ಕಸವನ್ನು ವಾಹನಕ್ಕೆ ಹಾಕಬೇಕು. ರಸ್ತೆ ಬದಿಯಲ್ಲಿ ಕಸ ಎಸೆದರೆ ಕಾನೂನು ಕ್ರಮ ಖಂಡಿತ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಪ್ರಮುಖರಾದ ಡಿ.ಯು.ಕಿರಣ್, ಶೀಲಾ ಡಿಸೋಜ, ಎಂ.ಎ.ರುಬಿನಾ, ಮಂಜುಳಾ, ಜನಾರ್ಧನ್, ಮೀನಾ ಕುಮಾರಿ, ಶಾಸಕರ ಆಪ್ತ ಸಹಾಯಕ ಚೆರಿಯಮನೆ ದಿಗಂತ್, ಅರೋಗ್ಯ ನಿರೀಕ್ಷಕ ಜಾಸಿಂ ಖಾನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net