ಸಿಹಿ ಜೋಳಕ್ಕೆ ಗೊಣ್ಣೆಹುಳುಗಳ ಕಾಟ / VIJAYAPUR

ವಿಜಯಪುರ ಹೋಬಳಿಯಲ್ಲಿ ಸಿಹಿ ಜೋಳಕ್ಕೆ ಗೊಣ್ಣೆಹುಳುಗಳು ಬಿದ್ದಿರುವುದು.
ವಿಜಯಪುರ ಹೋಬಳಿಯಲ್ಲಿ ಸಿಹಿ ಜೋಳಕ್ಕೆ ಗೊಣ್ಣೆಹುಳುಗಳು ಬಿದ್ದಿರುವುದು.
Published on
ವಿಜಯಪುರ : ಉತ್ತಮ ಆದಾಯದ ನಿರೀೆಯಲ್ಲಿದ್ದ ವಿಜಯಪುರ ಹೋಬಳಿಯ ಸಿಹಿ ಜೋಳಕ್ಕೆ (ಅಮೆರಿಕನ್​ ಸ್ವೀಟ್​ ಕಾರ್ನ್​) ಗೊಣ್ಣೆಹುಳುಗಳ ಕಾಟ ಶುರುವಾಗಿದ್ದು, ರೈತರ ನಿದ್ದೆಗೆಡಿಸಿದೆ. ಹೋಬಳಿಯಾದ್ಯಂತ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಸಿಹಿ ಜೋಳಕ್ಕೆ ಕೀಟಬಾಧೆ ವ್ಯಾಪಕವಾಗಿ ಹರಡಿದೆ.
ಬೆಳೆಯ ಆರಂಭಿಕ ಹಂತದಲ್ಲಿಯೇ ಗೊಣ್ಣೆಹುಳುಗಳು ಜೋಳದ ಸುಳಿ, ಎಲೆ ಹಾಗೂ ಕಾಂಡವನ್ನು ತಿಂದು ಹಾಕುತ್ತಿವೆ. ಇದರಿಂದ ಗಿಡಗಳ ಬೆಳವಣಿಗೆ ಸಂಪೂರ್ಣ ಕುಂಠಿತಗೊಂಡಿದೆ. ಪ್ರಸ್ತುತ ತೆನೆ ಕಟ್ಟುವ ಹಂತದಲ್ಲಿರುವ ಬೆಳೆಗೂ ಈ ಹುಳುಗಳು ದಾಳಿ ಮಾಡುತ್ತಿರುವುದು ರೈತರ ಆತಂಕ ಇಮ್ಮಡಿಗೊಳಿಸಿದೆ.
ಒಂದು ಎಕರೆ ಸಿಹಿ ಜೋಳ ಬೆಳೆಯಲು ಸುಮಾರು 30 ರಿಂದ 40 ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ. ಗೊಣ್ಣೆಹುಳುಗಳ ನಿಯಂತ್ರಿಸಲು ಮೂರು ದಿನಕ್ಕೊಮ್ಮೆ ದುಬಾರಿ ರಾಸಾಯನಿಕ ಔಷಧ ಸಿಂಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ವೆಂಕಟೇನಹಳ್ಳಿಯ ರೈತ ಕೆಂಪೇಗೌಡ ಅಳಲು ತೋಡಿಕೊಂಡಿದ್ದಾರೆ.
ಅಧಿಕಾರಿಗಳ ಭೇಟಿಗೆ ರೈತರ ಆಗ್ರಹ : ಕಳೆದ ಬಾರಿ ಗೊಣ್ಣೆಹುಳುಗಳ ಬಾಧೆ ಕಡಿಮೆಯಿದ್ದ ಕಾರಣ ರೈತರು ಉತ್ತಮ ಲಾಭ ಪಡೆದಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಜಮೀನುಗಳಿಗೆ ಭೇಟಿ ನೀಡಿ, ಹುಳುಗಳ ನಿಯಂತ್ರಣಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಅಗತ್ಯ ಔಷಧ ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಒಂದೇ ರೀತಿಯ ಔಷಧ ಬಳಸಬೇಡಿ : ಗೊಣ್ಣೆಹುಳುಗಳ ಬಾಧೆ ತಡೆಯಲು ಬೆಳೆಯ ಪ್ರಾರಂಭದ ಹಂತದಿಂದಲೇ ನಿಗಾ ಇಡಬೇಕು. ಹಾಗೂ ಪ್ರತಿ ಬಾರಿ ಸಿಂಪಡಿಸುವಾಗ ಒಂದೇ ರೀತಿಯ ಕೀಟನಾಶಕ ಬಳಸಬಾರದು. ಒಂದೇ ಔಷಧವನ್ನು ಪದೇಪದೆ ಬಳಸುವುದರಿಂದ ಹುಳುಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಬೇರೆ ಬೇರೆ ಗುಂಪಿನ ಕೀಟನಾಶಕಗಳನ್ನು ಅದಲುಬದಲು ಮಾಡಿ ಬಳಸಬೇಕು. ಹೆಚ್ಚಿನ ತಾಂತ್ರಿಕ ಮಾಹಿತಿ ಮತ್ತು ಔಷಧೋಪಚಾರದ ವಿವರಗಳಿಗಾಗಿ ರೈತರು ಕೂಡಲೇ ಪಟ್ಟಣದ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ವೇತಾ ರೈತರಿಗೆ ಸಲಹೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net