ಅನುಮಾನ ಸಾಲದು, ಸಾಕ್ಷ್ಯಗಳು ಅಗತ್ಯ| ಜೀವಾವಧಿ ರದ್ದು| High court

High court
High court
Published on
ಬೆಂಗಳೂರು: ಕೇವಲ ಅನುಮಾನ ಅಥವಾ ಅಪೂರ್ಣವಾದ ಸಾಂದರ್ಭೀಕ ಸಾಕ್ಷ$್ಯಗಳನ್ನು ಅವಲಂಭಿಸಿ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ವಿಧಿಸಲಾಗದು ಎಂದಿರುವ ಹೈಕೋರ್ಟ್​, 2016ರಲ್ಲಿ ದೊಡ್ಡಬಳ್ಳಾಪುರದ ಕಾಡನೂರು ಪಾಳ್ಯ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರ ಆರೋಪಿಯನ್ನು ಖುಲಾಸೆಗೊಳಿಸಿದೆ.
ಜೀವಾವಧಿ ಶಿಕ್ಷೆ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ತಿರುಮಲ್ಲೇಶ ಎಂಬಾತ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಮಹಮ್ಮದ್​ ನವಾಜ್​ ಮತ್ತು ಜಿ. ಬಸವರಾಜ್​ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಕರಣದಲ್ಲಿ ಮೃತದೇಹ ಪತ್ತೆಯಾದ ಸ್ಥಳ, ರಕ್ತದ ಗುರುತುಗಳು ಮತ್ತು ಮೃತನು ಆರೋಪಿಯ ಮನೆಯಲ್ಲಿದ್ದ ಕೆಲವು ಸಂದರ್ಭಗಳ ಅಂಶಗಳನ್ನು ಪ್ರಾಸಿಕ್ಯೂಷನ್​ ಮುಂದಿಟ್ಟಿದೆ. ಆದರೆ, ಈ ಸಂದರ್ಭಗಳು ಪ್ರತ್ಯೇಕವಾಗಿ ಆರೋಪಿಯ ಮೇಲೆ ಅನುಮಾನ ಹುಟ್ಟಿಸಬಹುದಾದರೂ, ಅವುಗಳನ್ನು ಒಟ್ಟುಗೂಡಿಸಿದಾಗ ಅಪರಾಧವನ್ನು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಬೀತುಪಡಿಸಲು ಪ್ರಾಸಿಕ್ಯೂಷನ್​ ವಿಫಲವಾಗಿದೆ. ಆರೋಪಿಯ ಮೇಲಿನ ಅನುಮಾನ ಎಷ್ಟೇ ಗಂಭೀರವಾಗಿದ್ದರೂ, ಅದು ಸಾಕ್ಷ್ಯಗಳಿಗೆ ಪರ್ಯಾಯವಾಗುವುದಿಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.

ಒಬ್ಬನಿಗೆ ಶಿಕ್ಷೆ, ಮೊತ್ತೊಬ್ಬನ ಖುಲಾಸೆ ಏಕೆ?:

ಈ ಪ್ರಕರಣದ ಎರಡನೇ ಆರೋಪಿಯನ್ನು ಖುಲಾಸೆಗೊಳಿಸಿ, ಅರ್ಜಿದಾರನಿಗೆ ಮಾತ್ರ ವಿಚಾರಣಾ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಈ ರೀತಿಯ ವ್ಯತ್ಯಾಸಕ್ಕೆ ವಿಚಾರಣಾ ನ್ಯಾಯಾಲಯವು ಸೂಕ್ತ ಕಾರಣ ನೀಡಿಲ್ಲ. ಒಂದೇ ಸಾಕ್ಷ್ಯವನ್ನು ಒಬ್ಬ ಆರೋಪಿಯ ವಿರುದ್ಧ ನಂಬಿ, ಅದೇ ಸಾಕ್ಷ್ಯವನ್ನು ಮತ್ತೊಬ್ಬ ಆರೋಪಿ ವಿರುದ್ಧ ನಂಬದಿದ್ದರೆ ಅದಕ್ಕೆ ಸಮರ್ಪಕ ಕಾರಣ ಇರಬೇಕು. ಇಲ್ಲವಾದರೆ, ಗಂಭೀರ ಲೋಪ ಉಂಟಾಗುತ್ತದೆ ಎಂದು ನ್ಯಾಯಪೀಠ ಅವಲೋಕನ ಮಾಡಿದೆ. 

ಪ್ರಕರಣದ ಹಿನ್ನೆಲೆ 

ಮೃತ ನಾಗರಾಜಪ್ಪ ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಸುಮಾರು 20 ದಿನಗಳಿಂದ ಆರೋಪಿ ತಿರುಮಲ್ಲೇಶನ ಮನೆಯಲ್ಲಿ ವಾಸಿಸುತ್ತಿದ್ದರು. 2016ರ ಡಿಸೆಂಬರ್​ 8ರಂದು ನಾಗರಾಜಪ್ಪ, ತಿರುಮಲ್ಲೇಶ ಮತ್ತು ತಿಮ್ಮಯ್ಯ ಒಟ್ಟಿಗೆ ಮದ್ಯಪಾನ ಮಾಡಿದ್ದು, ಬಳಿಕ ಜಗಳ ನಡೆದಿತ್ತು. ಮರುದಿನ ನಾಗರಾಜಪ್ಪನ ಮೃತದೇಹ ಚರಂಡಿ ಬಳಿ ಪತ್ತೆಯಾಗಿತ್ತು. ತಿರುಮಲ್ಲೇಶ ಮತ್ತು ತಿಮ್ಮಯ್ಯ ಕೊಲೆ ನಡೆಸಿ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net