6 ತಿಂಗಳು ಮೀರಿದ ಅಮಾನತು ಅಕ್ರಮ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ವಿಸ್ತರಿಸಲು ಸಮರ್ಥನೀಯ ಕಾರಣ ಅಗತ್ಯ
  • ಶಿಕ್ಷಕರಿಬ್ಬರ ತಡೆಹಿಡಿದ ವೇತನ ಪಾವತಿಗೆ ಹೈಕೋರ್ಟ್​ ಆದೇಶ
ಬೆಂಗಳೂರು: ಸಮರ್ಥನೀಯ ಕಾರಣಗಳಿಲ್ಲದೆ ಶಿಸ್ತುಕ್ರಮದ ಹೆಸರಿನಲ್ಲಿ ಶಿಕ್ಷಕರನ್ನು 6 ತಿಂಗಳಿಗಿಂತ ಕಾಲ ಅಮಾನತಿನಲ್ಲಿಡುವುದು 1983ರ ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂನೆಯಾಗಿದೆ ಎಂದಿರುವ ಹೈಕೋರ್ಟ್​, 2023ರಿಂದ ಅಮಾನತಿನಲ್ಲಿರುವ ಶಿಕ್ಷಕರಿಬ್ಬರಿಗೆ ತಡೆಹಿಡಿಯಲಾಗಿದ್ದ ಪೂರ್ಣ ವೇತನ ಹಾಗೂ ಇತರ ಸೌಲಭ್ಯಗಳನ್ನು ಪಾವತಿಸುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚಿಸಿದೆ.
ಶಿಕ್ಷಕರಾದ ಎಸ್​.ಒ. ಮಂಜಣ್ಣ ಮತ್ತು ಜಿ.ಸಿ. ಸತೀಶ್​ ಎಂಬವರನ್ನು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಾಪೂಜಿ ವಿದ್ಯಾಸಂಸ್ಥೆಯು 2023ರ ಜು.10ರಂದು ದುರ್ನಡತೆ ಆರೋಪದಲ್ಲಿ ಅಮಾನತುಗೊಳಿಸಿ, ಆಂತರಿಕ ತನಿಖೆಗೆ ಆದೇಶಿಸಿತ್ತು. 
ಈ ಆಮಾನತು ಆದೇಶದ ವಿರುದ್ಧ ಮತ್ತು ಬಾಕಿ ಇರುವ ಜೀವನಾಧಾರ ಭತ್ಯೆ ಪಾವತಿಸಲು ನಿರ್ದೇಶನ ನೀಡುವಂತೆ ಕೋರಿ ಶಿಕ್ಷಕರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಏಕಸದಸ್ಯ ನ್ಯಾಯಾಪೀಠ ಪುರಸ್ಕರಿಸಿತ್ತು. ಈ ತೀರ್ಪಿನ ವಿರುದ್ಧ ಶಾಲಾ ಆಡಳಿತ ಮಂಡಳಿ ಮೇಲ್ಮನವಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿಗಳಾದ ಡಿ.ಕೆ. ಸಿಂಗ್​ ಮತ್ತು ತಾರಾ ವಿತಸ್ತ ಗಂಜು ಅವರಿದ್ದ ವಿಭಾಗೀಯ ನ್ಯಾಯಪೀಠ, ಯಾವುದೇ ಸಮರ್ಥನೀಯ ಕಾರಣಗಳಿಲ್ಲದೆ ಶಿಕ್ಷಕರನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಅಮಾನತಿನಲ್ಲಿಡುವುದು ಕಾನೂನುಬಾಹಿರ. ಕರ್ನಾಟಕ ಶಿಕ್ಷಣ ಕಾಯ್ದೆಯ ನಿಯಮಗಳ ಪ್ರಕಾರ ಶಿಕ್ಷಕ ಅಥವಾ ಸಿಬ್ಬಂದಿಯ ಅಮಾನತು ಆದೇಶವು ಗರಿಷ್ಠ 6 ತಿಂಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಒಂದು ವೇಳೆ ಅಮಾನತು ಅವಧಿಯನ್ನು ವಿಸ್ತರಿಸಬೇಕಾದರೆ ಸರ್ಕಾರದಿಂದ ಸೂಕ್ತ ಅನುಮತಿ ಪಡೆಯುವುದು ಕಡ್ಡಾಯ ಎಂದು ತೀರ್ಪು ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net