ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಕ್ರಮ ರೆಸಾರ್ಟ್ ಮತ್ತು ಹೋಂಸ್ಟೇ, ಸರ್ಕಾರಿ ಭೂಮಿ ಒತ್ತುವರಿ ಕುರಿತು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಮಾತನಾಡಿದರು. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ಕುಮಾರ್, ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪಾ, ಜಿಪಂ ಸಿಇಒ ಮೋನಾರೋತ್, ಎಸ್ಪಿ ಎಂ.ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎ್ ಭಾಸ್ಕರ್ ಮತ್ತು ಇತರರು ಹಾಜರಿದ್ದರು.
ಮೈಸೂರು, ಚಾಮರಾಜನಗರ ಜಿಲ್ಲೆಯ ಅಧಿಕಾರಿಗಳು ಮತ್ತು ರೈತರೊಂದಿಗೆ ಚರ್ಚೆ
ಚಾಮರಾಜನಗರ: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ಕಬಿನಿ ಹಿನ್ನೀರು ಮತ್ತು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಅಕ್ರಮ ರೆಸಾರ್ಟ್‌ಗಳು ಮತ್ತು ಸರ್ಕಾರದ ಭೂಮಿ ಒತ್ತುವರಿಯಾಗಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು 10 ದಿನಗಳ ಒಳಗೆ ಸರ್ವೆ ಮಾಡಲು ವರದಿ ನೀಡಬೇಕು. ಈ ಸಂಬಂಧ ೆ.25ರೊಳಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ತಿಳಿಸಿದರು.
ಒತ್ತುವರಿ, ಅಕ್ರಮ ರೆಸಾರ್ಟ್‌ಗಳು, ಹೋಂ ಸ್ಟೇಗಳ ವಿರುದ್ಧ ಕ್ರಮವಹಿಸಲು ರೈತ ನಾಯಕರು ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕಬಿನಿ ಮತ್ತು ನಾಗರಹೊಳೆಯಲ್ಲಿ 2017ರ ಹಿಂದೆ ನಿರ್ಮಾಣ ಮಾಡಿದ ರೆಸಾರ್ಟ್‌ಗಳಿಗೆ ಅವಕಾಶವಿದೆ. ಅದೇ ರೀತಿ ಬಂಡೀಪುರದಲ್ಲಿ 2012ರ ಹಿಂದೆ ಸ್ಥಾಪಿಸಿದ ರೆಸಾರ್ಟ್‌ಗಳಿವೆ. ನಂತರದ ವರ್ಷಗಳಲ್ಲಿ ನಿರ್ಮಾಣ ಮಾಡಲು ಅವಕಾಶವಿಲ್ಲ. ಹಲವು ಕಡೆ ಗ್ರಾಮ ಪಂಚಾಯಿತಿಯಲ್ಲಿ ಅನುಮತಿ ತೆಗೆದುಕೊಳ್ಳಲಾಗಿದ್ದು, ಇದಕ್ಕೆ ಅನುಮತಿ ಇಲ್ಲ ಎಂದು ಹೇಳಿದರು.
ಕಬಿನಿ ಹಿನ್ನೀರಿನಲ್ಲಿ ಅಕ್ರಮ ರೆಸಾರ್ಟ್‌ಗಳ ಪರಿಶೀಲನೆಗಾಗಿ ಹುಣಸೂರು ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಅವರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ತಂಡ ರಚಿಸಿ ಪರಿಶೀಲನೆ ಮಾಡಿಸಲಾಗಿದೆ. ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಭೂಮಿ ಒತ್ತುವರಿಯಾಗಿರುವ ಕುರಿತು ವಿವಿಧ ಇಲಾಖೆಗಳೊಂದಿಗೆ ಜಂಟಿ ಸರ್ವೆ ಮಾಡಿಸಲಾಗುವುದು. ಗಡಿ ಗುರುತು ಮಾಡಿಕೊಟ್ಟ ಬಳಿಕ ನೀರಾವರಿ ಇಲಾಖೆಯವರು ಒತ್ತುವರಿ ತೆರವುಗೊಳಿಸಲು ಮುಂದಾಗಬೇಕೆಂದು ಸೂಚನೆ ನೀಡಿದರು. ಧಾರ್ಮಿಕ ಕೇಂದ್ರಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದನ್ನು ತಡೆಯಬೇಕು. ಬಿಅರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಭೂಮಿ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ಕುಮಾರ್, ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪಾ, ಜಿಪಂ ಸಿಇಒ ಮೋನಾರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎ್ ಭಾಸ್ಕರ್, ಕಾವೇರಿ ವನ್ಯಜೀವಿಧಾಮದ ಡಿಸಿಎ್ ಸುರೇಂದ್ರ ಮತ್ತು ಇತರರು ಹಾಜರಿದ್ದರು.
ರೆಸಾರ್ಟ್‌ಗಳ ಸರ್ವೆ:
ರೈತರು ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹುಣಸೂರು ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ನೇತೃತ್ವದಲ್ಲಿ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ರೆಸಾರ್ಟ್‌ಗಳ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಸಭೆಯಲ್ಲಿ ಕಾವ್ಯಾರಾಣಿ ವಿವರಣೆ ನೀಡಿ, ಒಟ್ಟು 21 ರೆಸಾರ್ಟ್‌ಗಳಿವೆ. ಇವುಗಳಲ್ಲಿ 8 ರೆಸಾರ್ಟ್‌ಗಳಿಗೆ ಭೇಟಿ ನೀಡಲಾಗಿದೆ. 5ರ ಸರ್ವೆ ಮಾಡಲಾಗಿದೆ. ಪರಿಶೀಲನೆ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯವರ ಭಾಗವಹಿಸುವ ಅಗತ್ಯವಿದ್ದು, ಸರ್ವೆ ಮುಗಿದ ಬಳಿಕ ವರದಿ ನೀಡಲಾಗುವುದು ಎಂದು ತಿಳಿಸಿದರು.
ಪೇಚಿಗೆ ಸಿಲುಕಿದ ಅಧಿಕಾರಿಗಳು:
ರೆಸಾರ್ಟ್‌ಗಳ ನಿರ್ಮಾಣದ ಕುರಿತ ದಾಖಲೆಗಳನ್ನು ಇಟ್ಟುಕೊಂಡು ರೈತರು ಪ್ರಶ್ನೆ ಕೇಳಿದರು. ಆ ದಾಖಲೆಗಳನ್ನು ಕೊಡಿ ಎಂದು ಅಧಿಕಾರಿಗಳು ಕೇಳಿದಾಗ ರೈತರು ಕೊಡಲಿಲ್ಲ. ಇದರಿಂದಾಗಿ ಅಧಿಕಾರಿಗಳು ಸಭೆಯಲ್ಲಿ ಪೇಚಿಗೆ ಸಿಲುಕಿದರು. ರೈತ ನಾಯಕ ಮಂಜು ಕಿರಣ್ ಮಾತನಾಡಿ, ಎಚ್.ಡಿ.ಕೋಟೆ ಭಾಗದಲ್ಲಿ ನಿರ್ಮಾಣ ಮಾಡಿರುವ ಕೆಲವು ರೆಸಾರ್ಟ್‌ಗಳಿಗೆ ಕೊಟ್ಟಿರುವ ನೋಟೀಸ್‌ಗಳನ್ನು ಓದಿ ಇದಕ್ಕೇನು ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು. ರೈತ ಮುಖಂಡ ಹೊನ್ನೂರು ಪ್ರಕಾಶ್, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯಪ್ರದೇಶದಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿರುವುದರ ವರದಿಯನ್ನು ಉಲ್ಲೇಖಿಸಿ ಮಾತನಾಡಿದರು. ಇದಕ್ಕೆ ಸೂಕ್ತ ಉತ್ತರ ಕೊಡುವಲ್ಲಿ ಅಧಿಕಾರಿಗಳ ಬಳಿ ದಾಖಲೆಗಳಿರಲಿಲ್ಲ.
ಪುನರಾರಂಭ ಬೇಡ:
ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಮತ್ತೆ ಸಾರಿ ಶುರು ಮಾಡಬಾರದು ಎಂದು ರೈತ ನಾಯಕ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದರು. ಅರಣ್ಯದೊಳಗಿರುವ ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನಕ್ಕೆ ಭಕ್ತರು ಪೂಜೆ ಮಾಡಲು ಪ್ರವೇಶ ನೀಡುವುದಿಲ್ಲ. ಅದೇ ರೆಸಾರ್ಟ್‌ಗಳಲ್ಲಿ ಪಾರ್ಟಿ ಮಾಡಲು ಅವಕಾಶ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭಾಂಗಣಕ್ಕೆ ಬೀಗ ಜಡಿಯುವಷ್ಟು ಸಿಟ್ಟು:
ಸಭೆ 11 ಗಂಟೆಗೆ ನಿಗದಿಯಾಗಿತ್ತು. ರೈತರು ಮತ್ತು ಅಧಿಕಾರಿಗಳು ಸಭಾಂಗಣಕ್ಕೆ ಆಗಮಿಸಿದ್ದರು. ಆದರೆ ಅಧಿಕಾರಿಗಳನ್ನು ಡಿಸಿ ಕಚೇರಿಯೋಕ್ಕೆ ಕರೆಸಿಕೊಂಡು ಮಾಹಿತಿ ಪಡೆಯಲು ಸಭೆ ನಡೆಸಲಾಯಿತು. ಸಭಾಂಗಣದಲ್ಲಿ ಕಾದು ಬಸವಳಿದ ರೈತ ನಾಯಕರು ಅಧಿಕಾರಿಗಳ ವಿರುದ್ಧ ೊಷಣೆ ಕೂಗಿದರು. ಸಭಾಂಗಣಕ್ಕೆ ಬೀಗ ಹಾಕುವುದಾಗಿ ರೈತ ಮುಖಂಡ ಮೂಕಹಳ್ಳಿ ಮಹದೇವಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ರೈತ ನಾಯಕ ರಘು ಮಾತನಾಡಿ, ಇಬ್ಬರು ರೈತರಿಗೆ ಮಾತ್ರ ಸಭೆಗೆ ಆಗಮಿಸಲು ಪತ್ರ ನೀಡಲಾಗಿದೆ. ಉಳಿದವರಿಗೆ ವಿಷಯ ತಿಳಿಸಿಲ್ಲ. ಹೋರಾಟಗಾರರ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡಿ ಎಂದರು. ಬಳಿಕ ಸಭೆ ಆರಂಭಿಸಿದ ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಮಾಧ್ಯಮದವರು ವಿಡಿಯೋ ಮಾಡಬೇಡಿ ಎಂದರೆ, ರೈತರು ಮಾಧ್ಯಮದವರಿದ್ದರಷ್ಟೇ ಸಭೆ ಮಾಡಿ, ಇಲ್ಲದಿದ್ದರೆ ಮಾಡಲೇಬೇಡಿ ಎಂದ ಬಳಿಕ ಸಭೆ ಶುರುವಾಯಿತು.