ಕಾವೇರಿ 6ನೇ ಹಂತದ ಯೋಜನೆ ಅನುಷ್ಠಾನಕ್ಕೆ ಸಮೀಕ್ಷೆ / VIJAYAPUR
ವಿಜಯಪುರ ಪಟ್ಟಣದ ಹಲವೆಡೆ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆಯ ತಜ್ಞರ ತಂಡ ಪಟ್ಟಣಕ್ಕೆ ಭೇಟಿ ನೀಡಿ ಸ್ಥಳಿಯರಿಂದ ಹಾೂ ಪುರಸಭೆ ಅಧ್ಯಕ್ಷೆ ಭವ್ಯಾ ಮಹೇಶ್ ಮತ್ತು ಮುಖ್ಯಾಧಿಕಾರಿ ಸತ್ಯನಾರಾಯಣಾ ಸದಸ್ಯರಿಂದ ಮಾಹಿತಿ ಪಡೆದರು.
ವಿಜಯಪುರ : ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದ ಕಾವೇರಿ 6ನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆಯ ತಜ್ಞರ ತಂಡ ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿತು.
ಸುಮಾರು 207 ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಗೆ ಸಾಲ ಮಂಜೂರು ಮಾಡುವ ಮೊದಲು, ಪಟ್ಟಣದಲ್ಲಿ ನೀರಿನ ಅನಿವಾರ್ಯತೆ ಮತ್ತು ತಾಂತ್ರಿಕ ಸಿದ್ಧತೆ ಕುರಿತು ತಂಡವು ಸಾರ್ವಜನಿಕರು ಹಾಗೂ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿತು.
ಮನೆ ಮನೆಗೆ ಭೇಟಿ : ಜೈಕಾ ಸಂಸ್ಥೆಯ ಪರಿಸರ ಮತ್ತು ಸಾಮಾಜಿಕ ವಿಷಯ ಪರಿಣತಿಗಳಾದ ಮಿಕಿಕೊ ಅಜುಮ, ಕಾನಾನಿನೊ ಹಾಗೂ ಆರ್ಥಿಕ ವಿಶ್ಲೇಷಕಿ ಇಮಿಕೊ ಪುಜಿತ ಅವರನ್ನೊಳಗೊಂಡ ತಂಡವು ಪುರಸಭೆ ಕಾರ್ಯಾಲಯದಲ್ಲಿ ಸಭೆ ನಡೆಸಿದ ನಂತರ ವಾರ್ಡ್ಗಳಿಗೆ ಭೇಟಿ ನೀಡಿತು. ಚಿಕ್ಕಬಳ್ಳಾಪುರ ರಸ್ತೆಯ ಶುದ್ಧ ಕುಡಿಯುವ ನೀರಿನ ಘಟಕವನ್ನು ಪರಿಶೀಲಿಸಿದ ತಂಡ, ನಂತರ ಸಾರ್ವಜನಿಕರ ಮನೆಗಳಿಗೆ ತೆರಳಿ ಜೀವನಶೈಲಿ ಹಾಗೂ ನೀರಿನ ಬಳಕೆ ಬಗ್ಗೆ ಮಾಹಿತಿ ಪಡೆಯಿತು.
ಸಾರ್ವಜನಿಕರ ಅಳಲು: "ಸದ್ಯ ಪುರಸಭೆಯಿಂದ 15 ದಿನಗಳಿಗೊಮ್ಮೆ ಮಾತ್ರ ನೀರು ಬರುತ್ತಿದೆ. ಅನಿವಾರ್ಯವಾಗಿ ಟ್ಯಾಂಕರ್ ನೀರು ಅವಲಂಬಿಸಿದ್ದೇವೆ. ಕುಡಿಯಲು ಫಿಲ್ಟರ್ ನೀರನ್ನು ತರಬೇಕಾದ ಪರಿಸ್ಥಿತಿ ಇದೆ. ವೈಯಕ್ತಿಕ ನಳವಿದ್ದರೂ ನೀರಿನ ಲಭ್ಯತೆ ಇಲ್ಲ ಎಂಬೆಲ್ಲ ಸಂಕಷ್ಟಗಳನ್ನು ತಜ್ಞರ ತಂಡದ ಮುಂದೆ ಸಾರ್ವಜನಿಕರು ವಿವರಿಸಿದರು.
ಪುರಸಭೆ ಸದಸ್ಯ ನಂದಕುಮಾರ್ ಮಾತನಾಡಿ, ಸಾವಿರಾರು ಅಡಿ ಆಳದ ನೀರು ಜನ-ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಕಾವೇರಿ 6ನೇ ಹಂತದ ಯೋಜನೆಗೆ ಶೀಘ್ರ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ನೀರು ಸರಬರಾಜು ಮಂಡಳಿಯ ಎಇಇ ನಾಗರತ್ನ, ಅಭಿಲಾಷ್, ಜಲಮಂಡಳಿ ಎಇಇ ರಂಗಪ್ಪ, ಪುರಸಭೆ ಸದಸ್ಯರಾದ ಸಿ.ಎಂ.ರಾಮು, ನಾರಾಯಣಸ್ವಾಮಿ, ವಿಮಲಾ ಬಸವರಾಜು, ಪರಿಸರ ಅಬಿಯಂತ ಶೇಖರ್ ರೆಡ್ಡಿ ಹಾಗೂ ಪುರಸಭೆಯ ಸಿಬ್ಬಂದಿಗಳು ಹಾಜರಿದ್ದರು.
ಅಂತರ್ಜಲ ಕುಸಿತದ ಆತಂಕ : ಪಟ್ಟಣದ ಜನಸಂಖ್ಯೆ 50 ಸಾವಿರ ದಾಟಿದೆ. ಯಾವುದೇ ನದಿ ಮೂಲಗಳಿಲ್ಲದೆ ಸಾವಿರಾರು ಅಡಿ ಕೊರೆದರೂ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಎಚ್.ಎನ್.ವ್ಯಾಲಿ ನೀರು ತುಂಬಿದ ಕೆರೆಗಳ ಪಕ್ಕದ ಬಾವಿಗಳೇ ನಮಗೆ ಸದ್ಯದ ಆಧಾರ. ಕಾವೇರಿ ಯೋಜನೆ ಜಾರಿಯಾದರೆ ಮಾತ್ರ ಈ ಭಾಗದ ಜನರ ಆರೋಗ್ಯ ಮತ್ತು ಆರ್ಥಿಕತೆ ಸುಧಾರಿಸಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷೆ ಭವ್ಯಾ ಮಹೇಶ್ ಮತ್ತು ಮುಖ್ಯಾಧಿಕಾರಿ ಸತ್ಯನಾರಾಯಣ ಯೋಜನೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.