ಶರಣಾಗತಿಯೇ ಭಕ್ತಿಯ ಪ್ರಮಾಣಕ ಮುದ್ರೆ

ಶ್ರೀಕೃಷ್ಣ
ಶ್ರೀಕೃಷ್ಣ
Published on

ನಿಜವಾಗಿಯೂ ನಾನು ಅಂತಹ ಭಕ್ತರನ್ನು ಇಷ್ಟಪಡುತ್ತೇನೆ. ತಾವು ಕೇಳುವ ಮೊದಲೇ ಭಗವಂತನು ತಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾನೆ ಎಂದು ಅವರು ನಂಬುತ್ತಾರೆ. ಶಬರಿಯನ್ನು ಅವಳು ಕೇಳುವ ಮೊದಲೇ ಶ್ರೀರಾಮನು ಅನುಗ್ರಹಿಸಲಿಲ್ಲವೇ? ಅವಳು ಮೋಕ್ಷವನ್ನು ಕೇಳದೇ ಇದ್ದಾಗಲೂ ಅವಳಿಗೆ ಮುಕ್ತಿಯನ್ನು ಕರುಣಿಸಲಿಲ್ಲವೇ? ಆದ್ದರಿಂದ, ಭಗವಂತನಿಗೆ ಏನನ್ನೂ ಕೇಳದಿರುವ ಹಾಗೆ ನಿಮ್ಮ ಮನಸ್ಸನ್ನು ತರಬೇತುಗೊಳಿಸಿರಿ. ಏಕೆಂದರೆ, ಅವನಿಂದ ಏನನ್ನಾದರೂ ಬಯಸುವುದು ನಿಮ್ಮನ್ನು ಕುಬ್ಜನನ್ನಾಗಿ ಮಾಡುತ್ತದೆ. ನೀವು ಬೇಡಿಕೊಳ್ಳುವವರಾಗಬಾರದು, ಭಗವಂತನ ಜತೆ ಹೆಗಲಿಗೆ ಹೆಗಲು ಕೊಟ್ಟು ನಡೆಯಬೇಕು.

ಸಾಮಾನ್ಯವಾಗಿ ನಾವು ದೇವಸ್ಥಾನಗಳ ಹೊರಗೆ ಭಿಕ್ಷುಕರನ್ನು ಕಾಣುತ್ತೇವೆ. ಒಂದು ಸಲ, ದೇವಸ್ಥಾನದಿಂದ ಹೊರಗೆ ಬಂದ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿರುವ ಭಿಕ್ಷುಕನನ್ನು ಕೇಳಿದ, ‘ನೀನೆಂಥ ಮನುಷ್ಯ? ಏಕೆ ಭಿಕ್ಷೆ ಬೇಡುತ್ತೀಯ? ಬದಲಾಗಿ, ಏನಾದರೂ ಕೆಲಸ ಮಾಡಿ ಗಳಿಸಬಾರದೇ?’ ಎಂದು. ಆಗ ಭಿಕ್ಷುಕ ಆತನಿಗೆ ಹೇಳಿದ, ‘ನನಗೂ ನಿಮಗೂ ಏನು ವ್ಯತ್ಯಾಸ? ನಾನು ದೇವಸ್ಥಾನದ ಹೊರಗೆ ಬೇಡುತ್ತೇನೆ. ನೀವು ದೇವಸ್ಥಾನದ ಒಳಗೆ ದೇವರನ್ನು ಬೇಡುತ್ತೀರಿ. ಹಾಗಾಗಿ ನಾವಿಬ್ಬರೂ ಭಿಕ್ಷುಕರೇ ಅಲ್ಲವೇ?’ ಎಂದು!

ಸಂಪೂರ್ಣತೆಯ ಪರಿಕಲ್ಪನೆ:

ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ |

ಪೂರ್ಣಸ್ಯ ಪೂರ್ಣಾಮಾದಾಯ ಪೂರ್ಣಮೇವಾವಶಿಷ್ಯತೇ ||

ಓಂ ಶಾಂತಿಃ ಶಾಂತಿಃ ಶಾಂತಿಃ

(ಈಶಾವಾಸ್ಯೋಪನಿಷತ್ತು, ಶಾಂತಿ ಮಂತ್ರ)

ಆ (ಅವ್ಯಕ್ತ) ದೈವವು ಪೂರ್ಣ, ಈ ವ್ಯಕ್ತ ಸೃಷ್ಟಿಯೂ ಪೂರ್ಣ, ಪೂರ್ಣದಿಂದ ಪೂರ್ಣವು ಆವಿರ್ಭವಿಸಿದೆ. ಸಂಪೂರ್ಣ ವ್ಯಕ್ತ ಜಗತ್ತು, ಅದರಿಂದ ಹೊರಬಂದಾಗಲೂ, ಆ ದೈವವು ಆಗಲೂ ಪೂರ್ಣವಾಗಿ ಇರುತ್ತದೆ.

ಭಗವಂತನ ನಿಜವಾದ ಭಕ್ತನು ಯಾವಾಗಲೂ, ನಾನು ಸಂಪೂರ್ಣನಾಗಿದ್ದೇನೆ. ಭಗವಂತನ ದಿವ್ಯವಿನ್ಯಾಸದಂತೆ ಮತ್ತು ಸಂಕಲ್ಪದಂತೆ, ನನ್ನ ಅಗತ್ಯಗಳೆಲ್ಲವೂ ಈಡೇರಿವೆ ಮತ್ತು ಈಗ ನನ್ನಲ್ಲಿ ಇರುವುದಕ್ಕಿಂತ ಹೆಚ್ಚು ನನಗೇನೂ ಬೇಡ; ಎಲ್ಲವೂ ಸಂಪೂರ್ಣವಾಗಿದೆ. ನನಗಿಷ್ಟು ಸಾಕು ಎಂಬ ಯೋಚನೆಯಲ್ಲಿ ಮುಳುಗಿರುತ್ತಾನೆ.

ಹೋಲಿಕೆ ಬೇಡ: ಯಾರೊಂದಿಗೂ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಇಂಥ ಈ ಕ್ಷುಲ್ಲಕ ಆಲೋಚನೆಗಳು ನಿಮ್ಮನ್ನು ಕುಬ್ಜರನ್ನಾಗಿಸುತ್ತವೆ; ಭಿಕ್ಷುಕರನ್ನಾಗಿಸುತ್ತವೆ. ‘ಅಣೋರಣೀಯಾನ್ ಮಹತೋ ಮಹೀಯಾಯಾನ್.’ ನಾವು ಭವ್ಯಕ್ಕಿಂತಲೂ ಭವ್ಯವಾಗಿರಬೇಕು ಹಾಗೂ ಅಣುವಿಗಿಂತಲೂ ಚಿಕ್ಕದಾಗಿರಬೇಕು, ವಿನಯವಂತಿಕೆ ವಿಚಾರದಲ್ಲಿ ಅಣುವಿಗಿಂತಲೂ ಚಿಕ್ಕವನಾಗಿಯೂ, ಸತ್ಯನಿಷ್ಠೆಯಲ್ಲಿ ದಿಗಂತವನ್ನೂ ದಾಟುವಷ್ಟು ದೊಡ್ಡವನಾಗಬೇಕು.

ಭಗವಂತನು ಇಡೀ ವಿಶ್ವವನ್ನು ಭಗವಂತನು ಎಷ್ಟು ಸುಂದರವಾಗಿ ನಿರ್ವಹಿಸುತ್ತಿದ್ದಾನೆ ನೋಡಿ. ಎಲ್ಲದರ ಯೋಗಕ್ಷೇಮವನ್ನು ಸಮರ್ಥವಾಗಿ ನೋಡಿಕೊಳ್ಳುತ್ತಿದ್ದಾನೆ. ಒಂದು ಸಣ್ಣ ಇರುವೆಯಿಂದ ಹಿಡಿದು ಚಕ್ರವರ್ತಿಯವರೆಗೆ, ಎಲ್ಲರ ಅಗತ್ಯವನ್ನೂ ಪೂರೈಸಿ ಪರಿಪೂರ್ಣವಾಗಿರಿಸುತ್ತಿದ್ದಾನೆ. ಹಾಗಿರುವಾಗ, ಅವನನ್ನು ಏನಾದರೂ ಕೇಳುವ ಅಗತ್ಯವಾದರೂ ನಿಮಗೆ ಎಲ್ಲಿದೆ? ನಿಮಗೆ ಬೇಕಾದುದನ್ನು ಅವನು ನಿಮಗೆ ನೀಡುವುದಿಲ್ಲವೇ? ನೀವು ಬಯಸಿದ್ದನ್ನು ಅವನು ನಿಮಗೆ ನೀಡದಿದ್ದರೆ, ಅದು ನಿಮಗೆ ಅವಶ್ಯಕತೆಯಿಲ್ಲದ ವಸ್ತು ಎಂದರ್ಥ. ಇದು ಎಷ್ಟು ಸರಳವಾದ ವಿಷಯ ಎಂದರೆ, ನಿಮಗೇನು ಬೇಕೋ ಅದು ನಿಮಗಿಂತ ಅವನಿಗೇ ಹೆಚ್ಚು ಗೊತ್ತು. ಈ ವಿಧದ ಭಗವಂತನ ಮೇಲಿನ ಅವಲಂಬನೆಯೇ ನಿಜವಾದ ಸಂಪೂರ್ಣ ಶರಣಾಗತಿ. ಕೆಲವು ಜನರು ತಾವು ಶೇ. 50ರಷ್ಟು ಭಗವಂತನಲ್ಲಿ ಶರಣಾಗಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಶರಣಾಗತಿ ಎನ್ನುವುದು ಭಾಗಶಃ ಇರುವುದಿಲ್ಲ. ಒಂದೋ ನೀವು ಸಂಪೂರ್ಣವಾಗಿ ಶರಣಾಗುತ್ತೀರಿ ಅಥವಾ ಶರಣಾಗುವುದಿಲ್ಲ ಅಷ್ಟೇ.

ಶರಣಾಗತಿಯ ಪಥದಲ್ಲಿ ಯಶಸ್ವಿಯಾಗಿ ಪಯಣಿಸಬೇಕೆಂದರೆ, ನಿಮ್ಮಲ್ಲಿರುವ ಪಾಶವೀ ಗುಣಗಳನ್ನು ತ್ಯಜಿಸಬೇಕಾಗುತ್ತದೆ. ‘ಆಹಾರ ನಿದ್ರಾ ಭಯ ಮೈಥುನಂ ಚ ಸಾಮಾನ್ಯಮೇತತ್ ಪಶುಭಿರ್ನರಾಣಾಂ’ (ಹಿತೋಪದೇಶ 0.25). ಆಹಾರ, ನಿದ್ರೆ, ಭಯ ಹಾಗೂ ಕಾಮ, ಇವೆಲ್ಲವೂ ಪಶು ಪ್ರಾಣಿಗಳು ಮತ್ತು ಮನುಷ್ಯರಲ್ಲಿ ಸಾಮಾನ್ಯವಾಗಿರುತ್ತವೆ.

ಭಗವಂತನು ಯಾವಾಗಲೂ ನಿಮ್ಮೊಂದಿಗೆ ಇದ್ದೇ ಇರುತ್ತಾನೆ ಎಂಬ ವಿಶ್ವಾಸವಿರಿಸಿಕೊಂಡು, ಎಂಥದ್ದೇ ಅನಿರೀಕ್ಷಿತ ಸನ್ನಿವೇಶ ಎದುರಾದರೂ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುವುದೇ ಶರಣಾಗತಿ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತದ ಹಣವಿದ್ದರೆ ಅದು ಶರಣಾಗತಿಯೇ? ನಿಮಗೆ ಹೆಚ್ಚಿನ ಸಂಖ್ಯೆಯ ಸ್ನೇಹಿತರು ಬಂಧುಗಳು ಇರುವುದು ಶರಣಾಗತಿಯೇ? ಅಲ್ಲವೇ ಅಲ್ಲ. ಈ ಯಾವುದೇ ಸನ್ನಿವೇಶಗಳಲ್ಲಿಯೂ ನೀವು ನಿಜವಾಗಿ ಶರಣಾಗತರಾಗಿಲ್ಲ. ಅವು ಯಾವುವೂ ಶರಣಾಗತಿಯ ಲಕ್ಷಣಗಳಲ್ಲ.

ದ್ರೌಪದಿಯು ತೊಂದರೆಯಲ್ಲಿದ್ದಾಗ, ಮೊದಲು ಆಕೆ ತನ್ನ ಗಂಡಂದಿರಲ್ಲಿ ನೆರವನ್ನು ಯಾಚಿಸಿದಳು. ಆಗ, ಅವಳಿನ್ನೂ ಭಗವಂತನಲ್ಲಿ ಶರಣಾಗಿರಲಿಲ್ಲ. ನಂತರ, ಅವಳು ನೆರವಿಗಾಗಿ ತಿರುಗಿದ್ದು ಕುರುವಂಶದ ಹಿರಿಯರ ಕಡೆಗೆ. ಆಗಲೂ ಅವಳಿಗೆ ಭಗವಂತನ ನೆನಪಾಗಲೇ ಇಲ್ಲ. ತಾನು ಇನ್ನೂ ಭಗವಂತನಲ್ಲಿ ಶರಣಾಗದ ಕಾರಣ, ತನ್ನನ್ನು ರಕ್ಷಿಸಿಕೊಳ್ಳಲು ತನ್ನ ಸ್ವಂತ ಶಕ್ತಿಯನ್ನು ಬಳಸಿ ಸೆಣಸಲು ಯತ್ನಿಸಿದಳು. ನೆರವಿಗಾಗಿ ತನ್ನ ಎಲ್ಲ ಪ್ರಯತ್ನಗಳು ವಿಫಲವಾದಾಗ, ಅವಳು ಶ್ರೀಕೃಷ್ಣನ ಮೊರೆಹೊಕ್ಕಳು. ತನಗೆ ಅವಮಾನವಾಗುವ ಮೊದಲ ಹಂತದಲ್ಲಿಯೇ ಅವಳು ಶ್ರೀಕೃಷ್ಣನಿಗೆ ಶರಣಾಗುತ್ತಿದ್ದರೆ, ಅವಳಿಗೆ ಆ ಪೀಡನೆಯಿಂದ ಮುಕ್ತಿ ದೊರಕುತ್ತಿತ್ತು. ಭಗವಂತನು ಅವಳಿಗೆ ನಿಜವಾದ ಶರಣಾಗತಿಯ ಮಹತ್ವವನ್ನು ತಿಳಿಸಲು ಹೀಗೆ ಮಾಡಿದ. ಅದೇ ರೀತಿಯಲ್ಲಿ, ಮನುಷ್ಯರು ಸಹ. ಯಾರೂ ನೆರವಿಗೆ ಬಾರದೇ ಇದ್ದಾಗ ಕೊನೆಗೆ ದೇವರ ಬಳಿ ಶರಣಾಗುತ್ತಾನೆ.

ಯಾರು ಸಂಪೂರ್ಣವಾಗಿ ಶರಣಾಗತನಾಗಿ, ‘ಭಗವಂತನಿಗೆ ಎಲ್ಲವೂ ಗೊತ್ತು ಮತ್ತು ಅವನು ಎಲ್ಲವನ್ನೂ ನೋಡಿಕೊಳ್ಳುತ್ತಾನೆ’ ಎನ್ನುವ ದೃಢವಿಶ್ವಾಸ ಇರಿಸಿಕೊಳ್ಳುವನೋ ಅವನೇ ನಿಜವಾದ ಭಕ್ತ. ಅನಿರೀಕ್ಷಿತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ, ನೀವು ಯಾವುದೇ ರೀತಿಯಲ್ಲಿ ವಿಚಲಿತರಾಗದೆ ಶಾಂತಮನಸ್ಥಿತಿಯನ್ನು ಕಾಯ್ದುಕೊಂಡಿದ್ದರೆ, ನಿಮ್ಮ ಭಕ್ತಿಯು ಮಾಗುತ್ತಿದೆ ಎಂದರ್ಥ. ಯಕಶ್ಚಿತ್ ಸಣ್ಣ ಸಮಸ್ಯೆ ಎದುರಾದಾಗ, ವಿಚಲಿತರಾದರೆ ನಿಮ್ಮ ಭಕ್ತಿಯು ಇನ್ನೂ ಕಾಯಿಯಾಗಿಯೇ ಇದೆ, ಮಾಗಿಲ್ಲ ಎಂದು ಅರ್ಥ. ಯಾರು ಭಯರಹಿತರಾಗಿರುತ್ತಾರೋ, ಅವರಿಗೆ ಸತ್ಯದ ಅರಿವು ಸಾಧ್ಯ. ಮತ್ತು ಯಾರು ಸತ್ಯವನ್ನು ಅರಿತಿರುತ್ತಾರೋ, ಅವರು ಆನಂದದ ಸ್ಥಿತಿಯಲ್ಲಿ ಇರಬಲ್ಲರು. ಉಳಿದವರು ಹೆಚ್ಚೆಂದರೆ, ತಾತ್ಕಾಲಿಕ ಸಂತೋಷಗಳನ್ನು ಅನುಭವಿಸಬಹುದು.

ಒಬ್ಬ ವಿದ್ಯಾರ್ಥಿಯು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹೋಗಿ ನಂತರ ವಿಶ್ವವಿದ್ಯಾಲಯಕ್ಕೆ ಮುಂಬಡ್ತಿ ಹೊಂದುತ್ತಾನೆ. ನೀವು ಪ್ರಾಥಮಿಕ ಶಾಲೆಯಲ್ಲಿಯೇ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಮುಂದಿನ ಗ್ರೇಡುಗಳಿಗೆ ಹೋಗಲೇಬೇಕು. ಹೀಗೆ ಪ್ರತಿ ಕ್ಷಣ ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಬೇಕು. ‘ನಾನು ಶರಣಾಗತಿಯತ್ತ ಚಲಿಸುತ್ತಿರುವೆನೇ? ನನಗಿನ್ನೂ ಭಯ ಅಂಜಿಕೆಗಳು ಇವೆಯೇ? ಭಾವಾತಿರೇಕಗಳಿಗೆ ನಾನು ಜೋತುಬೀಳುತ್ತಿದ್ದೇನೆಯೇ?’ ಎಂದು ನಿಮ್ಮನ್ನು ತಪಾಸಣೆ ಮಾಡಿಕೊಳ್ಳಿ. ಯಾವಾಗ ನೀವು ಭಗವಂತನಿಗೆ ಸಂಪೂರ್ಣ ಶರಣಾಗತಿಯಾಗಿ ಅಂಜಿಕೆ ಇಲ್ಲದ ಸ್ಥಿತಿಯನ್ನು ಹೊಂದುವಿರೋ ಆಗ ಮಾತ್ರ ದೇವರು ಮತ್ತು ಅಧ್ಯಾತ್ಮವನ್ನು ಅರ್ಥ ಮಾಡಿಕೊಳ್ಳುತ್ತೀರಿ.

-(ಲೇಖಕರು ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net