

ಮಡಿಕೇರಿ:
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಇತ್ತೀಚೆಗೆ ಉತ್ತರ ಕರ್ನಾಟಕದ ಐತಿಹಾಸಿಕ ವಾಡೆ ಮನೆಗಳ ಅಧ್ಯಯನ ಪ್ರವಾಸ ಏರ್ಪಡಿಸಲಾಗಿತ್ತು.
ಅರೆಭಾಷಿಕರ ಸಾಂಪ್ರದಾಯಿಕ ಐನ್ ಮನೆಗಳು ಹಾಗೂ ಉತ್ತರ ಕರ್ನಾಟಕದ ವಾಡೆ ಮನೆಗಳ ನಡುವಿನ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಸಂಬಂಧಗಳ ತುಲನಾತ್ಮಕ ಅಧ್ಯಯನದ ಉದ್ದೇಶದಿಂದ ಪ್ರವಾಸ ಆಯೋಜಿಸಲಾಗಿತ್ತು.
ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ನೇತೃತ್ವದ ಈ ಅಧ್ಯಯನ ತಂಡ ಬೆಳಗಾವಿ ಜಿಲ್ಲೆಯ ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿತು. ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿರುವ ಸುಮಾರು 850 ವರ್ಷಗಳ ಸುದೀರ್ಘ ಇತಿಹಾಸವಿರುವ ಭವ್ಯ ಚಚಡಿ ದೇಸಾಯಿ ವಾಡೆಯನ್ನು ತಂಡವು ಪ್ರಮುಖವಾಗಿ ವೀಕ್ಷಿಸಿತು.
ಬಳಿಕ ಉದಯ ಕುಮಾರ್ ಅವರ ವಶದಲ್ಲಿರುವ, ರುದ್ರಾಪುರ ವಾಡೆ ಹಾಗೂ ಕಿತ್ತೂರು ರಾಜಮನೆತನದೊಂದಿಗೆ ನೇರ ರಕ್ತಸಂಬಂಧ ಹೊಂದಿರುವ ತಲ್ಲೂರು ವಾಡೆಗೆ ಭೇಟಿ ನೀಡಲಾಯಿತು. ಬೈಲಹೊಂಗಲ ತಾಲೂಕು ನೇಗಿನಹಾಳ ಗ್ರಾಮದ ಕೇಸರಕೊಪ್ಪದಲ್ಲಿರುವ ಕಿತ್ತೂರು ಶಾಸಕ ಬಾಬೂಸಾಹೇಬ ಪಾಟೀಲರ 400 ವರ್ಷ ಹಳೆಯ ವಾಡೆಗೂ ತಂಡ ಭೇಟಿ ನೀಡಿತು.
ಅಕಾಡೆಮಿ ಸದಸ್ಯ ಸಂಚಾಲಕ ಡಾ. ಎನ್.ಎ. ಜ್ಞಾನೇಶ್ ನೇತೃತ್ವದಲ್ಲಿ ನಡೆದ ಈ ಪ್ರವಾಸದಲ್ಲಿ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ಪಿ.ಎಸ್. ಕಾರ್ಯಪ್ಪ, ಸೂದನ್ ಎಸ್. ಈರಪ್ಪ, ಪಿ.ಎಂ. ಸಂದೀಪ್, ಲೋಕೇಶ್ ಊರುಬೈಲು, ವಿನೋದ್ ಮೂಡಗದ್ದೆ, ಮೋಹನ್ ಪೊನ್ನಚನ ಹಾಗೂ ಪ್ರಕಾಶ್ ಕುದುಪಜೆ ಭಾಗವಹಿಸಿದ್ದರು.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ. ವೈ. ದಾಸನಕೊಪ್ಪ ಹಾಗೂ ರುದ್ರಾಪುರ ಪಿಡಿಒ ವಿಜಯ ಕುಮಾರ್ ಅಂಗಡಿ ಅಧ್ಯಯನ ತಂಡಕ್ಕೆ ಮಾರ್ಗದರ್ಶನ ನೀಡಿದರು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.