ದೊಡ್ಡಬಳ್ಳಾಪುರದ ಸರ್ಕಾರಿ ಡಾ.ಅಂಬೇಡ್ಕರ್ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕೌಶಲ ಮತ್ತು ಮಾನಸಿಕ ಒತ್ತಡ ನಿವಾರಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶ್ವಜ್ಞಾನಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ನಾರಾಯಣಪ್ಪ, ಕಾರ್ಯದರ್ಶಿ ರಾಜೇಂದ್ರ, ಖಜಾಂಚಿ ಎಂ.ನಾರಾಯಣಪ್ಪ, ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರಾದ ರಾಧಾಮಣಿ, ಶಿವಪ್ಪ, ರೂಬಿಯಾ, ನರಸಪ್ಪ, ಸತೀಶ್ ಇತರರು ಇದ್ದರು.
ದೊಡ್ಡಬಳ್ಳಾಪುರ : ಪರೀಕ್ಷೆಯು ವಿದ್ಯಾರ್ಥಿಗಳ ಸಾಮರ್ಥ್ಯ ಪ್ರದರ್ಶನಕ್ಕಿರುವ ಉತ್ತಮ ಅವಕಾಶ. ಹಾಗಾಗಿ ಯಾವ ವಿದ್ಯಾರ್ಥಿಗಳಿಗೂ ಪರೀಕ್ಷೆ ಭಯ ಬೇಡ ಎಂದು ಕನ್ನಡ ವೈದ್ಯ ಬರಹಗಾರರ ಸಮಿತಿ ಅಧ್ಯಕ್ಷೆ ಡಾ.ಇಂದಿರಾ ಹೇಳಿದರು.
ನಗರದ ಸರ್ಕಾರಿ ಡಾ.ಅಂಬೇಡ್ಕರ್ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಲ್ಲಿ ವಿಶ್ವಜ್ಞಾನಿ ಸೇವಾ ಟ್ರಸ್ಟ್ನಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಕೌಶಲ ಮತ್ತು ಮಾನಸಿಕ ಒತ್ತಡ ನಿವಾರಣೆ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬದುಕಿನಲ್ಲಿ ಅನೇಕ ಕಷ್ಟ ಎದುರಿಸಿ ಸಾಧನೆ ಮಾಡಿದ ಸಾಧಕರಿದ್ದಾರೆ. ಛಲ ಬಿಡದೇ ಸಾಧಿಸಿದ ವ್ಯಕ್ತಿಗಳೇ ನಮಗೆ ಸ್ಫೂರ್ತಿ ಮತ್ತು ಆದರ್ಶ. ಪರೀಕ್ಷೆ ಬಗ್ಗೆ ನಕಾರಾತ್ಮಕತೆ ಬಿಟ್ಟು ಸಕಾರಾತ್ಮಕ ಆಲೋಚನೆ ಮಾಡುವುದರಿಂದ ಭಯ ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತದೆ. ಪರೀಕ್ಷೆಯನ್ನು ಭಯವಿಲ್ಲದೆ, ಆತ್ಮವಿಶ್ವಾಸ ಮತ್ತು ಸಂತೋಷದಿಂದ ಬರೆಯಬೇಕು. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ನಗರದ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢಶಾಲೆ ಹಿರಿಯ ಶಿಕ್ಷಕ ಎಚ್.ಎನ್.ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪಾಠ ಕೇಳಬೇಕು. ಪಠ್ಯಪುಸ್ತಕವನ್ನು ಶ್ರದ್ಧೆಯಿಂದ ಓದಬೇಕು. ಈ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬಹುದು. ಆತ್ಮವಿಶ್ವಾಸ ಬೆಳೆಸಿಕೊಂಡು ಕಠಿಣ ಪರಿಶ್ರಮ ಮತ್ತು ಸತತ ಅಭ್ಯಾಸ ಮಾಡಿದಾಗ ಯಶಸ್ಸು ಸಾಧ್ಯ ಎಂದು ಹೇಳಿದರು.