ವಿದ್ಯಾರ್ಥಿಗಳು ಗಣಿತ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಿ

ಜಿ.ಪಂ. ಸಿಇಒ ಗಜಾನನ ಬಾಲೆ
ಜಿ.ಪಂ. ಸಿಇಒ ಗಜಾನನ ಬಾಲೆ
Published on

ಪ್ರಮುಖ ಮುಖ್ಯಾಂಶಗಳು

  • ಜಿ.ಪಂ. ಸಿಇಒ ಗಜಾನನ ಬಾಲೆ ಸಲಹೆ
  • ಸರ್ಕಾರಿ ಶಾಲೆಗಳಿಗೆ ಭೇಟಿ
ಕೂಡಲಸಂಗಮ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಮಂಗಳವಾರ ಕೂಡಲಸಂಗಮ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ತರಗತಿ ಕೊಠಡಿಗಳನ್ನು ವೀಕ್ಷಿಸಿದರು.
10ನೇ ತರಗತಿಯ ಮೂರು ವರ್ಗಗಳಿಗೆ ತೆರಳಿ ಮಕ್ಕಳ ಕಲಿಕೆಯನ್ನು ಪರಿಶೀಲಿಸಿದರು. 10ನೇ ಬಿ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಸಮೀಕರಣ ಲೆಕ್ಕ ಬಿಡಿಸಲು ಹೇಳಿ, ಲೆಕ್ಕಗಳನ್ನು ಪರಿಶೀಲಿಸಿ, ಗಣಿತ ಕಲಿಕೆಗೆ ಆದ್ಯತೆ ನೀಡಲು ಸಲಹೆ ನೀಡಿದರು.
ನಂತರ 10ನೇ ಎ ತರಗತಿಯಲ್ಲಿ ಕನ್ನಡ ಪಾಠ ವೀಕ್ಷಿಸಿದರು, 10ನೇ ಸಿ ತರಗತಿಯಲ್ಲಿ ಇಂಗ್ಲಿಷ್ ಪಾಠ ಅವಲೋಕಿಸಿದರು. ಎಲ್ಲ ತರಗತಿಯಲ್ಲಿ 625ಕ್ಕೆ 625 ಅಂಕ ಪಡೆಯುವ ವಿದ್ಯಾರ್ಥಿಗಳ ಹೆಸರು ಪಡೆದರು. ಮುಂದಿನ ಗುರಿ, ಅಭ್ಯಾಸ ಮಾಡುವ ವಿಧಾನ, ಉತ್ತಮ ಅಂಕ ಪಡೆಯುವಂತೆ ಮಾರ್ಗದರ್ಶನ ಮಾಡಿದರು. ತಾವೂ ಕನ್ನಡ ಮಾಧ್ಯಮದಲ್ಲಿಯೇ ಅಧ್ಯಯನ ಮಾಡಿರುವುದಾಗಿ ತಿಳಿಸಿದ ಅವರು, 625ಕ್ಕೆ 625 ಅಂಕ ಪಡೆದರೆ ಸ್ವತಃ ನಿಮ್ಮ ಶಾಲೆಗೆ ಬಂದು ಸನ್ಮಾನ ಮಾಡುವುದಾಗಿ ಪ್ರೋತ್ಸಾಹ ತುಂಬಿದರು.
ಎಸ್‌ಡಿಎಂಸಿ ಅಧ್ಯಕ್ಷ ಮುತ್ತಣ್ಣ ಕುರಿ, ಮುಖ್ಯ ಶಿಕ್ಷಕಿ ಎಸ್.ಬಿ. ಈಟಿ ಈ ವರ್ಷ 610 ವಿದ್ಯಾರ್ಥಿಗಳು ದಾಖಲಾಗಿದ್ದು, ಮಕ್ಕಳು ಕುಳಿತುಕೊಳ್ಳಲು ತರಗತಿ ಕೊಠಡಿಗಳು ಇಲ್ಲ, ಸಭಾಂಗಣ, ಗಣಕಯಂತ್ರ ಕೊಠಡಿಯಲ್ಲಿ ಪಾಠ ಮಾಡಲಾಗುತ್ತಿದೆ. ತರಗತಿ ಕೊಠಡಿ ಕೊರತೆ ಇದೆ ಕೊಠಡಿ ನಿರ್ಮಿಸುವಂತೆ ವಿನಂತಿಸಿದರು. ಅಧಿಕಾರಿಗಳೊಂದಿಗೆ ಮಾತನಾಡಿ ನಾಲ್ಕು ಕೊಠಡಿ ನಿರ್ಮಿಸಿ ಕೊಡುವ ಭರವಸೆ ನೀಡಿದರು.
ಮಧ್ಯಾಹ್ನ ಬಿಸಿ ಊಟವನ್ನು ವಿದ್ಯಾರ್ಥಿಗಳು ಬಯಲಿನಲ್ಲಿ ಕುಳಿತು ಮಾಡುವರು, ಮಳೆ, ಬಿಸಿಲು ಇದ್ದಾಗ ತೊಂದರೆ ಆಗುವುದು ಶಾಲಾ ಮುಂಭಾಗದಲ್ಲಿ ತಗಡಿನ ಶೀಟ್ ಹಾಕುವಂತೆ ವಿನಂತಿಸಿದರು.
ಶಿಕ್ಷಣ ಇಲಾಖೆ ಅನುದಾನದಲ್ಲಿ ನಿರ್ಮಿಸುವಂತೆ ಉಪ ನಿರ್ದೇಶಕರಿಗೆ ಸೂಚಿಸುತ್ತೇನೆ ಎಂದು ಸಿಇಒ ಬಾಲೆ ಭರವಸೆ ನೀಡಿದರು.
ಸರ್ಕಾರಿ ಶಾಲೆಯಲ್ಲಿ ಒಂದೊಂದು ತರಗತಿಗೆ ಮೂರು ವಿಭಾಗ ಇರುವುದು ಹೆಮ್ಮೆಯ ಸಂಗತಿ. ಓದುವ ಅಭಿರುಚಿ ಇರುವ ಮಕ್ಕಳು ಇದ್ದಾರೆ. ಉತ್ತಮವಾಗಿ ಪಾಠ ಮಾಡಿ ಉತ್ತಮ ಫಲಿತಾಂಶ ಬರುವಂತೆ ಮಾಡಿ ಎಂದು ಶಿಕ್ಷಕರಿಗೆ ತಿಳಿಸಿದರು.
ಶಾಲಾ ಭೇಟಿಗೂ ಪೂರ್ವದಲ್ಲಿ ಕೂಡಲಸಂಗಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯನ್ನು ವೀಕ್ಷಿಸಿದರು. ಭೇಟಿಯ ವೇಳೆಯಲ್ಲಿ ವೈದ್ಯರು ಇರಲಿಲ್ಲ. ಕರೆ ಮಾಡಿ ಮಾಹಿತಿ ಪಡೆದರು. ನಂತರ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಮಾರಾಟ ಮಳಿಗೆಯ ಸಂಜೀವಿನಿ ಮಹಿಳಾ ಒಕ್ಕೂಟದ ಸ್ವಸಹಾಯ ಸಂಘದ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಸ್ತೂರಿ ಬಾ ಬಾಲಿಕಾ ವಸತಿ ನಿಲಯದ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಕೂಡಲಸಂಗಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ ಹಿರೇಮಠ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net