ವಿದ್ಯಾರ್ಥಿಗಳಿಗೆ ಉತ್ತಮ ಸವಲತ್ತುಗಳಿದ್ದರೂ ಓದಿನಲ್ಲಿ ನಿರಾಸಕ್ತಿ

ಹೊಳೆನರಸೀಪುರ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ 2025-26 ಸಾಲಿನ ಸಾಂಸ್ಕೃತಿ ಸಮಾರೋಪ ಸಮಾರಂಭವನ್ನು ಹಾಸನದ ಮಹಿಳಾ ಸರ್ಕಾರಿ ಪ್ರಧಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಕವಿತಾ ಹಾಗೂ ಗಣ್ಯರು ಚಾಲನೆ ನೀಡಿದರು.
ಹೊಳೆನರಸೀಪುರ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ 2025-26 ಸಾಲಿನ ಸಾಂಸ್ಕೃತಿ ಸಮಾರೋಪ ಸಮಾರಂಭವನ್ನು ಹಾಸನದ ಮಹಿಳಾ ಸರ್ಕಾರಿ ಪ್ರಧಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಕವಿತಾ ಹಾಗೂ ಗಣ್ಯರು ಚಾಲನೆ ನೀಡಿದರು.
Published on
ಹೊಳೆನರಸೀಪುರ: ಸರ್ಕಾರಗಳು ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಿದರೂ ಬಹಳಷ್ಟು ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳದೆ ಇರುವುದನ್ನು ನಾವು ನೋಡುತ್ತಿದ್ದೇವೆ ಎಂದು ಹಾಸನದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಜಿ.ಕವಿತಾ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ , ಎನ್‌ಎಸ್‌ಎಸ್, ರೇಂಜರ್ಸ್ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ವಿದ್ಯಾಭ್ಯಾಸಕ್ಕೂ ಈ ಹಿಂದಿನ ಮೂವತ್ತು ವರ್ಷಗಳ ವಿದ್ಯಾಭ್ಯಾಸಕ್ಕೂ ಭಾರಿ ಅಜಗಜಾಂತರ ವ್ಯತ್ಯಾಸವಿದೆ. ಹಿಂದೆ ವ್ಯಾಸಂಗ ಮಾಡುವಾಗ ಸರಿಯಾದ ವ್ಯವಸ್ಥೆಯೇ ಇರಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಹಲವು ಜನರಿಗೆ ಶಿಕ್ಷಣ ದೊರೆತಿದ್ದೇ ದೊಡ್ಡ ವಿಷಯವಾಗಿತ್ತು. ಪ್ರಾಥಮಿಕದ ನಂತರ ಹೆಚ್ಚಿನ ವ್ಯಾಸಂಗಕ್ಕೆ ನಗರ ಪ್ರದೇಶಳಿಗೆ ಬರುವಾಗ ಇದ್ದಿದ್ದೇ ಕೆಲವೇ ಕೆಲವು ಸವಲುತ್ತುಗಳು. ಈಗಿನಂತೆ ವಿವಿಧ ಭಕ್ಷೃಗಳ ತಿಂಡಿಗಳು ಇರಲಿಲ್ಲ. ಅಂದು ನಮ್ಮ ಪಾಲಕರು ಎರಡು ಒಣಕಲು ರಾಗಿ ರೊಟ್ಟಿ ಕೊಟ್ಟು ಕಳುಹಿಸುತ್ತಿದ್ದ ಕಾಲವದು. ನಾವು ತಂದ ಆ ರಾಗಿ ರೊಟ್ಟಿ ಬೆಳಗ್ಗೆ ತಿಂದು ಅದನ್ನೆ ಮತ್ತೆ ಮಧ್ಯಾಹ್ನವೂ ತಿನ್ನಬೇಕಾದ ಕ್ಲಿಷ್ಟ ಪರಿಸ್ಥಿತಿ ಇತ್ತು. ಜತೆಗೆ ನಮ್ಮ ಪಾಲಕರು ನೀಡುವ ಪೆನ್, ಬಳಪ, ಸ್ಲೇಟ್ , ಬ್ಯಾಗ್ ಇವುಗಳು ನಮ್ಮ ವ್ಯಾಸಂಗದಲ್ಲಿ ಅವಿಭಾಜ್ಯ ಅಂಗವಾಗಿತ್ತು ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.
ತಾವು ವ್ಯಾಸಂಗ ಮಾಡುವ ಅವಧಿಯಲ್ಲಿ ನಮಗೆ ಯಾವುದೇ ಮೋಜು ಮಸ್ತಿಗೆ ಅವಕಾಶವೇ ಇರಲಿಲ್ಲ, ಅಂದು ರೇಡಿಯೋ, ಥಿಯೇಟರ್‌ನಲ್ಲಿ ಚಲನಚಿತ್ರ ವೀಕ್ಷಿಸುವುದು ಬಿಟ್ಟರೆ, ನಾಟಕಗಳು ನಮಗೆ ಮನರಂಜನೆಗಳಾಗಿದ್ದವು. ಇಂದಿನಂತೆ ನಮಗೆ ನಮ್ಮ ಪಾಲಕರು ಸವಲತ್ತುಗಳನ್ನು ನೀಡಿದ್ದರೆ ಈಗಿನ ಸಾಧನೆಗಿಂತ ಮತ್ತಷ್ಟು ಸಾಧನೆ ಮಾಡಲು ಅವಕಾಶ ಇರುತ್ತಿತ್ತೆಂದು ತಮ್ಮ ಮನದಾಳದ ಮಾತನ್ನು ವಿದ್ಯಾರ್ಥಿಗಳಿಗೆ ಮನಸ್ಸಿಗೆ ತಲುಪುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಗುರುರಾಜ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಒಂದು ವರ್ಷ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಹಾಗೂ ಕಾಲೇಜು ಆರಂಭಗೊಂಡ ವಿಷಯವನ್ನು ಸಂಚಾಲಕ ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾಲೇಜಿನ ಐಕ್ಯೂಎಸಿಯಿಂದ ಸುದ್ದಿ ಪತ್ರಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. ಸಮಾರೋಪ ಸಮಾರಂಭದ ಪ್ರಯುಕ್ತ ಏರ್ಪಡಿಸಿದ್ದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾರಂಭದಲ್ಲಿ ಕುಮಾರಿ ವೈಭವಿ ಪ್ರಾರ್ಥಿಸಿದರು, ಕುಮಾರಿ ಸ್ಪೂರ್ತಿ ಭರತ ನಾಟ್ಯದ ಮೂಲಕ ಸ್ವಾಗತ ನೃತ ನಡೆಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ.ಮಂಜುರಾಜ್, ಡಾ.ಕುಸುಮಾ, ಡಿ.ಪಿ.ಶಂಕರ್, ಖಲೀದ್ ಆಹ್ಮದ್, ಕೆ.ಎಸ್.ಚಂದ್ರಕಲಾ, ವಿದ್ಯಾ.ಕೆ.ಡಾ.ಯಪ್ಪಪ್ಪ, ರವಿಕುಮಾರ್, ವೀಣಾ ಹಾಗೂ ನಾಗೇಶ್ ನಾಯಕ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net