ಫೀಸ್​ ಕಟ್ಟೊವರೆಗೂ ವಿದ್ಯಾರ್ಥಿನಿಗೆ ಹಾಲ್​ ಟಿಕೆಟ್ ಕೊಡಲ್ಲ! ಬೈಕ್ ಅಡವಿಟ್ಟುಕೊಂಡ ಆಡಳಿತ ಮಂಡಳಿ; ಶಿಕ್ಷಕಿಗೆ ಸ್ಥಳೀಯರ ಕ್ಲಾಸ್​

ವಿದ್ಯಾರ್ಥಿನಿಗೆ ಹಾಲ್​ ಟಿಕೆಟ್​ ಕೊಡಲು ಪರದಾಡಿಸಿದ ಶಿಕ್ಷಕಿ
ವಿದ್ಯಾರ್ಥಿನಿಗೆ ಹಾಲ್​ ಟಿಕೆಟ್​ ಕೊಡಲು ಪರದಾಡಿಸಿದ ಶಿಕ್ಷಕಿ
Published on

ಪ್ರಮುಖ ಮುಖ್ಯಾಂಶಗಳು

  • ಶುಲ್ಕ ಕಟ್ಟಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಪರೀಕ್ಷೆಗೆ ಎಂಟ್ರಿ ಇಲ್ಲ
  • ವಿದ್ಯಾರ್ಥಿನಿಗೆ ಹಾಲ್​ ಟಿಕೆಟ್​ ಕೊಡದ ಶಿಕ್ಷಕಿ ಸುನೀತಾ
  • ರಾಣೆಬೆನ್ನೂರಿನ ಖಾಸಗಿ ಕಾಲೇಜಿನಲ್ಲಿ ಘಟನೆ
ಹಾವೇರಿ: ಕಾಲೇಜಿನ ಬಾಕಿ ಶುಲ್ಕ ಕಟ್ಟಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ದ್ವಿತೀಯ ಪಿಯು ವಿದ್ಯಾರ್ಥಿನಿಗೆ ಹಾಲ್​ ಟಿಕೆಟ್​ ಕೊಡದ ಶಿಕ್ಷಕಿಯೊಬ್ಬರು, ಯುವತಿಯನ್ನು ಪರೀಕ್ಷೆ ಬರೆಯಲು ಅನುಮತಿ ನೀಡದೆ ಕಣ್ಣೀರಾಕಿಸಿದ ಘಟನೆ ರಾಣೆಬೆನ್ನೂರಿನ ಖಾಸಗಿ ಕಾಲೇಜಿನಲ್ಲಿ ಸಂಭವಿಸಿದೆ. 
ವಾರ್ಷಿಕ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯನ್ನು ತಡದ ಕಾಲೇಜಿನ ಆಡಳಿತ ಮಂಡಳಿ, ಪರೀಕ್ಷೆಗೆ ಕೂರದಂತೆ ಎಚ್ಚರಿಸಿದ್ದಾರೆ. ಹೀಗಾಗಿ, ಯುವತಿ ಪರೀಕ್ಷಾ ಕೊಠಡಿ ಮುಂದೆಯೇ ನಿಂತು ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾಳೆ. ಇದಕ್ಕೆ ಒಪ್ಪದ ಶಿಕ್ಷಕಿ ಸುನಿತಾ ಎಂಬುವವರು, ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಾರಾ ಜೆಸ್ಸಿಕಾಳಿಗೆ 30 ಸಾವಿರ ರೂ. ಬಾಕಿ ಉಳಿದಿರುವ ಫೀಜ್ ಕಟ್ಟಿದರೆ ಮಾತ್ರ ಪರೀಕ್ಷೆಗೆ ಬರೆಯಲು ಅನುಮತಿ ಕೊಡುತ್ತೀನಿ ಎಂದು ಹೇಳಿ ಕಳುಹಿಸಿದ್ದರು. 
ಇಂದು ಕನ್ನಡ ಭಾಷೆ ವಿಷಯದ ಪರೀಕ್ಷೆ ಬರೆಯಲು ವಿದ್ಯಾರ್ಥಿನಿ ಕಾಲೇಜಿಗೆ ಆಗಮಿಸಿದ್ದಳು. ಆದರೆ, ಫೀಜ್​ ಕಟ್ಟೋವರೆಗೂ ಸುನಿತಾ ಮಾತ್ರ ಯುವತಿಗೆ ಹಾಲ್ ಟಿಕೆಟ್​ ಕೊಡದೆ ಪರದಾಡಿಸಿದ್ದಾರೆ. ಹಣ ತಂದರೆ ಪರೀಕ್ಷೆ ಎಂದು ಪಟ್ಟು ಹಿಡಿದರು. ಈ ವಿಷಯ ತಿಳಿಯುತ್ತಿದ್ದಂತೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಶಿಕ್ಷಕಿ ಸುನಿತಾ ವಿರುದ್ಧ ಸಿಡಿದೆದ್ದ ಸಾಮಾಜಿಕ ಹೋರಾಟಗಾರ ಹನುಮಂತಪ್ಪ, ವಿದ್ಯಾರ್ಥಿನಿಗೆ ತಕ್ಷಣವೇ ಹಾಲ್​ ಟಿಕೆಟ್​ ಕೊಡುವಂತೆ ಆಗ್ರಹಿಸಿದರು.
ಹಾಲ್​ ಟಿಕೆಟ್​ ಕೊಡದಂತೆ ಹೀಗೆ ಮಾಡುವುದರಿಂದ ವಿದ್ಯಾರ್ಥಿನಿಯ ಭವಿಷ್ಯ ಹಾಳು ಮಾಡುತ್ತಿರುವುದು ಸರಿಯೇ ಎಂದು ಕೇಳಿದರೆ, ಎಲ್ಲಾ ಕಾಲೇಜಿನವರೂ ಪುಗಸೆಟ್ಟೆ ಕಲಿಸ್ತಾರಾ? ಎಂದು ಸುನಿತಾ ದರ್ಪದ ಮಾತುಗಳನ್ನಾಡಿದ್ದಾರೆ. ಫೀಸ್​ ಕಟ್ಟೊವರೆಗೂ ಬೈಕ್ ಅಡಮಾನ ಇಟ್ಟುಕೊಂಡ ಆಡಳಿತ ಮಂಡಳಿ, ಮಧ್ಯಸ್ಥಿಕೆ ವಹಿಸಲು ಬಂದವರ ವಾಹನವನ್ನೇ ಅಡಮಾನ ಇಟ್ಟುಕೊಂಡಿದ್ದು ಅಚ್ಚರಿ. ಪಿಯು ವಿದ್ಯಾರ್ಥಿನಿಗೆ ಹಾಲ್ ಟಿಕೆಟ್​ ನೀಡದೇ ಸತಾಯಿಸಿದ್ದು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿ ಎಂದು ಹೇಳಲಾಗಿದೆ.
ಸುನೀತಾ ಖಾಸಗಿ ಕಾಲೇಜಿನ ಜೊತೆ ಗುರುತಿಸಿಕೊಂಡಿರುವ ಸರ್ಕಾರಿ ಶಾಲಾ ಶಿಕ್ಷಕಿ ಎನ್ನಲಾಗಿದೆ. ಈ ಕುರಿತು ಕಾರಣ ಕೇಳಿ, ನೋಟೀಸ್ ಜಾರಿ ಮಾಡುವುದಾಗಿ ರಾಣೆಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ್ ಅಡಿಗ ತಿಳಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net