

ಚನ್ನರಾಯಪಟ್ಟಣ :
ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಘಟ್ಟ. ಈ ಅವಧಿಯಲ್ಲಿ ರೂಪುಗೊಳ್ಳುವ ಆಲೋಚನೆ, ಅಭ್ಯಾಸ, ಸ್ನೇಹ, ಮೌಲ್ಯ ಮತ್ತು ಗುರಿಗಳು ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. ಹಾಗಾಗಿವಿದ್ಯಾರ್ಥಿಗಳು ಪುಸ್ತಕ ಜ್ಞಾನದ ಜತೆಗೆ ತಮ್ಮನ್ನು ತಾವು ಅರಿತುಕೊಳ್ಳುವುದು ಮತ್ತು ಪ್ರೀತಿಸುವುದನ್ನು ಕಲಿಯಬೇಕು ಎಂದು ಬೆಂಗಳೂರು ಬನಶಂಕರಿ ಮಹಿಳಾ ಸೇವಾ ಸಮಾಜ ಅಧ್ಯೆ ಶಾಂತಾ ರಾಮಸ್ವಾಮಿ ಹೇಳಿದರು.
ಬೂದಿಗೆರೆ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೋಟ್ ಬುಕ್, ಕ್ರೀಡಾ ಸಾಮಗ್ರಿ ಹಾಗೂ ಪ್ರೌಢಶಾಲಾ ಮಕ್ಕಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ವಿತರಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದರಿಂದ ಆತ್ಮವಿಶ್ವಾಸ ಕುಗ್ಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಭಿನ್ನ. ಪ್ರತಿಯೊಬ್ಬರಲ್ಲೂ ವಿಭಿನ್ನ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿಕೊಂಡು ಸಾಧನೆಯತ್ತ ಸಾಗಬೇಕು ಎಂದರು.
ವಿಜಯವಾಣಿ ಕೇವಲ ಪ್ರಸರಣದಲ್ಲಿ ಮಾತ್ರವಲ್ಲ, ಸಮಾಜಮುಖಿ ಚಿಂತನೆಯಲ್ಲೂ ನಂ.1. ಪತ್ರಿಕೆಯ ವಿದ್ಯಾರ್ಥಿ ಮಿತ್ರ ಮಾಹಿತಿಯ ಕಣಜ. ಮಕ್ಕಳ ವ್ಯಾಸಂಗಕ್ಕೆ ಸಾಕಷ್ಟು ಶ್ರಮಿಸುತ್ತಿದೆ. ಮಕ್ಕಳ ಕನಸುಗಳು ಸಾಕಾರಕ್ಕೆ ಪತ್ರಿಕೆ ಓದುವುದನ್ನುರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪತ್ರಿಕೆಯ ಪ್ರಸರಣ ವಿಭಾಗದ ಮುಖ್ಯ ವ್ಯವಸ್ಥಾಪಕ ವಿದ್ಯಾಧರ ಪೂಜಾರ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಆಶಯವನ್ನಿಟ್ಟುಕೊಂಡು ಯಾವುದೇ ಪ್ರಚಾರ ಹಾಗೂ ಸ್ವಾರ್ಥವಿಲ್ಲದೇ ನಿರಂತರ ಸೇವೆ ಮಾಡುತ್ತಿರುವ ಶಾಂತಾ ರಾಮಸ್ವಾಮಿ ಹಾಗೂ ಅವರ ಬಳಗದ ಕಾರ್ಯ ಶ್ಲಾಘನೀಯ. ವಸ್ತುಗಳ ಹಾಗೇ ವಿದ್ಯೆಯನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಲಕ್ಷಿ$್ಮದೇವಿ ಮಹಿಳಾ ಟ್ರಸ್ಟ್ ಪದಾಧಿಕಾರಿಗಳಾದ ಪೂರ್ಣಿಮಾ ಮಂಜುನಾಥ್, ಸತ್ಯಾ ಮಂಜುನಾಥ, ಎಂ.ಎಸ್.ರೆಡ್ಡಿ, ಶ್ರೀಧರ್, ಉಪನ್ಯಾಸಕರಾದ ಮುರಳಿ ಕೃಷ್ಣ, ರಾಜಶೇಖರ್, ಚೈತ್ರಾ, ಪ್ರೌಢಶಾಲಾ ಶಿಕ್ಷಕ ಜಯಣ್ಣ, ದೈಹಿಕ ಶಿಕ್ಷಕ ರಮೇಶ್, ಹಳೆಯ ವಿದ್ಯಾರ್ಥಿ ಸಂಘದ ಸದಸ್ಯ ಶಿವರಾಜ್ ಇತರರು ಇದ್ದರು.
ಶಾಲೆಗಳ ಅಭಿವೃದ್ಧಿ :
ಶಾಂತಾ ರಾಮಸ್ವಾಮಿ ಅವರು ಸಂಪಾದನೆಯನ್ನು ಶಾಲಾ ಮಕ್ಕಳ ಕಲಿಕೆಗೆ ನೀಡುತ್ತಿರುವುದರಿಂದ ಶಾಲೆಗಳು ಅಭಿವೃದ್ಧಿಯತ್ತ ಸಾಗುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಕಲಿಕಾ ಸಾಮಗ್ರಿ, ವಿಜಯವಾಣಿ ವಿದ್ಯಾರ್ಥಿ ಮಿತ್ರ, ಕ್ರೀಡಾ ಉಪಕರಣಗಳು, ಲ್ಯಾಪ್ಟಾಪ್, ಸಿಸಿ ಕ್ಯಾಮರಾ ಸೇರಿ ಸಂಘಗಳನ್ನು ಕಟ್ಟಿಕೊಂಡು ಹಲವು ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಜಗದೀಶ್ ಹೇಳಿದರು.
ತಾಲೂಕಿನ ಎಲ್ಲ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉಚಿತವಾಗಿ ವಿದ್ಯಾರ್ಥಿ ಮಿತ್ರ ಪತ್ರಿಕೆ ನೀಡುತ್ತಿದ್ದು, ಈ ವರ್ಷ 3 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಹಂಚಿಕೆ ಮಾಡಲಾಗುತ್ತಿದೆ.
— > ಡಾ.ಶಾಂತಾ ರಾಮಸ್ವಾಮಿ, ಬನಶಂಕರಿ ಮಹಿಳಾ ಸೇವಾ ಸಮಾಜ ಅಧ್ಯೆ