ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ತುಮಕೂರು ಹೊವಲಯದ ಸತ್ಯಮಂಗಲ, ಸ್ವಾಂದೇನಹಳ್ಳಿ ಸರ್ವೀಸ್ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ತೀವ್ರ ಸಮಸ್ಯೆ ಅನುಭವಿಸಿದರು. ಗಂಟೆಗಟ್ಟಲೇ ವಾಹನಗಳು ಕಿಮೀ ಗಟ್ಟಲೇ ಸಾಲುಗಟ್ಟಿ ನಿಂತಿದ್ದರೂ ಯಾರೊಬ್ಬ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ನಿಯಂತ್ರಿಸುವ ಗೋಜಿಗೆ ಹೋಗದಿರುವ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಯಿತು. 3 ವರ್ಷದ ನಂತರ ನಡೆದ ಹನುಮಂತಪುರ ಪೇಟೆ ಕೊಲ್ಲಾಪುರದಮ್ಮ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾವಿರಾರು ಭಕ್ತರು ಹನುಮಂತಪುರ ಸೇರಿ ಸುತ್ತಮುತ್ತಲ ಗ್ರಾಮಗಳಿಗೆ ಆಗಮಿಸಿದ್ದರು. ಸಾವಿರಾರು ಜನರು ಸೇರುವ ಮುನ್ಸೂಚನೆಯಿದ್ದರೂ ಪೊಲೀಸರು ಅಗತ್ಯ ಪೂರ್ವ ಮುಂಜಾಗ್ರತಾ ಕ್ರಮಕೈಗೊಳ್ಳದೇ ವಾಹನ ಸವಾರರು ಪರದಾಡಿದರು.