ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಭೂಸ್ವಾಧಿನ ಕೈಬಿಡುವಂತೆ ಒತ್ತಾಯಿಸಿ ರೈತರ ನಿಯೋಗ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕ ವೆಂಕಟರಮಣಯ್ಯ, ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷೆ ಪ್ರಭಾ ಬೆಳವಂಗಲ, ಜಿಲ್ಲಾಧ್ಯಕ್ಷ ಸಿ.ಎಚ್.ರಾಮಕೃಷ್ಣಯ್ಯ, ಡಿಪಿಎ ಅಧ್ಯಕ್ಷ ಚುಂಚೇಗೌಡ, ಕಿಶೋರ್ ಗೌಡ, ಆನಂದಮೂರ್ತಿ, ಗೋಪಾಲಗೌಡ ಇತರರು ಇದ್ದರು.
ದೊಡ್ಡಬಳ್ಳಾಪುರ : ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಸೊಣ್ಣೇನಹಳ್ಳಿ, ರಾಂಪುರ, ನಾರನಹಳ್ಳಿ ಸೇರಿ ಸುತ್ತಮುತ್ತಲಿನ ಹಳ್ಳಿಗಳಿಂದ 2,100 ಎಕರೆ ಪ್ರದೇಶವನ್ನು ಸರ್ಕಾರ ಕೈಗಾರಿಕಾ ಅಭಿವೃದ್ಧಿ ಉದ್ದೇಶಕ್ಕಾಗಿ ಭೂಸ್ವಾಧಿನ ಪಡಿಸಲು ಮುಂದಾಗಿದ್ದು, ಕೂಡಲೇ ಈ ಯೋಜನೆ ಕೈಬಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಹೋರಾಟಗಾರರು ಮನವಿ ಸಲ್ಲಿಸಿದರು.
ಬೆಂಗಳೂರಿನ ಸಚಿವ ಕೆ.ಎಚ್.ಮುನಿಯಪ್ಪ ಅವರ ಕಚೇರಿಗೆ ಹೋರಾಟಗಾರರ ನಿಯೋಗ ಭೇಟಿ ನೀಡ ಅವೈಜ್ಞಾನಿಕ ಭೂ ಸ್ವಾಧಿನ ಕೈಬಿಡಬೇಕು ಎಂದು ಒತ್ತಾಯಿಸಿದರು. ಮನವಿಯಲ್ಲಿ ಈ ಭೂಸ್ವಾಧಿನ ಪ್ರಕ್ರಿಯೆ ಸಂಪೂರ್ಣ ಅವೈಜ್ಞಾನಿಕ ಪದ್ಧತಿಯಿಂದ ಕೂಡಿದೆ. ಭೂಸ್ವಾಧಿನ ಪಡಿಸಿಕೊಳ್ಳಲು ಈ ಸ್ಥಳ ಸೂಕ್ತ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಫಲವತ್ತಾದ ಭೂಮಿಯನ್ನು ಖಾಲಿ ಜಾಗ ಎಂದು ನಮೂದಿಸಲಾಗಿದೆ.
ಸ್ಥಳಿಯ ರೈತರನ್ನು ಸಂಪರ್ಕಿಸಿ ಮಾಹಿತಿ ಪಡೆಯದೇ ಭೂ ಸ್ವಾಧಿನ ಪಡಿಸಬಹುದಾಗಿದೆ ಎಂದು ವರದಿ ನೀಡಿರುವ ಕ್ರಮ ಅಕ್ರಮವಾಗಿದೆ. ಇಲ್ಲಿನ ಸಾಕಷ್ಟು ಭೂಮಿ ಫಲವತ್ತಾಗಿದೆ. ರೈತರು ಭೂಮಿಯನ್ನೇ ನಂಬಿ ಬದುಕುತ್ತಿದ್ದಾರೆ. ಇರುವ ಭೂಮಿಯನ್ನು ಕೈಗಾರಿಕೆ ಸ್ವಾಧಿನ ಪಡಿಸಿಕೊಂಡರೆ ರೈತರಿಗೆ ಅನ್ಯಾಯವಾಗುತ್ತದೆ. ಭೂಸ್ವಾಧಿನಕ್ಕೆ ಅಕ್ರಮ ವರದಿ ನೀಡಿದ್ದು, ಕೂಡಲೇ ಕೈಬಿಡಬೇಕು. ಭೂಮಿಯನ್ನು ಬಿಟ್ಟುಕೊಡಲು ಇಲ್ಲಿನ ರೈತರು ತಯಾರಿಲ್ಲ ಎಂದು ಒತ್ತಾಯಿಸಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿ ಮಹೇಶ್ ಕುಮಾರ್ ಅವರಿಗೂ ಅವೈಜ್ಞಾನಿಕ ಭೂಸ್ವಾಧಿನ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದು ರೈತರ ನಿಯೋಗ ಮನವಿ ಸಲ್ಲಿಸಿದ್ದಾರೆ.