ಮಹಿಳಾ ದೌರ್ಜನ್ಯ ತಡೆಗೆ ಪ್ರಬಲ ಕಾನೂನು ಅಗತ್ಯ:ಮಾಜಿ ಸಚಿವೆ ಮೋಟಮ್ಮ ಆಶಯ-Strong laws need

ಮಾಜಿ ಸಚಿವೆ ಮೋಟಮ್ಮ
ಮಾಜಿ ಸಚಿವೆ ಮೋಟಮ್ಮ
Published on
ಬೆಂಗಳೂರು: ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯಗಳ ಸಂಪೂರ್ಣ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಸಬಲೀಕರಣ ಹೋರಾಟ ಸಮಿತಿ ವತಿಯಿಂದ ವಸಂತನಗರದ ಡಾ. ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ರಾಜ್ಯಮಟ್ಟದ ಸಮಾವೇಶ’ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರ ಹಕ್ಕಿಗಾಗಿ ಹೋರಾಟ ಮುಖ್ಯ. ಕುಟುಂಬ ಮತ್ತು ಸಮುದಾಯದಲ್ಲಿ ಮಹಿಳೆಯರ ಮೇಲಿನ ಹಿಂಸೆ, ದೌರ್ಜನ್ಯ, ಅತ್ಯಾಚಾರ ವಿರುದ್ಧ ಧ್ವನಿ ಎತ್ತಬೇಕು. ಮಹಿಳೆಯರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಪರಿಶಿಷ್ಟರು ಎಂದರೆ ಶಿಸ್ತಿನ ಜನ. ಯಾವುದೇ ಕೀಳರಿಮೆ ಇರಬಾರದು, ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಆದ್ಯತೆ ನೀಡಬೇಕು. ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಸಮಿತಿ ಸಂಸ್ಥಾಪಕಿ ನಾಗಮ್ಮ, ಉಪಾಧ್ಯಕ್ಷೆ ಶಾರದಾ, ನಿವೃತ್ತ ವಿಜ್ಞಾನಿ ಪಾರ್ಥಸಾರಥಿ, ವಕೀಲ ಮಹಾದೇವ್, ಸಮಿತಿಯ ಪವನ್ ಕುಮಾರ್ ಭಜಂತ್ರಿ ಇತರರಿದ್ದರು.
181 ಅಥವಾ 112 ಸಹಾಯವಾಣಿ
ಮಹಿಳೆಯರು ದೌರ್ಜನ್ಯಕ್ಕೆ ಒಳಗಾದಲ್ಲಿ ಸಹಾಯವಾಣಿ 181 ಅಥವಾ 112ಕ್ಕೆ ಕರೆ ಮಾಡಿದರೆ ಉಚಿತ ಕಾನೂನು ನೆರವು, ಆಪ್ತ ಸಮಾಲೋಚನೆ ಸಿಗಲಿದೆ. ಮಹಿಳೆಯರು ಅಧಿಕಾರದಿಂದ ವಂಚಿತರಾಗಿದ್ದಾರೆ. ಹಿಂದುಳಿದ ಅಲೆಮಾರಿ ಸಮುದಾಯ ಮೂಲಸೌಕರ್ಯ ಕೊರತೆ ಎದುರಿಸುತ್ತಿದೆ. ತುಳಿತಕ್ಕೆ ಒಳಗಾದ ಸಮುದಾಯ ಶಿಕ್ಷಣ ಪಡೆದಾಗ ಮಾತ್ರ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯ. ಮಕ್ಕಳ ಮತ್ತು ಮಹಿಳಾ ಸಬಲೀಕರಣಕ್ಕೆ ಶ್ರಮಿಸಲು ಸದಾ ಬದ್ದ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.
ಸರ್ಕಾರಕ್ಕೆ ಹಕ್ಕೊತ್ತಾಯ
* ಕೊರಮ-ಕೊರಚ ನಿಗಮ ಸ್ಥಾಪಿಸಿ 500 ಕೋಟಿ ರೂ. ಅನುದಾನ ಇಡಬೇಕು
* ಶಿಕ್ಷಣದಲ್ಲಿ ಶೇ.50 ಮೀಸಲಾತಿ ಜಾರಿಗೊಳಿಸಬೇಕು
* ಸಮುದಾಯವರಿಗೆ ತಲಾ 2 ಎಕರೆ ಕೃಷಿ ಭೂಮಿ, ವಸತಿ ಕಲ್ಪಿಸಿ
* ವಿಧವಾ ಮಹಿಳೆಯರ ಪಿಂಚಣಿ ಹೆಚ್ಚಿಸಬೇಕು
* ಸ್ಥಳೀಯ ಸೇರಿ ಎಲ್ಲ ಚುನಾವಣೆಗಳಲ್ಲಿ ಮಹಿಳಾ ರಾಜಕೀಯ ಮೀಸಲಾತಿ ಕಲ್ಪಿಸಿ
* ಸ್ವ ಉದ್ಯೋಗಕ್ಕೆ ಮಹಿಳೆಯರಿಗೆ ವಿಶೇಷ ಪ್ಯಾಕೇಜ್, ಮಾರುಕಟ್ಟೆ ಬೆಂಬಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net