ಅಬಕಾರಿ ಇಲಾಖೆ ನೌಕರರಿಗಿಲ್ಲ ವರ್ಗ ಭಾಗ್ಯ: ಮಾರ್ಗಸೂಚಿಗೆ ಅನುಮೋದನೆ ನೀಡದ ಆರ್ಥಿಕ ಇಲಾಖೆ- Excise Department

ಅಬಕಾರಿ ಇಲಾಖೆಯ ಅಧಿಕಾರಿಗಳ  ವರ್ಗಾವಣೆ ಪ್ರಕ್ರಿಯೆಗಳು ನಡೆದಿಲ್ಲ.
ಅಬಕಾರಿ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗಳು ನಡೆದಿಲ್ಲ.
Published on
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಮುಗಿದಿದ್ದು, ಆರ್ಥಿಕ ಇಲಾಖೆ ಅನುಮೋದನೆ ನೀಡದ ಕಾರಣ ಪ್ರಸಕ್ತ ಸಾಲಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆ ಪ್ರಕ್ರಿಯೆಗಳು ನಡೆದಿಲ್ಲ.
ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ನೂತನವಾಗಿ ಸಿದ್ಧಪಡಿಸಿರುವ ಮಾರ್ಗಸೂಚಿಗಳಿಗೆ ಅನುಮೋದನೆ ನೀಡುವಂತೆ ಮೇ 14ರಂದು ಅಬಕಾರಿ ಆಯುಕ್ತರ ಕಚೇರಿಯಿಂದ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲಾಖೆ ಅನುಮತಿ ನೀಡದ ಪರಿಣಾಮ ವರ್ಗಾವಣೆ ನಿರೀಕ್ಷೆಯಲ್ಲಿರುವ ಅಧಿಕಾರಿಗಳು ಮತ್ತು ನೌಕರರು ಆತಂಕಗೊಂಡಿದ್ದಾರೆ.
ಕಳೆದ ವರ್ಷ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಸಂದರ್ಭದಲ್ಲಿ ಗ್ರೂಪ್ ‘ಸಿ’ ವೃಂದದ 415 ಸಿಬ್ಬಂದಿಯನ್ನು ಸೇವಾವಧಿ ಹಿರಿತನ ಆಧಾರದ ಮೇರೆಗೆ ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗಿತ್ತು. ಈ ಬಾರಿ ಕೌನ್ಸೆಲಿಂಗ್ ವ್ಯವಸ್ಥೆ ಹಳ್ಳಹಿಡಿಯಲು ಕೆಲ ಅಧಿಕಾರಿಗಳ ಕೈವಾಡವಿರುವ ಅನುಮಾನವಿದೆ.
ನೌಕರರು ಅಳಲು:
ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಪ್ರಾರಂಭವಾಗಿವೆ. ವರ್ಗಾವಣೆ ನಿರೀಕ್ಷೆಯಲ್ಲಿರುವ ನೌಕರರು ಮಕ್ಕಳ ವಿದ್ಯಾಭ್ಯಾಸ ಹಾಗೂ ಪ್ರವೇಶಾತಿ ಬಗ್ಗೆ ಚಿಂತಿತರಾಗಿದ್ದಾರೆ. ಮುಂಬರುವ ದಿನಗಳಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದರೆ, ಹೊಸ ಸ್ಥಳಗಳಲ್ಲಿ ಮಕ್ಕಳಿಗೆ ಶಾಲಾ-ಕಾಲೇಜು ಪ್ರವೇಶ ಕಲ್ಪಿಸುವುದು, ಬಾಡಿಗೆ ಮನೆ ಹುಡುಕುವುದು ತೊಂದರೆಯಾಗಲಿದೆ. ಸರ್ಕಾರ ಮತ್ತು ಉನ್ನತ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.
ಗ್ರೂಪ್ ‘ಬಿ’ವೃಂದವರು ವಗಾವಣೆಯಾಗಿಲ್ಲ:
ಕಳೆದ ಮಾರ್ಚ್‌ನಲ್ಲಿ ನಡೆದ ಬಜೆಟ್‌ನಲ್ಲಿ ಗ್ರೂಪ್ ‘ಬಿ’ ವೃಂದದ ಅಬಕಾರಿ ಉಪ ಅಧೀಕ್ಷಕರು ಮತ್ತು ಅಧೀಕ್ಷಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಬಗ್ಗೆ ಘೋಷಿಸಲಾಗಿತ್ತು. ಅದರಂತೆ, ಈ ಬಾರಿಯ ಸಾರ್ವತ್ರಿಕ ವರ್ಗಾವಣೆ ವೇಳೆ ಅವರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಬೇಕಿತ್ತು. ಆದರೆ, ಈ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯು ಶುರುವಾಗಿಲ್ಲ.
ಪತ್ರದಲ್ಲಿ ಎನಿದೆ?
2025ರಲ್ಲಿ ಅಬಕಾರಿ ನಿರೀಕ್ಷಕರು ಸೇರಿ ವಿವಿಧ ವೃಂದಗಳ ಕೌನ್ಸೆಲಿಂಗ್ ವರ್ಗಾವಣೆಗೆ ಸಂಬಂಧಿಸಿ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಎಸ್‌ಎಲ್‌ಪಿ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ. ನಿಯಮಗಳಿಗೆ ಕೆಲವು ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾಪಿಸಲಾಗಿದೆ. ನೂತನ ಮಾರ್ಗಸೂಚಿ ಪ್ರಕಾರ ಪ್ರಸಕ್ತ ವರ್ಷದ ವರ್ಗಾವಣೆ ಪ್ರಕ್ರಿಯೆಗೆ ನಿರ್ದಿಷ್ಟ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ವರ್ಗಾವಣೆ ಪ್ರಕ್ರಿಯೆಯನ್ನು ತಂತ್ರಾಂಶದ ಮೂಲಕ ನಿರ್ವಹಿಸಲು ಯೋಜಿಸಲಾಗಿದೆ. ಇಲಾಖೆಯ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಡೆಸುವ ಹಿತದೃಷ್ಟಿಯಿಂದ ಅಪರ ಆಯುಕ್ತರಿಂದ ಹಿಡಿದು ಮುಖ್ಯಪೇದೆ ವೃಂದದವರೆಗಿನ ಅರ್ಹ ಅಧಿಕಾರಿಗಳನ್ನು ವರ್ಗಾಯಿಸಲು ಕ್ರಮವಹಿಸಲಾಗುತ್ತದೆ. ಹಾಗಾಗಿ, ಮಾರ್ಗಸೂಚಿಗೆ ಅನುಮೋದನೆ ನೀಡುವಂತೆ ಆರ್ಥಿಕ ಇಲಾಖೆಗೆ, ಅಬಕಾರಿ ಇಲಾಖೆ ಪತ್ರ ಬರೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net