ಸ್ವಾಮೀಜಿ ಬಂಧನಕ್ಕೆ ತೀವ್ರ ಖಂಡನೆ, ಪರ-ವಿರೋಧ ಚರ್ಚೆ ಜೋರು, ತಾರಕಕ್ಕೇರಿದ ಮೆಡಿಕಲ್ ಕಾಲೇಜ್ ಹೋರಾಟ

ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸುದ್ದಿಗೋಷ್ಠಿ ನಡೆಸಿದರು. ಉಮೇಶ ಕಾರಜೋಳ, ಮಲ್ಲಿಕಾರ್ಜುನ ಜೋಗೂರ, ವಿಜಯ ಜೋಶಿ ಇದ್ದಾರೆ.
ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸುದ್ದಿಗೋಷ್ಠಿ ನಡೆಸಿದರು. ಉಮೇಶ ಕಾರಜೋಳ, ಮಲ್ಲಿಕಾರ್ಜುನ ಜೋಗೂರ, ವಿಜಯ ಜೋಶಿ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಧರಣಿ
  • ಪಿಪಿಪಿ ಮಾದರಿಗೆ ತೀವ್ರ ವಿರೋಧ
  • ಮಂತ್ರಿಗಳ ಮನೆ ಮುಂದೆ ಧರಣಿ ಸತ್ಯಾಗ್ರಹ
  • ಸ್ವಾಮೀಜಿ ಸಹಿತ ಹೋರಾಟಗಾರರ ಬಂಧನಕ್ಕೆ ಖಂಡನೆ
ವಿಜಯಪುರ: ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ) ಮಾದರಿ ಕೈ ಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಆಗ್ರಹಿಸಿ ಹಮ್ಮಿಕೊಂಡ ‘ಮಂತ್ರಿ ಮನೆಗಳ ಮುಂದೆ ಧರಣಿ’ ಹೋರಾಟದ ಸಂದರ್ಭ ಸ್ವಾಮೀಜಿ ಮತ್ತು ಸಮವಸ್ತ್ರ ಧರಿಸದ ಪೊಲೀಸರ ನಡುವಿನ ಕಾಳಗಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆ ಜೋರಾಗಿದೆ.
ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲರ ಮನೆ ಮುಂದೆ ಗುರುವಾರ ‘ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ’ ನೇತೃತ್ವ ಹಮ್ಮಿಕೊಂಡ ಧರಣಿ ಸಂದರ್ಭ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಮಠದ ಸಂಗನಬಸವೇಶ್ವರ ಸ್ವಾಮೀಜಿಯನ್ನು ತಳ್ಳಾಡಿದ್ದು ಹಾಗೂ ಸಿಟ್ಟಿಗೆದ್ದ ಸ್ವಾಮೀಜಿ ಸಮವಸ್ತ್ರ ಧರಿಸದೇ ಇರುವ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳಲಾರಂಭಿಸಿದೆ.
ಘಟನೆ ನಡೆದ ದಿನವೇ ಪೊಲೀಸರು ಸ್ವಾಮೀಜಿ ಸೇರಿ 27 ಜನರ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಸರ್ಕಾರದ ಈ ಕ್ರಮವನ್ನು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಖಂಡಿಸಿದ್ದು, ಸಂಗನಬಸವ ಸ್ವಾಮೀಜಿಯ ಮೈಮೇಲಿನ ಬಟ್ಟೆ ಹಿಡಿದು ಎಳೆದೊಯ್ಯಲು ಯತ್ನಿಸಿದ್ದು ಪೊಲೀಸರ ಅತಿರೇಕದ ವರ್ತನೆ. ಕೂಡಲೇ ಅವರನ್ನು ಬಿಡುಗಡೆಗೊಳಿಸಿ ಕ್ಷಮೆ ಯಾಚಿಸಬೇಕು. ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂದಿದ್ದಾರೆ.

ಬಿಜೆಪಿ ನಾಯಕರಿಂದ ಖಂಡನೆ ವ್ಯಕ್ತ

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಅವರು, ‘ಪವಿತ್ರವಾದ ಕಾವಿ ಬಟ್ಟೆಯನ್ನು ಎಳೆದಾಡಿದ್ದಲ್ಲದೇ ಸ್ವಾಮೀಜಿಯೊಬ್ಬರ ಮೇಲೆ ಕೈ ಹಾಕಿ, ಮೊಬೈಲ್ ಕಸಿದುಕೊಂಡು, ಎಳೆದಾಡಿ ಅವಮಾನಿಸಿದ್ದು ಗಮನಿಸಿದರೆ ಇದೇನು ಪ್ರಜಾತಂತ್ರವೋ....ಸರ್ವಾಧಿಕಾರಿ ವ್ಯವಸ್ಥೆಯೋ...’ ಎಂಬು ಅನುಮಾನ ಮಾಡುತ್ತಿದೆ ಎಂದಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹಾಗೂ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಉಮೇಶ ಕಾರಜೋಳ ಅವರು ‘ಕಾಂಗ್ರೆಸ್‌ಗೆ ಸ್ವಾಮೀಜಿಗಳ ಮೇಲೇಕೆ ಸಿಟ್ಟು? ಹಿಂದು ಧರ್ಮಗುರುಗಳನ್ನು ಕಂಡರೆ ಆಗುವುದಿಲ್ಲವೇಕೆ? ಕಾವಿಧಾರಿಯನ್ನು ರೊಚ್ಚಿಗೊಬ್ಬಿಸಿದ್ದೇಕೆ, ಬಂಧಿಸಿದ್ದೇಕೆ? ಕೂಡಲೇ ಕ್ಷಮೆ ಯಾಚಿಸಿ ಸ್ವಾಮೀಜಿಯನ್ನು ಬಿಡುಗಡೆಗೊಳಿಸದೇ ಹೋದರೆ ಜಿಲ್ಲಾ ಬಂದ್‌ಗೆ ಕರೆ ನೀಡಲಾಗುವುದು’ ಎಂದರು.

ರೈತ-ದಲಿತ ಸಂಘಟನೆ ಆಕ್ರೋಶ

ಧರಣಿ ನಿರತರನ್ನು ಬಂಧಿಸಿದ್ದಲ್ಲದೇ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ 106 ದಿನಗಗಳ ಕಾಲ ನಡೆದ ಅನಿರ್ದಿಷ್ಟಾವಧಿ ಧರಣಿ ಸ್ಥಳದಲ್ಲಿನ ಟೆಂಟ್ ರಾತ್ರೋರಾತ್ರಿ ಪೊಲೀಸರು ತೆರವುಗೊಳಿಸಿದ್ದಕ್ಕೆ ದಲಿತ ವಿದ್ಯಾರ್ಥಿ ಪರಿಷತ್ ಖಂಡಿಸಿದೆ. ಪರಿಷತ್‌ನ ಅಧ್ಯಕ್ಷ ಶ್ರೀನಾಥ ಪೂಜಾರಿ ಪ್ರತಿಭಟನೆ ನಡೆಸಿ ಕೂಡಲೇ ಧರಣಿ ನಿರತರ ಬಿಡುಗಡೆಗೆ ಒತ್ತಾಯಿಸಿದರು.
ಸಚಿವ ಎಂ.ಬಿ. ಪಾಟೀಲರ ಕುಮ್ಮಕ್ಕಿನಿಂದ ಧರಣಿ ನಿರತರ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ಕ್ರಮ ಖಂಡನೀಯ. ಸ್ವಾಮೀಜಿಗಳ ಜೊತೆ ಅನುಚಿತವಾಗಿ ವರ್ತಿಸಿದ್ದು ಸರಿಯಲ್ಲ. ಕೂಡಲೇ ಸಿಎಂ ಸಿದ್ದರಾಮಯ್ಯ ಧರಣಿ ನಿರತರ ಕ್ಷಮೆ ಯಾಚಿಸಬೇಕೆಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಹಾಗೂ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ತಿರುಗೇಟು:

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತಪ್ಪಲ್ಲ; ಆದರೆ, ಪೊಲೀಸರ ಮೇಲೆ ಕೈ ಎತ್ತಿದ್ದು ತಪ್ಪು. ಹೀಗಾಗಿ ತಪ್ಪಿತಸ್ಥರನ್ನು ಹೊರತುಪಡಿಸಿ ಉಳಿದ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ರಾಜು ಆಲಗೂರ ಆಗ್ರಹಿಸಿದ್ದಾರೆ.
ಕೆಲವು ಸ್ವಾಮೀಜಿಗಳು ಕಾನೂನಿಗಿಂತ ತಾವೇ ಮೇಲು ಎಂಬಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸ್ವಾಮೀಜಿಗಳ ವಿರೋಧಿ ಎಂಬಂತೆ ಬಿಂಬಿಸುವ ಕೆಲಸವನ್ನು ಬಿಜೆಪಿ ಮಾಡುವುದು ಖಂಡನೀಯ. ಇತ್ತೀಚಿಗೆ ಬಬಲೇಶ್ವರದಲ್ಲಿ ಸ್ವಾಮೀಜಿಯೊಬ್ಬರ ಪರ ಸಮಾವೇಶ ಮಾಡಿದರು. ಇಲ್ಲೂ ಸಚಿವ ಎಂ.ಬಿ.ಪಾಟೀಲರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಬಿಜೆಪಿಯವರು ಮಾಡಿದರು. ಆದರೆ, ಕಾಂಗ್ರೆಸ್ ಪಕ್ಷ, ಸಚಿವರು ಹಿಂದೂಗಳು ಸೇರಿ ಎಲ್ಲ ಧರ್ಮಗಳು ಹಾಗೂ ಎಲ್ಲ ಸ್ವಾಮೀಜಿಗಳನ್ನು ಪ್ರೀತಿಸಿ ಗೌರವಿಸುತ್ತೇವೆ ಎಂದು ಸ್ಪಪ್ಟನೆ ನೀಡಿದರು.

ಆಸ್ಪತ್ರೆಯಿಂದಲೇ ಹೋರಾಟಗಾರನ ವಿಡಿಯೋ ಹೇಳಿಕೆ

‘ಧರಣಿ ವೇಳೆ ಪೊಲೀಸರು ಎದೆಗೆ ಹೊಡೆದಿದ್ದು ಪೆಟ್ಟಾಗಿದೆ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಚೇತರಿಕೆ ಕಂಡಿಲ್ಲ, ಆಗಲೇ ಬಿಡುಗಡೆಗೊಳಿಸುವುದಾಗಿ ವೈದ್ಯರು ಹೇಳುತ್ತಿದ್ದಾರೆ. ನನಗಂತೂ ನಿಲ್ಲಲಾಗುತ್ತಿಲ. ಅಶಕ್ತತೆ ಆವರಿಸಿದೆ. ಬಲವಂತವಾಗಿ ಹೊರಹಾಕಿದರೆ ಅದಕ್ಕೆ ಆಡಳಿತ ವ್ಯವಸ್ಥೆಯೇ ಜವಾಬ್ದಾರಿ’ ಎಂದು ಹೋರಾಟಗಾರ ಮಲ್ಲಿಕಾರ್ಜುನ ಬಟಗಿ ತಿಳಿಸಿದ್ದಾರೆ.
ಆಸ್ಪತ್ರೆಯಿಂದಲೇ ವಿಡಿಯೋ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಆರೋಗ್ಯದಲ್ಲಿ ಚೇತರಿಕೆ ಇಲ್ಲ. ತೀವ್ರ ಪೆಟ್ಟಾಗಿದೆ. ಹೀಗಾಗಿ ಚಿಕಿತ್ಸೆ ಮುಂದುವರಿಸಭೇಕೆಂದು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net