ರಾಜಕೀಯ ನಾಟಕ ನಿಲ್ಲಿಸಿ, ಕೇಂದ್ರ ಸರ್ಕಾರದ ಕೊಡುಗೆ ಸ್ಮರಿಸಿ; ಸಚಿವ ಜಮೀರ್​ ವಿರುದ್ಧ ಮಾಜಿ ಮೇಯರ್​ ಈರೇಶ ಅಂಚಟಗೇರಿ ಕಿಡಿ! Zameer Ahmed Khan

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಮಂಟೂರ ರಸ್ತೆಯಲ್ಲಿ ಜನವರಿ 24 ರಂದು ನಡೆಯಲಿರುವ 1008 ಬಡವರ ಮನೆಗಳ ಹಸ್ತಾಂತರ ಕಾರ್ಯಕ್ರಮವನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್​ (Zameer Ahmed Khan) ಬಹಿರಂಗವಾಗಿ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯ ಹಾಗೂ ಜನವಿರೋಧಿ ನಡೆ ಎಂದು ಮಾಜಿ ಮೇಯರ್ ಈರೇಶ ಅಂಚಟಗೇರಿ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ವಸತಿ ಯೋಜನೆಗೆ 2019–20ನೇ ಸಾಲಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಗುದ್ದಲಿ ಪೂಜೆ ನೆರವೇರಿಸಿದ್ದು, ನಿರ್ಮಾಣಗೊಂಡಿರುವ ಪ್ರತಿಯೊಂದು ಮನೆಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರೂ.1,50,000 ಅನುದಾನವನ್ನು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವೇ ಒದಗಿಸಿದೆ. ಇದಲ್ಲದೆ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ತನ್ನ ಪಾಲಿನ ಅನುದಾನವನ್ನು ಕೊಡುಗೆ ಮೂಲಕ ನೀಡಿದೆ.
ಆದರೆ, ಈ ಸತ್ಯಾಂಶಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ, ಕೇಂದ್ರ ಸರ್ಕಾರದ ಹೆಸರನ್ನು ಉಲ್ಲೇಖಿಸದೇ, ಕಾಂಗ್ರೆಸ್ ಸರ್ಕಾರ ಮಾತ್ರವೇ ಸಂಪೂರ್ಣ ಹಣ ಒದಗಿಸಿದಂತೆ ಬಿಂಬಿಸುವುದು ಕನ್ನಡಿಗರಿಗೆ ಮಾಡುವ ಭಾರೀ ಮೋಸವಾಗಿದೆ ಎಂದರು.
ಕೇಂದ್ರ ಸರ್ಕಾರದ ಅನುದಾನವನ್ನು ಬಳಸಿಕೊಂಡು ಕಾಂಗ್ರೆಸ್ ಸರ್ಕಾರ ಕ್ರೆಡಿಟ್ ಕಳ್ಳತನದ ರಾಜಕೀಯ ಮಾಡುತ್ತಿರುವುದು ಈ ಘಟನೆಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಈಗ ಜನರ ತೆರಿಗೆ ಹಣದಿಂದ ನಿರ್ಮಾಣವಾದ ಮನೆಗಳನ್ನು ಹಂಚುವ ಕಾರ್ಯಕ್ರಮವನ್ನೂ 'ಪಕ್ಷೀಯ ಕಾರ್ಯಕ್ರಮ'ವನ್ನಾಗಿ ಪರಿವರ್ತಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಇನ್ನೂ ಗಂಭೀರ ವಿಷಯವೆಂದರೆ, ಮಾನ್ಯ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ಜನವರಿ 19 ರಿಂದ 25ರವರೆಗೆ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ (World Economic Forum) ಭಾರತದ ಪ್ರತಿನಿಧಿಯಾಗಿ ಪೂರ್ವನಿಯೋಜಿತವಾಗಿ ಭಾಗವಹಿಸುತ್ತಿದ್ದಾರೆ. ಈ ವಿಷಯವನ್ನು ತಿಳಿದಿದ್ದರೂ ಸಹ, ಉದ್ದೇಶಪೂರ್ವಕವಾಗಿ ಅವರ ದಿನಾಂಕವನ್ನು ನಿರ್ಲಕ್ಷಿಸಿ, ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಪ್ರಚಾರ ವೇದಿಕೆಯಾಗಿಸಲು ತರಾತುರಿಯಲ್ಲಿ ಆಯೋಜಿಸುತ್ತಿರುವುದು ಖಂಡನೀಯ. ಇದಕ್ಕೆ ಬಿಜೆಪಿ ಪಕ್ಷದ ತೀವ್ರ ವಿರೋಧವಿದೆ ಎಂದರು.
ಸರ್ಕಾರಿ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷದ ಆಸ್ತಿಯಂತೆ ವರ್ತಿಸುವ ಈ ಧೋರಣೆ ಪ್ರಜಾಪ್ರಭುತ್ವದ ಮೌಲ್ಯಗಳಿಗೂ ಹಾಗೂ ಸಂವಿಧಾನದ ಆತ್ಮಕ್ಕೂ ಧಕ್ಕೆ ತರುವಂತದ್ದು. ಆದ್ದರಿಂದ ಸಚಿವರು ಕೂಡಲೇ ತಮ್ಮ ರಾಜಕೀಯ ನಾಟಕವನ್ನು ನಿಲ್ಲಿಸಿ, ಕೇಂದ್ರ ಸರ್ಕಾರದ ಕೊಡುಗೆಯನ್ನು ಬಹಿರಂಗವಾಗಿ ಒಪ್ಪಿಕೊಳ್ಳಬೇಕು. ಜೊತೆಗೆ ಮಾನ್ಯ ಕೇಂದ್ರ ಸಚಿವರಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಈ ಮೂಲಕ ಸ್ಪಷ್ಟವಾಗಿ ಎಚ್ಚರಿಸುತ್ತೇವೆ ಎಂದು ಈರೇಶ ಅಂಚಟಗೇರಿ ಹೇಳಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net