ಹುಲಿಯೂರುದುರ್ಗ: ಪಾಲಕರಿಗೆ ಇರುವ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಶಾಲೆಗಳನ್ನು ಮುಚ್ಚುವಂತೆ ಮಾಡುತ್ತಿವೆ. ಸಾಕಷ್ಟು ಸಮಸ್ಯೆ ನಡುವೆಯೂ ಶಾಲೆ ನೂರು ವರ್ಷ ಪೂರೈಸಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹಳೆವೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ನೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಳೇವೂರು ಶಾಲಾ ಶತಮಾನ ಸಂಭ್ರಮೋತ್ಸವದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳನ್ನು ಉಳಿಸಲು ಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಅವುಗಳನ್ನು ಅನುಷ್ಠಾನಗೊಳಿಸುತ್ತೇನೆ ಎಂದರು.
ಹಳೇವೂರು ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ನನ್ನ ಮುಂದಿನ ನಡೆ ಸರ್ಕಾರಿ ಶಾಲೆಗಳ ಉಳಿವಿನ ಕಡೆ ಎಂಬ ಧ್ಯೇಯದೊಂದಿಗೆ ನನ್ನ ಉಸಿರಿರುವರೆಗೂ ಶ್ರಮಿಸುತ್ತೇನೆ ಎಂದರು.
ನಿವೃತ್ತ ಶಿಕ್ಷಕರು ಹಾಗೂ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು.