ಹುಣಸೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಪ್ರಾಂಗಣದಲ್ಲಿ ವಿವಿಧ ಯೋಜನೆಗಳಡಿ 5 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಭೂಮಿಪೂಜೆ ನೆರವೇರಿಸಿದರು.
ಎಪಿಎಂಸಿ ಆವರಣದಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಲಾಗಿದೆ. ಅಲ್ಲದೆ ಪ್ರಾಂಗಣದಲ್ಲಿ ಅಡಿಕೆ ಮಾರುಕಟ್ಟೆ ಮತ್ತು ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಾಲೂಕಿನಲ್ಲಿ ಸಾಕಷ್ಟು ಅಡಿಕೆ ಬೆಳೆಗಾರರು ಇದ್ದು, ಮಾರುಕಟ್ಟೆ ಸ್ಥಾಪಿಸಿದಲ್ಲಿ ತಂಬಾಕಿಗೆ ಪರ್ಯಾಯವಾಗಿ ಅಡಿಕೆ ಬೆಳೆಯಲು ರೈತರು ಮುಂದಾಗಬಹುದು ಎಂದು ಹರೀಶ್‌ಗೌಡ ಹೇಳಿದರು.
ತಾಲೂಕು ವ್ಯಾಪ್ತಿಯಲ್ಲಿ ರೈತರು ಸಾಕಷ್ಟು ಪ್ರಮಾಣದಲ್ಲಿ ತರಕಾರಿ, ಹಣ್ಣುಹಂಪಲುಗಳನ್ನು ಬೆಳೆಯುತ್ತಿದ್ದು ಕೋಲ್ಡ್ ಸ್ಟೋರೇಜ್‌ನ ಬೇಡಿಕೆ ರೈತರಿಂದ ಬರುತ್ತಿದೆ. ಆದರೆ ಕೋಲ್ಡ್ ಸ್ಟೋರೇಜ್‌ಗೆ ಅಗತ್ಯ ಪ್ರಮಾಣದ ವ್ಯವಹಾರಗಳು ನಡೆದಿದ್ದರೆ ಮಾತ್ರ ಸರ್ಕಾರಗಳು ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಅನುಮತಿ ನೀಡಬಹುದು. ಈ ಕುರಿತು ಮಾಹಿತಿ ಕಲೆಹಾಕಿ ಕ್ರಮವಹಿಸಲಾಗುವುದು. ಪ್ರಾಂಗಣದಲ್ಲಿ ಕುಡಿಯುವ ನೀರು, ಬೋರ್‌ವೆಲ್, ಡೆಕ್ ಸ್ಲಾಬ್, ಕಾಂಕ್ರೀಟ್ ರಸ್ತೆ, ಚರಂಡಿ ಮುಂತಾದ ಸೌಲಭ್ಯ ಸಿಗಲಿವೆ ಎಂದರು.
ಸಹಕಾರ ಮಂತ್ರಿಗಳ ಸಹಕಾರ: ಕಳೆದ ಸಾಲಿನಲ್ಲೇ ಎಪಿಎಂಸಿ ಪ್ರಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಸಿರುನಿಶಾನೆ ದೊರಕಿತ್ತು. ಆದರೆ ಕಾರಣಾಂತರಗಳಿಂದ ಅದು ದೊರಕಲಿಲ್ಲ. ಈ ಹಿಂದಿನ ರಾಜ್ಯ ಸಹಕಾರ ಸಚಿವ ಶಿವಾನಂದ ಪಾಟೀಲರು ಸಹಕಾರಿಗಳಾಗಿ ತಮಗೆ ಹೆಚ್ಚಿನ ಆಪ್ತರಾಗಿದ್ದರು. ಅವರ ಸಹಕಾರದಿಂದ ಇದೀಗ ಹುಣಸೂರು ಎಪಿಎಂಸಿ ಪ್ರಾಂಗಣದ ಸಮಗ್ರ ಅಭಿವೃದ್ಧಿಗೆ ಚಾಲನೆ ದೊರಕಿದೆ ಎಂದು ಮಾಜಿ ಸಚಿವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಬಿ.ಸುರೇಂದ್ರ, ನಗರಾಧ್ಯಕ್ಷ ಎಸ್.ಶರವಣ, ಸತೀಶ್ ಪಾಪಣ್ಣ, ನಗರಸಭೆ ಮಾಜಿ ಸದಸ್ಯರಾದ ಕೃಷ್ಣರಾಜ ಗುಪ್ತ, ಎಚ್.ಪಿ,ಸತೀಶ್‌ಕುಮಾರ್, ಮಾಲಿಕ್ ಪಾಷಾ, ರಾಣಿ ಪೆರುಮಾಳ್, ಎಪಿಎಂಸಿ ಕಾರ್ಯದರ್ಶಿ ನಾಗೇಶ್ ಇತರರು ಇದ್ದರು.
ಕಾಮಗಾರಿಗಳ ವಿವರ: 2025-26ನೇ ಸಾಲಿನ ಆರ್‌ಐಡಿಎಫ್ 31 ಯೋಜನೆಯಡಿ ಮೂಲಭೂತ ಸೌಕರ್ಯಗಳನ್ನೊಳಗೊಂಡ 1 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು(1.02 ಕೋಟಿ ರೂ.), ಕಾಂಕ್ರೀಟ್‌ರಸ್ತೆ ನಿರ್ಮಾಣ (1.97 ಕೋಟಿ ರೂ.), ಡೆಕ್ ಸ್ಲಾಬ್ ನಿರ್ಮಾಣ 6.90 ಲಕ್ಷ ರೂ., ಚರಂಡಿ ನಿರ್ಮಾಣಕ್ಕಾಗಿ 89.73 ಲಕ್ಷ ರೂ.ಗಳ ವೆಚ್ಚವಾಗಲಿದೆ. ಎಪಿಎಂಸಿಯ 2026-27ನೇ ಸಾಲಿನ ಕ್ರಿಯಾಯೋಜನೆಯಡಿ 22 ಲಕ್ಷ ರೂ. ವೆಚ್ಚದಲ್ಲಿ ಬೋರ್‌ವೆಲ್ ಮತ್ತು ಪೈಪ್‌ಲೈನ್ ಕಾಮಗಾರಿಗೆ ಅಂದಾಜು 4.34 ಲಕ್ಷ ರೂ., ಮತ್ತು 500ಲೀ.ಸಾಮರ್ಥ್ಯದ ಎರಡು ಕುಡಿಯುವ ನೀರಿನ ಘಟಕ ಕಾಮಗಾರಿ ನಡೆಯಲಿದೆ.