

ಆನೇಕಲ್ :
ಸ್ವಾತಂತ್ರ$ಸುಮ್ಮನೆ ನಮ್ಮ ಕೈಗೆ ಸಿಕ್ಕಿಲ್ಲ. ಸಾವಿರಾರು ಜನರ ತ್ಯಾಗ ಬಲಿದಾನದಿಂದ ನಾವು ನೆಮ್ಮದಿಯಾಗಿದ್ದೇವೆ. ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿರುವಂತೆ ಪ್ರತಿಯೊಬ್ಬರ ಮನದಲ್ಲೂ ದೇಶಭಕ್ತಿಯ ತ್ರಿವರ್ಣ ಧ್ವಜ ಹಾರಬೇಕು ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ$್ಯ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ ತಾಲೂಕಿನ ಅಭಿವೃದ್ಧಿಗಾಗಿ 2,017 ಕೋಟಿ ರೂ. ಅನುದಾನ ತರಲಾಗಿದೆ. ಶೀಘ್ರದಲ್ಲೇ ಸಂಚಾರಿ ಹಾಗೂ ಮಹಿಳಾ ಪೊಲೀಸ್ ಠಾಣೆ ಬರಲಿದೆ. ಪಟ್ಟಣದ ಎಎಸ್ಬಿ ಕ್ರೀಡಾಂಗಣ ಅಭಿವೃದ್ಧಿಗೆ 10 ಕೋಟಿ ರೂ., ಆನೇಕಲ್ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು 10 ಕೋಟಿ ರೂ. ಅನುದಾನ ಒದಗಿಸಲಾಗುವುದು. ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿಮಾರ್ಣಕ್ಕೆ ಸೆಪ್ಟೆಂಬರ್ನಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು. ಮಹಾಂತಲಿಂಗಾಪುರದಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಶೇಖರಣಾ ಘಟಕ ನಿಮಾರ್ಣವಾಗಲಿದೆ. ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ವಿವಿಧೆಡೆ ಜಾಗ ಮೀಸಲಿಡಲಾಗಿದ್ದು, ಹಣ ಮಂಜೂರು ಮಾಡಲಾಗಿದೆ ಎಂದರು.
ತಹಸೀಲ್ದಾರ್ ಶಶಿಧರ್ ಮಾಡ್ಯಾಳ್ ಮಾತನಾಡಿ, ಗಾಂಧೀಜಿ ಅವರ ತತ್ವಗಳನ್ನು ಜಾರಿಗೆ ತರುವಲ್ಲಿ ತಾಲೂಕಿನ ಹಲವರು ಹೋರಾಟ ನಡೆಸಿದ್ದು, ರಾಚಮಾನಹಳ್ಳಿ ಗೋಪಾಲ್ ಅವರ ಕಾರ್ಯ ಸ್ಮರಣೀಯ. ತಾಲೂಕಿನಲ್ಲಿ ಸುಮಾರು 50 ಎಕರೆ ಸರ್ಕಾರಿ ಭೂಮಿಯನ್ನು ಕಂದಾಯ ಅಧಿಕಾರಿಗಳು ಉಳಿಸಿದ್ದು, ಒತ್ತುವರಿ ತೆರವುಗೊಳಿಸಿದ ಜಮೀನನ್ನು ವಸತಿ ಶಾಲೆ ಸೇರಿದಂತೆ ಸರ್ಕಾರಿ ಇಲಾಖೆಗಳ ಬಳಕೆಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಆ.17ಕೊನೆಯ ದಿನ. ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದವರು ಸಂಬಂಧಪಟ್ಟ ಬಿಎಲ್ಒಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಿಶೇಷ ತಹಸೀಲ್ದಾರ್ ಮುನಿವೆಂಕಟಪ್ಪ, ತಾಪಂ ಇಒ ಬೈರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಗೌಡ, ಯುವ ಕಾಂಗ್ರೆಸ್ ಮುಖಂಡ ಎನ್.ಎಸ್.ಪದ್ಮನಾಭ, ಡಿವೈಎಸ್ಪಿ ಗೋಪಾಲ್ ನಾಯಕ್, ಬಿಇಒ ಗುರುಮೂರ್ತಿ, ಆನೇಕಲ್ ಪುರಸಭೆ ಮುಖ್ಯಾಧಿಕಾರಿ ಕುಮಾರ್, ಸಿಪಿಐ ಚಂದ್ರಪ್ಪ, ಇನಾಯತ್ ಉಲ್ಲಾ, ಬಾಬು ರಾಜೇಂದ್ರ ಪ್ರಸಾದ್, ಅಧಿಕಾರಿಗಳು ಇದ್ದರು.
ಆನೇಕಲ್ ಫುಟ್ಬಾಲ್ ಮೈದಾನದಲ್ಲಿ ಪಟ್ಟಣದ ಸರಸ್ವತಿ ವಿದ್ಯಾ ಮಂದಿರ, ಸಂತ ಜೋಸೆಪುರ ಶಾಲೆ ಸೇರಿ ಹಲವು ಶಾಲಾ ಮಕ್ಕಳು ನಡೆಸಿಕೊಟ್ಟ ದೇಶ ಭಕ್ತಿ ಗೀತೆಯ ನೃತ್ಯಗಳು ಗಮನ ಸೆಳೆದವು. ಈ ವೇಳೆ ಉತ್ತಮ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳು ಹಾಗೂ ಹಿರಿಯ ಹೋರಾಟಗಾರರನ್ನು ಸನ್ಮಾನಿಸಲಾಯಿತು.