ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಗೃತಿ ಸಮಿತಿ ಸದಸ್ಯ ಜೆ.ಜಿ.ನಾಗರಾಜ ಆರೋಪ
ಬಂಗಾರಪೇಟೆ:ಉತ್ತರ ಭಾರತದಿಂದ ಉದ್ಯೋಗ ಅರಿಸಿ ಬಂದಿರುವ ಅನ್ಯಭಾಷಿಕರಿಂದ ಕನ್ನಡ ಭಾಷೆ ಮತ್ತು ನಾಡಿಗೆ ತೊಂದರೆ ಆತಂಕ ಎದುರಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಗೃತಿ ಸಮಿತಿ ಸದಸ್ಯ ಜೆ.ಜಿ.ನಾಗರಾಜ ಕಳವಳ ವ್ಯಕ್ತಪಡಿಸಿದರು. central schools
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಮತ್ತು ನಾಡಗೀತೆ ನೂರರ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತರ ಭಾರತದಿಂದ ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಅನ್ಯಭಾಷಿಕರು ಕರ್ನಾಟಕದಲ್ಲಿ ನೆಲೆಸಿ ಕನ್ನಡ ಭಾಷೆಯನ್ನು ಬಳಸದೆ ಕನ್ನಡಿಗರ ಜತೆ ಸೌಹಾರ್ದಯುತವಾಗಿ ನಡೆದುಕೊಳ್ಳದೆ ದೌರ್ಜನ್ಯಯುಕ್ತವಾಗಿ ನಡೆದುಕೊಳ್ಳುತ್ತಿರುವುದು ಆತಂಕದ ಸ್ಥಿತಿ ಎದುರಾಗಿದೆ ಎಂದರು.
ಕೇಂದ್ರಿಯ ವಿದ್ಯಾಲಯಗಳಲ್ಲಿ ಕನ್ನಡ ಭಾಷೆಯನ್ನು ಮಲತಾಯಿ ಧೋರಣೆಯಿಂದ ನಡೆಸಿಕೊಳ್ಳುತ್ತಿರುವುದು ಕನ್ನಡ ಭಾಷೆಗೆ ಬಗೆಯುತ್ತಿರುವ ದ್ರೋಹವಾಗಿದೆ. ಬಿಇಎಂಎಲ್ನಲ್ಲಿನ ಕನ್ನಡ ಕಾರ್ಮಿಕರಿಗೆ ಉತ್ತರ ಭಾರತದಿಂದ ಬಂದಿರುವ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದೆ. ನೌಕರರನ್ನು ಗೌರವವಾಗಿ ಮತ್ತು ಸೌಹಾರ್ದಯುತವಾಗಿ ನಡೆಸಿಕೊಳ್ಳುಬೇಕಾಗಿದೆ ಎಂದು ಹೇಳಿದರು.
ಕನ್ನಡ ಮಾತನಾಡುವ ನೌಕರರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ದಬ್ಬಾಳಿಕೆ ನಡೆಸುವವರ ಇಂತಹ ವೇದಿಕೆಗಳು ಪ್ರತಿಭಟನೆ ನಡೆಸಬೇಕು. ಸರ್ಕಾರ ಅಂತಹವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ತಿಳಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಆರ್.ಅಶ್ವತ್ಥ್ ಮಾತನಾಡಿ, ಸಾಹಿತ್ಯ ಪರಿಷತ್ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸುವ ಮನೋಭಾವನೆ ಕನ್ನಡಿಗರಲ್ಲಿ ಬರಬೇಕೆಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಪ್ಪಗೌಡರು ನಮ್ಮ ಮಾತೃಭಾಷೆ ತೆಲುಗು ಆದರೂ ಇಂದು ನಾವೆಲ್ಲ ಕನ್ನಡ ಭಾಷೆಯೊಂದಿಗೆ ಬದುಕುತ್ತಿದ್ದೇವೆ. ಕನ್ನಡ ಹೃದಯ ಭಾಷೆ ಮೆದುಳಿನ ಭಾಷೆ ಆಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಶಕುಂತಲಾ ಮಾತನಾಡಿ, ಕಾಲೇಜಿನ ಆವರಣದಲ್ಲಿ ಕನ್ನಡವನ್ನು ಮಾತನಾಡುವ ವಾತಾವರಣವನ್ನು ನಿರ್ಮಿಸಿದ್ದೇವೆ, ಇಂತಹ ಕನ್ನಡ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತೇವೆ ಎಂದರು.
ನಾಡಗೀತೆ ಹಾಡು, ಚರ್ಚಾ ಸ್ಪರ್ಧೆ, ಭಾಷಣ, ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಎನ್ಸಿಸಿ ಮತ್ತು ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಅನಿಕೇತನ ಬಳಗದ ಅಧ್ಯಕ್ಷ ಎಂ.ಎಸ್.ರಾಮಪ್ರಸಾದ್, ಕೆ.ಜಿ.ಮಂಜುನಾಥ್, ಸತೀಶ್ ಕುಮಾರ್, ಕುಮುದಿನಿ, ರಾಧಾ ಪ್ರಕಾಶ್, ಪೊ.ಮುನಿಸ್ವಾಮಿ ಗೌಡ, ಶ್ರೀನಿವಾಸ್ ಇದ್ದರು.