ಸಾರ್ವಜನಿಕರಿಂದ ಸ್ವೀಕರಿಸಿದ ಪ್ರತಿಯೊಂದು ಮನವಿ ಪರಿಶೀಲಿಸಿ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಶಾಸಕ ಸಮೃದ್ಧಿ ವಿ. ಮಂಜುನಾಥ್ ಅಧಿಕಾರಿಗಳಿಗೆ ತಿಳಿಸಿದರು.
ಟೀಚರ್ಸ್ ಕಾಲನಿಯಲ್ಲಿ ಆಯೋಜಿಸಿದ್ದ ಕುಂದು&ಕೊರತೆ ಸಭೆಯಲ್ಲಿ ಶನಿವಾರ ಸಾರ್ವಜನಿಕರ ಸಮಸ್ಯೆ ಆಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳು, ಅಧಿಕಾರಿಗಳು ಜನರ ಬಳಿಗೆ ತೆರಳಿ ನೇರವಾಗಿ ಸಮಸ್ಯೆ ಆಲಿಸುವುದರಿಂದ ವಾಸ್ತವ ಸ್ಥಿತಿ ಅರಿತುಕೊಂಡು ಶೀಘ್ರ ಪರಿಹಾರ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಸಾರ್ವಜನಿಕರ ಮೂಲ ಅಗತ್ಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ತಕ್ಷಣಕ್ಕೆ ಹೊಸದಾಗಿ ಕೊಳವೆ ಬಾವಿ, ಬಾಕಿ ಉಳಿದಿರುವ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಶಿಕ್ಷಕರ ಕಾಲನಿ ಅಭಿವೃದ್ಧಿಗೆ ಸುಮಾರು 2 ಕೋಟಿ ರೂ. ಬೇಕಾಗಿರುವ ಕಾರಣ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ವಿಜಯವಾಣಿ ಪತ್ರಿಕೆ ವಾರ್ಡ್ ಸಮಸ್ಯೆ ಕುರಿತು ಹಲವು ಬಾರಿ ವರದಿ ಪ್ರಕಟಿಸಿದ್ದು, ಇದಕ್ಕೆ ಜನಪ್ರತಿನಿಧಿಗಳು, ಸ್ಥಳಿಯ ಆಡಳಿತ ಹೆಚ್ಚಿನ ಗಮನ ಹರಿಸಿದ್ದರೆ ಸಮಸ್ಯೆ ಉದ್ಭವವಾಗುವುದಿಲ್ಲ ಎಂಬುದು ಸ್ಥಳಿಯರ ಅಭಿಪ್ರಾಯವಾಗಿತ್ತು. ಕಾಲನಿಯ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳ ಮಾಹಿತಿ ಪಡೆದು, ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ತಿಳಿಸಿ, ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಬೇಕು ಎಂದರು.
ಕೆಲವೆಡೆ ರಸ್ತೆಗಳ ದುರಸ್ತಿ ಅಗತ್ಯವಿದ್ದು, ಮಳೆಗಾಲದಲ್ಲಿ ಚರಂಡಿ ನೀರು ಸರಾಗವಾಗಿ ಹರಿಯದೆ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ಶಾಸಕರ ಎದುರು ಅಳಲು ತೋಡಿಕೊಂಡರು.