ಬಾಂಗ್ಲಾ ಪ್ರಜೆಯ ಗಡಿಪಾರಿಗೆ ತಡೆ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ದಾಖಲೆ ಪರಿಶೀಲನೆಗೆ ಎಫ್​ಆರ್​ಆರ್​ಒಗೆ ನಿರ್ದೇಶನ
  • ತಾನು ಭಾರತೀಯ ಎಂದು ಅರ್ಜಿದಾರನ ವಾದ
ಬೆಂಗಳೂರು: ಅಕ್ರಮ ನುಸುಳುಕೋರನೆಂದು ಪರಿಗಣಿಸಿ ವ್ಯಕ್ತಿಯೊಬ್ಬನನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿ ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್​ಆರ್​ಒ​) ಹೊರಡಿಸಿದ್ದ ಆದೇಶ ಜಾರಿಗೆ ಹೈಕೋರ್ಟ್​ ಮಧ್ಯಂತರ ತಡೆ ನೀಡಿದೆ.
ತಾನು ಭಾರತೀಯನಾಗಿದ್ದು, ಅಕ್ರಮವಾಗಿ ಗಡಿಪಾರು ಆದೇಶ ಮಾಡಲಾಗಿದೆ ಎಂದು ವಾದಿಸಿ ಅಬ್ದುಲ್​ ರಹಿಮ್​ ಎಂಬಾತ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಮಧ್ಯಂತರ ಆದೇಶ ನೀಡಿದೆ. ಅರ್ಜಿದಾರರನು ಪಾಸ್​ಪೋರ್ಟ್​, ಚುನಾವಣಾ ಗುರುತಿನ ಚೀಟಿ, ಪಾನ್​ಕಾರ್ಡ್​, ಚಾಲನಾ ಪರವಾನಗಿ ಸೇರಿ ಹಲವು ದಾಖಲೆಗಳನ್ನು ತನ್ನ ಪೌರತ್ವ ಸಾಬೀತಿಗಾಗಿ ಸಲ್ಲಿಸಿದ್ದು, ಈ ಬಗ್ಗೆ ಸಮಗ್ರವಾಗಿ ಪರಿಗಣಿಸುವಂತೆ ಎ್​ಆರ್​ಆರ್​ಒಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ, ಉತ್ತರಪ್ರದೇಶ ಹೈಕೋರ್ಟ್​ನಲ್ಲಿ ಬಾಕಿ ಇರುವ ಮತ್ತೊಂದು ಪ್ರಕರಣಕ್ಕೂ ಮತ್ತು ಈಗಿನ ಗಡಿಪಾರು ಆದೇಶಕ್ಕೂ ಸಂಬಂಧವಿದೆಯೇ ಎಂಬುದನ್ನು ಖಚಿಸತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಮುಂದಿನ ವಿಚಾರಣೆ ಜು.14ಕ್ಕೆ ನಿಗದಿಯಾಗಿದೆ. 
ಅರ್ಜಿದಾರನ ವಾದವೇನು?:
1979ರಲ್ಲಿ ದೆಹಲಿಯ ನ್ಯೂ ಸೀಮಾಪುರಿಯಲ್ಲಿ ಜನಿಸಿರುವುದಾಗಿ ಅರ್ಜಿದಾರ ಅಬ್ದುಲ್​ ರಹೀಮ್​ ವಾದಿಸಿದ್ದಾನೆ. ಮಾರ್ಚ್​ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಎಫ್ಆರ್​ಆರ್​ಒ ವಶಕ್ಕೆ ನೀಡಿದ್ದರು. ಈತ ಬಾಂಗ್ಲಾದೇಶದ ಬಾಂಗ್ಲಾದೇಶದ ಪ್ರಜೆ ಎಂಬ ಸಂಶಯದ ಮೇರೆಗೆ, ವಿದೇಶಿಯರ ಕಾಯ್ದೆಯಡಿ ಚಲನವಲನದ ಮೇಲೆ ನಿರ್ಬಂಧ ವಿಧಿಸಿ, ಬಂಧನ ಕೇಂದ್ರದಲ್ಲಿರುವಂತೆ ಆದೇಶಿಸಿಸಲಾಗಿತ್ತು. ನಂತರ ಗಡಿಪಾರು ಆದೇಶ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.
ರಹೀಮ್​ 2014ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಸರ್ಕಾರಿ ಪ್ರಾಧಿಕಾರದಲ್ಲಿ ನೋಂದಣಿಯಾಗಿರುವ ಸ್ಕ್ರ್ಯಾಪ್ ವ್ಯಾಪಾರ ನಡೆಸುತ್ತಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕಾಯ್ದೆಯಡಿ ನೋಂದಣಿ ಪ್ರಮಾಣಪತ್ರವನ್ನೂ ಹೊಂದಿದ್ದಾರೆ. ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿರುವವರನ್ನು ಏಕಾಏಕಿ ಬಂಧಿಸಿರುವುದು ಕುಟುಂಬಕ್ಕೆ ತೀವ್ರ ತೊಂದರೆ ಉಂಟುಮಾಡಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net