ಐಸಿಡಿಎಸ್ ಕಾರ್ಯಕ್ರಮಕ್ಕೆ ರಾಜ್ಯದ ಪಾಲು ಹೆಚ್ಚು-ICDS Programme

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Published on

ಪ್ರಮುಖ ಮುಖ್ಯಾಂಶಗಳು

  • ಐಸಿಡಿಎಸ್ ಪರಿಣಾಮಕಾರಿ ಅನುಷ್ಠಾನದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನ
  • ಕೇಂದ್ರ ಸರ್ಕಾರದ ಕಾರ್ಯಕ್ರಮವಾದರೂ ರಾಜ್ಯ ಹೆಚ್ಚಿನ ಅನುದಾನ ಕೊಡುತ್ತಿದೆ
  • ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆ ಸುವರ್ಣ ಮಹೋತ್ಸವ
ಬೆಂಗಳೂರು: ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆಯು(ಐಸಿಡಿಎಸ್) ತಾಯಿ, ಶಿಶು ಮರಣ ಮತ್ತು ಅಪೌಷ್ಠಿಕತೆ ನಿವಾರಿಸುವ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಐಸಿಡಿಎಸ್ ಪರಿಣಾಮಕಾರಿ ಅನುಷ್ಠಾನದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆ (ಐಸಿಡಿಎಸ್) ಸುವರ್ಣ ಮಹೋತ್ಸವ ಹಾಗೂ ವಿಶ್ವ ಹಿರಿಯ ನಾಗರಿಕರ ದಿನ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು.
ಐಸಿಡಿಎಸ್ ಕೇಂದ್ರ ಸರ್ಕಾರದ ಕಾರ್ಯಕ್ರಮವಾದರೂ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಕೊಡುತ್ತಿದೆ. ಕೇಂದ್ರದಿಂದ 2,700 ರೂ.ಬಂದರೆ, ರಾಜ್ಯ ಸರ್ಕಾರ 8,500 ಒದಗಿಸುತ್ತಿದೆ. ದೇಶದಲ್ಲಿ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ಹೆಚ್ಚಿನ ಗೌರವಧನವನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದರು. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ದೂರದೃಷ್ಟಿಯ ಐಸಿಡಿಎಸ್ ಯೋಜನೆಗೆ 50 ವರ್ಷ ತುಂಬಿರುವುದು ಮೈಲುಗಲ್ಲು ಸಾಧನೆಯಾಗಿದೆ. ಮೊದಲ ಬಾರಿಗೆ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಪ್ರಾರಂಭವಾಗಿ 33 ತಾಲೂಕುಗಳಲ್ಲಿ ಕಾರ್ಯನಿರ್ವಹಿಸಿತ್ತು. ಪ್ರಸ್ತುತ ರಾಜ್ಯಾದ್ಯಂತ 69,922 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 40 ಲಕ್ಷಕ್ಕೂ ಅಧಿಕ ಮಹಿಳೆಯರು ಮತ್ತು ಮಕ್ಕಳು ಇದರ ಲಾಭ ಪಡೆಯುತ್ತಿದ್ದಾರೆ ಎಂದು ಸಿಎಂ ಹೇಳಿದರು.
ಅನುದಾನ ಕೊರತೆ ಇಲ್ಲ:
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಜೆಪಿ, ನಮ್ಮ ಗ್ಯಾರಂಟಿ ಯೋಜನೆ ವಿರೋಧಿಸಿದ್ದರು. ಆದರೆ, ನಮ್ಮ ಮಾಡಲ್‌ನ್ನು ಕೇಂದ್ರದವರೇ ಕಾಪಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆ, ಅಭಿವೃದ್ಧಿ ಯೋಜನೆಗಳಿಗೆ ಅನುದಾನವನ್ನುವೆಚ್ಚ ಮಾಡಲಾಗುತ್ತಿದೆ.ಹಾಗಾಗಿ, ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ಅನುದಾನ ಕೊರತೆಯಿಲ್ಲ. ಮಹಿಳೆಯರು ಸಬಲರಾದರೆ ಮಾತ್ರ ನಮಗೆ ದೊರೆತಿರುವ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ ಎಂದು ಸಿಎಂ ಹೇಳಿದರು. ಸಮಾಜದಲ್ಲಿ ಅಸಮಾನತೆ, ಲಿಂಗ ತಾರತಮ್ಯ ಹೋಗಲಾಡಿಸಬೇಕು. ಈ ವರ್ಷದ ಬಜೆಟ್‌ನಲ್ಲಿ ಮಹಿಳಾ ಕಲ್ಯಾಣಕ್ಕಾಗಿ 95 ಸಾವಿರ ಕೋಟಿ ರೂ.ಮೀಸಲಿಡಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ.ಮಕ್ಕಳ ಆರೈಕೆ ಜವಾಬ್ದಾರಿಯನ್ನು 2ನೇ ತಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಿಎಂ ಹೇಳಿದರು.
ಸ್ತ್ರೀಶಕ್ತಿ ಸಂಘಗಳಿಂದ ಆರ್ಥಿಕ ಸಬಲತೆ:
ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ಪೋಷಕರು, 2ನೇ ತಾಯಿಯಾಗಿ ಜವಾಬ್ದಾರಿ ಹೊತ್ತು ಮಕ್ಕಳನ್ನು ಸಲಹಿ ದೇಶದ ಭವಿಷ್ಯ ರೂಪಿಸುತ್ತಿದ್ದಾರೆ. ಅಕ್ಷರಭ್ಯಾಸ ಮಾಡಿಸುವ ಸರಸ್ವತಿಯ ಸನ್ನಿಧಿ ಅಂಗನವಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಣ್ಣಿಸಿದರು. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅಂಗನವಾಡಿ ಕಾರ್ಯಕರ್ತೆಯರು ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ತ್ಯಾಗಮೂರ್ತಿಗಳು. ಅವರು ತಮ್ಮ ಗ್ರಾಮದ ಮಹಿಳೆಯರ ಆರೋಗ್ಯ ಕಾಪಾಡುವ ಕೆಲಸವನ್ನೂ ಮಾಡುತ್ತಿದ್ದಾರೆ. ನಿಮ್ಮ ತ್ಯಾಗ, ಪರಿಶ್ರಮವನ್ನು ಮರೆಯಲು ಸಾಧ್ಯವಿಲ್ಲ. 50 ವರ್ಷಗಳ ಹಿಂದೆ ಇಂದಿರಾಗಾಂಧಿ ತಂದಿರುವ ಕನಸಿನ ಯೋಜನೆ ಯಶಸ್ಸಿಗೆ ದುಡಿಯುತ್ತಿರುವ ಅಂಗನವಾಡಿ ತಾಯಂದಿರಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ ಎಂದರು. ಸ್ತ್ರೀಶಕ್ತಿ ಸಂಘಗಳು ಸಮಾಜದ ಶಕ್ತಿಗಳಾಗಿ ಬೆಳೆದಿವೆ. ಇದರಿಂದ, ಆರ್ಥಿಕವಾದ ಶಕ್ತಿ ಲಭಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮಹಿಳಾ ಪರವಾದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸಿಕ್ಕ ಅವಕಾಶದಲ್ಲಿ ಸಾಕಷ್ಟು ಜನಪರ ಕೆಲಸ ಮಾಡುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಾರಂಭಿಸಿರುವ ಅಕ್ಕಪಡೆ, ಗೃಹಲಕ್ಷ್ಮಿ ವಿವಿದ್ದೋದ್ದೇಶ ಸಹಕಾರ ಸಂಘ ಇತಿಹಾಸದಲ್ಲಿ ಮಾದರಿಯಾಗಿ ಉಳಿಯಲಿದೆ ಎಂದು ಡಿಕೆಶಿ ತಿಳಿಸಿದರು.
ಗೌರವಧನ ಹೆಚ್ಚಿಸಲು ಮನವಿ:
ಹಿಂದಿನ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ, ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಳ ಮಾಡಿದ್ದರು. ಕಳೆದ ವರ್ಷವೂ ಮತ್ತೆ ನಮ್ಮ ಸರ್ಕಾರ 1 ಸಾವಿರ ರೂ. ಹೆಚ್ಚಿಸಿದ್ದರು. ಈ ಮೂಲಕ ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ. ಇದೀಗ ಇನ್ನೊಮ್ಮೆ ಸಾವಿರ ರೂ.ಗೌರವಧನ ಹೆಚ್ಚಿಸುವಂತೆ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿಗೆ ಮನವಿ ಮಾಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಎರಡೂವರೆ ವರ್ಷಗಳಿಂದ ಇಲಾಖೆಗೆ ಹೊಸ ಸ್ವರೂಪ ನೀಡಲಾಗಿದೆ. ಕರ್ನಾಟಕದ ಮಾದರಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಇದು ನಮ್ಮ ಸಾಧನೆಗೆ ಹಿಡಿದ ಕೈಕನ್ನಡಿಯಾಗಿದೆ ಎಂದು ಸಚಿವೆ ಸಂತಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net