ರಾಜ್ಯದಲ್ಲಿ ಆಲ್ಕೋಹಾಲ್ ಪ್ರಮಾಣ ಆಧಾರಿತ ತೆರಿಗೆ ಪದ್ಧತಿ ಜಾರಿ: ಚೀಪ್ ಲಿಕ್ಕರ್ ಬಾಟಲ್ ಮೇಲೆ 20-30 ರೂ. ಹೆಚ್ಚಳ- hike on cheap liquor bottles

ಆಲ್ಕೋಹಾಲ್ ಪ್ರಮಾಣ ಆಧಾರಿತ (ಎಐಬಿ)
ಆಲ್ಕೋಹಾಲ್ ಪ್ರಮಾಣ ಆಧಾರಿತ (ಎಐಬಿ)
Published on
ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿರುವ ಸರ್ಕಾರ, ರಾಜ್ಯದಲ್ಲಿ ಮೇ 11ರಿಂದ ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಆಧಾರಿತ(ಎಐಬಿ) ‘ನೂತನ ತೆರಿಗೆ ಪದ್ಧತಿ’ಯನ್ನು ಜಾರಿಗೆ ತಂದಿದೆ.
ಈ ಹಿನ್ನೆಲೆಯಲ್ಲಿ ಕೆಳ, ಮಧ್ಯಮ ವರ್ಗದವರು ಅತಿ ಹೆಚ್ಚಾಗಿ ಸೇವಿಸುವ ಒರಿಜನಲ್ ಚಾಯ್ಸ, ಹಯ್ವಡ್ಸ್, ರಾಜಾ ವಿಸ್ಕಿ ಸೇರಿ ಇತರ ಚೀಪ್ ಲಿಕ್ಕರ್ ಮತ್ತು ಕೆಲ ಬಿಯರ್ ಬಾಟಲ್‌ಗಳ ಮೇಲೆ ಸರಾಸರಿ 20-30 ರೂ.ಬೆಲೆ ಹೆಚ್ಚಳವಾಗಿದೆ. ಈ ಮೂಲಕ ಎಐಬಿ ಆಧಾರಿತ ತೆರಿಗೆ ಹೆಚ್ಚಿಸಿರುವ ಸರ್ಕಾರವು, ಮದ್ಯ ಸೇವಿಸುವವರಿಗೆ ಶಾಕ್ ಕೊಟ್ಟಿದೆ. ಆದರೆ, ಸ್ಕಾಚ್ ವಿಸ್ಕಿ ಮತ್ತು ಬ್ಲ್ಯಾಕ್ ಲೆಬೆಲ್ ಸೇರಿ ಇತರ ಮಾದರಿಯ ಪ್ರೀಮಿಯಂ ಲಿಕ್ಕರ್ ಮೇಲೆ ಶೇ.20 ದರ ಇಳಿಕೆಯಾಗಿದ್ದು, ಈ ಮೂಲಕ ಪ್ರೀಮಿಯಂ ಲಿಕ್ಕರ್ ಸೇವಿಸುವ ಶ್ರೀಮಂತರಿಗೆ ಖುಷಿ ನೀಡಿದೆ.
ಅಬಕಾರಿ ಸುಂಕ ರಚನೆ ಆಧಾರದಲ್ಲಿ ಎಐಬಿ ತೆರಿಗೆ ವ್ಯವಸ್ಥೆಯನ್ನು ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಹೊಸ ತೆರಿಗೆ ಪದ್ಧತಿದಡಿ ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಹೆಚ್ಚು ಇದ್ದರೆ ಜಾಸ್ತಿ ಹಣ ಕೊಡಬೇಕಿದೆ. ಈ ಮೂಲಕ ಹೆಚ್ಚು ಹಣ ಕೊಟ್ಟರೆಷ್ಟೇ ಕಿಕ್ ಏರಿಸಿಕೊಳ್ಳಬಹುದು. ಹೆಚ್ಚು ಮಾರಾಟವಾಗುವ ಮದ್ಯ ಮತ್ತು ಬಿಯರ್ ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿ ಪರಿಷ್ಕರಣೆಯಾಗಿದೆ. ಹೊಸ ನೀತಿಯಡಿ ಸರ್ಕಾರದಿಂದ ಮದ್ಯ ನಿರ್ಧಾರವಾಗುವುದನ್ನು ಮುಕ್ತಗೊಳಿಸಲಾಗಿದೆ. ಮಾರುಕಟ್ಟೆ ಪರಿಗಣನೆ ಆಧಾರದ ಮೇಲೆ ಮದ್ಯ ಉತ್ಪನ್ನಗಳ ಸ್ಲ್ಯಾಬ್ ನಿರ್ಧಾರಿಸುವ ಅಧಿಕಾರವನ್ನು ಉತ್ಪಾದಕರಿಗೆ ನೀಡಲಾಗಿದೆ.
8 ಸ್ಲ್ಯಾಬ್‌ಗೆ ಇಳಿಕೆ:
ಹಿಂದೆ ಎಂಆರ್‌ಪಿ ಆಧಾರದ ಮೇಲೆ ವಿವಿಧ ಸ್ಲ್ಯಾಬ್‌ಗಳಲ್ಲಿ ಮದ್ಯ ಮಾರಾಟವಾಗುತ್ತಿತ್ತು. ಇದೀಗ ಹೊಸ ವ್ಯವಸ್ಥೆ ಜಾರಿಯಾದ ಹಿನ್ನೆಲೆಯಲ್ಲಿ ಕೆಳ,ಮಧ್ಯಮ ವರ್ಗದವರು ಬಳಸುವ ಮೊದಲ 4 ಸ್ಲ್ಯಾಬ್‌ಗಳ ಮದ್ಯ ಹೆಚ್ಚು ದುಬಾರಿಯಾಗಿದೆ. ಈ ವಿಭಾಗದ ಮದ್ಯಗಳಲ್ಲಿ ಸರಾಸರಿ ಆಲ್ಕೋಹಾಲ್ ಪ್ರಮಾಣ ಶೇ. 42.8ರಷ್ಟಿದೆ. ಈ ನಾಲ್ಕು ಸ್ಲ್ಯಾಬ್‌ಗಳು ಒಟ್ಟು ಅಬಕಾರಿ ಆದಾಯದಲ್ಲಿ ಶೇ.80 ಪಾಲು ಹೊಂದಿದೆ. ಹೆಚ್ಚುವರಿ ಅಬಕಾರಿ ಸುಂಕವನ್ನು ನಿರ್ದಿಷ್ಟ ಮಿತಿಯೊಳಗೆ ದರ ಪಟ್ಟಿಗಳ ಆಧಾರದ ಮೇಲೆ ನಿಗದಿ ಮಾಡಲಾಗಿದೆ. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಗೆ ಹೋಲಿಸಿದರೆ ಅದಕ್ಕಿಂತ ಕಡಿಮೆ ಇರುವಂತೆ ಐಎಂಎಲ್ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸಿ ಪ್ರಸ್ತುತ ಇದ್ದ 16 ಸ್ಲ್ಯಾಬ್‌ಗಳನ್ನು 8 ಸ್ಲ್ಯಾಬ್‌ಗೆ ಇಳಿಸಲಾಗಿದೆ. ಆದ್ದರಿಂದ, ಚೀಪ್ ಲಿಕ್ಕರ್ ಬೆಲೆ ಜಾಸ್ತಿಯಾದರೆ, ಪ್ರೀಮಿಯಂ ಲಿಕ್ಕರ್ ದರ ಇಳಿಕೆಯಾಗಿದೆ.
ಸರ್ಕಾರಕ್ಕೆ ಹೆಚ್ಚಿನ ಆದಾಯ:
ಪಾಶ್ಚಾತ್ಯ ದೇಶಗಳಲ್ಲಿ ಆಲ್ಕೋಹಾಲ್ ಅಂಶ ಆಧಾರಿತ ತೆರಿಗೆ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಮೊದಲ ಬಾರಿಗೆ ದೇಶದಲ್ಲೇ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರ ಈಗಾಗಲೇ ರೂಪರೇಷ ಸಿದ್ಧಪಡಿಸಿತ್ತು. ಕಳೆದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದರು.ಅದರಂತೆ, ಆರು ದಶಕಗಳ ಹಳೆಯ ಮದ್ಯ ತೆರಿಗೆ ನೀತಿಯಲ್ಲಿ ತಿದ್ದುಪಡಿ ತಂದಿದೆ. ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಕಳೆದ 3 ವರ್ಷಗಳಲ್ಲಿ 4 ಬಾರಿ ಬಿಯರ್, 2 ಬಾರಿ ಐಎಂಎಲ್ ಲಿಕ್ಕರ್ ದರ ಹೆಚ್ಚಿಸಿತ್ತು. ಇದೀಗ ಎಐಬಿ ಆಧಾರಿತ ತೆರಿಗೆ ವ್ಯವಸ್ಥೆಯಿಂದ ಚೀಪ್ ಲಿಕ್ಕರ್ ದರ ಹೆಚ್ಚಳದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಇನ್ನಷ್ಟು ಆದಾಯ ಹರಿದು ಬರಲಿದೆ.
ಶೇ.70 ಮಂದಿ ಕಡಿಮೆ ಬೆಲೆಯ ಮದ್ಯ ಸೇವನೆ
ದೇಶಾದ್ಯಂತ 16 ಕೋಟಿ ಮದ್ಯ ವ್ಯಸನಿಗಳಿದ್ದಾರೆ.ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ 15-49 ವರ್ಷ ವಯಸ್ಸಿನ ಪುರುಷರಲ್ಲಿ ಶೇ.18.3 ಮತ್ತು ಮಹಿಳೆಯರಲ್ಲಿ ಶೇ.4.8 ಮದ್ಯ ಸೇವಿಸುತ್ತಿದ್ದಾರೆ. ನಗರ ಪ್ರದೇಶಗಳಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಸೇವಿಸುವ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಅಂದಾಜು ಶೇ.11 ಜನರು ಮದ್ಯ ವ್ಯಸನಕ್ಕೆ ಸಿಲುಕಿದ್ದಾರೆ. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಲ್ಲಿ ಅಂದಾಜು ಶೇ.19 ಜನರು ಪ್ರಸ್ತುತ ಮದ್ಯ ಸೇವಿಸುತ್ತಿದ್ದಾರೆ. ಮತ್ತೊಂದು ರಾಷ್ಟ್ರೀಯ ಸಮೀಕ್ಷೆ ಪ್ರಕಾರ ದೇಶದಲ್ಲಿ ಒಟ್ಟು ಮದ್ಯಪಾನದ ಪ್ರಮಾಣ ಶೇ.14.6 ರಷ್ಟಿದೆ. ಇದರಲ್ಲಿ 7 ಕೋಟಿ ಮಂದಿ ಮದ್ಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅಂದಾಜು ಶೇ.11 ಜನರು ಮದ್ಯಪಾನ ಮಾಡುತ್ತಿದ್ದಾರೆ. ಒಟ್ಟು ಮದ್ಯವ್ಯಸನಿಗಳ ಪೈಕಿ ಶೇ.70 ಮಂದಿ ಕಡಿಮೆ ಬೆಲೆಯ ಮದ್ಯವನ್ನು ಅಧಿಕವಾಗಿ ಸೇವಿಸುತ್ತಿದ್ದಾರೆ.
180 ಎಂಎಲ್ ಮದ್ಯ ದರ
ಮದ್ಯದ ವಿಧ ಪ್ರಸ್ತುತ ದರ ಹೊಸ ದರ( ರೂ.ಗಳಲ್ಲಿ)
ಒರಿಜನಲ್ ಚಾಯ್ಸ 95 125
ಓಲ್ಡ್ ಟವರ್ನ್ 80 105
ರಾಜಾ ವಿಸ್ಕಿ 70 95
ಹಯ್ವಡ್ಸ್ 100 125
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net