ಬರ-ನೆರೆ ಸಮಸ್ಯೆಗೆ ಕ್ಯಾರೆ ಅನ್ನದ ರಾಜ್ಯ ಸರ್ಕಾರ ಪ್ರಗತಿ ಪರಿಶೀಲನೆ ನೆಪದಲ್ಲಿ ಜಾಲಿ ಟ್ರಿಪ್: ಎಚ್ಡಿಕೆ ವಾಗ್ದಾಳಿ
ಎಚ್.ಡಿ.ಕುಮಾರಸ್ವಾಮಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸರ್ಕಾರ ಜನರ ಸಮಸ್ಯೆಗಳಿಗಿಂತ ರಾಜಕೀಯಕ್ಕೆ ಆದ್ಯತೆ ನೀಡುತ್ತಿದೆ
ಜನರು ಗೂಳೆ ಹೋಗುತ್ತಿದ್ದರೂ ಮುಖ್ಯಮಂತ್ರಿಗೆ ಇದರ ಪರಿವೇ ಇಲ್ಲ
ಬೆಂಗಳೂರು:
ರಾಜ್ಯದಲ್ಲಿ ಬರ ಮತ್ತು ನೆರೆ ಸಮಸ್ಯೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನರು ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿನ್ನರ್ ಸಭೆ ಮತ್ತು ರಾಜಕೀಯ ಪ್ರವಾಸಗಳಲ್ಲಿ ತೊಡಗಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ನಡೆಸುತ್ತಿರುವ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಭಿವೃದ್ಧಿ ವಿಚಾರಗಳ ಬದಲು ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್)ಕುರಿತೇ ಹೆಚ್ಚು ಚರ್ಚೆ ನಡೆಸಲಾಗುತ್ತಿದೆ. ಸರ್ಕಾರ ಜನರ ಸಮಸ್ಯೆಗಳಿಗಿಂತ ರಾಜಕೀಯಕ್ಕೆ ಆದ್ಯತೆ ನೀಡುತ್ತಿದೆ ಎಂದು ಎಂದು ಆರೋಪಿಸಿದರು.
ಮುಖ್ಯಮಂತ್ರಿಯವರ ರಾಜ್ಯ ಪ್ರವಾಸವನ್ನು ಪ್ರಗತಿ ಪರಿಶೀಲನೆ ನೆಪದ ಜಾಲಿ ಟ್ರಿಪ್ ಎಂದು ಟೀಕಿಸಿದ ಅವರು, ರಾಜ್ಯದಲ್ಲಿ ಬರ, ನೆರೆ ಮತ್ತು ಕುಡಿಯುವ ನೀರಿನ ಸಮಸ್ಯೆಗಳು ತೀವ್ರವಾಗಿದ್ದರೂ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ರಾಜಕೀಯ ಕಾರ್ಯಕ್ರಮಗಳಲ್ಲಿ ನಿರತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಧಾನಸೌಧ ಮೆಟ್ಟಿಲಿಗೆ ನಮಸ್ಕಾರ ಮಾಡಿ ಹೋದಂತೆಯೇ ಸುವರ್ಣ ಸೌಧಕ್ಕೆ ನಮಸ್ಕಾರ ಮಾಡಿಕೊಂಡು ಹೋಗಿದ್ದು ನೋಡಿ ಏನೋ ಪರಿವರ್ತನೆ ಆಗಿದೆ ಎಂದು ಭಾವಿಸಿದ್ದೆ. ಆದರೆ, ಅವರಲ್ಲಿ ಯಾವುದೇ ಪರಿವರ್ತನೆ ಕಾಣುತ್ತಿಲ್ಲ. ನಾಡಿನ ಜನರಿಗೆ ಸುಳ್ಳು ಹೇಳಿಕೊಂಡು ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಜನರು ಗೂಳೆ ಹೋಗುತ್ತಿದ್ದರೂ ಮುಖ್ಯಮಂತ್ರಿಗೆ ಇದರ ಪರಿವೇ ಇಲ್ಲದೆ ಸುಖಾ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ಸಾಲಮನ್ನಾ ಮಾಡಲು ಕಷ್ಟ ಎಂದು ಸಿಎಂ ಹೇಳಿದ್ದಾರೆ. ಇನ್ನೊಂದು ಕಡೆ ಚಿಂತನೆ ಮಾಡುತ್ತೇವೆ ಎನ್ನುತ್ತಾರೆ. ಈ ದ್ವಂದ್ವ ಏಕೆ ಎಂದು ಕೇಳಿದರು.
ಸಿಎಂ ಗಾಣಗಾಪುರಕ್ಕೆ ದೇವರ ದರ್ಶನಕ್ಕೆ ಹೋಗಿದ್ದರು. ಅಲ್ಲಿನ ಹೆಣ್ಣುಮಗಳು ಒಬ್ಬರು ಬರದ ದರ್ಶನ ಮಾಡಿಸಿದ್ದರು. ಉತ್ತರ ಕರ್ನಾಟಕದ ಹಳ್ಳಿಗಳು ಪರಿಸ್ಥಿತಿ ಏನಿದೆ ಎಂಬುದು ಮುಖ್ಯಮಂತ್ರಿಗೆ ಗೊತ್ತಿಲ್ಲ. ಬೆಳಗಾವಿಯಲ್ಲಿ 20 ಶಾಸಕರ ಜತೆ ಸಿಎಂ ಡಿನ್ನರ್ ಸಭೆ ಮಾಡಿದರು. ಆದರೆ ಜನರ ಊಟದ ಬಗ್ಗೆ ಮುಖ್ಯಮಂತ್ರಿ ಯಾವುದೇ ಆಶ್ವಾಸನೆ ನೀಡಲಿಲ್ಲ ಎಂದು ಕಿಡಿಕಾರಿದರು.
ಸಿಎಂ ಕಲಬುರ್ಗಿಯಲ್ಲಿ ಪ್ರವಾಸ ಮಾಡಿದರು. ಬೀದರ್‌ನಲ್ಲಿ ಅನುಭವ ಮಂಟಪ ದರ್ಶನ ಮಾಡಿ ಆ ಬಳಿಕ ಕಾಂಗ್ರೆಸ್ ಸಭೆ ಮಾಡಿದರು. ಕಲಬುರ್ಗಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಅ ಸಭೆಗೆ ಮಾಧ್ಯಮಗಳಿಗೆ ಪ್ರವೇಶ ಇರಲಿಲ್ಲ. ಗೌಪ್ಯ ಸಭೆ ಮಾಡುವ ಅಗತ್ಯವೇನಿತ್ತು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಕೃಷ್ಣಾ-ಗೋದಾವರಿ-ಕಾವೇರಿ ನದಿ ಜೋಡಣೆ
ರಾಜ್ಯದ ಸಮ್ಮತಿ ಹೇಳಿಕೆಗೆ ಎಚ್ಡಿಕೆ ಆಕ್ರೋಶ:
ಕೃಷ್ಣಾ, ಗೋದಾವರಿ ಹಾಗೂ ಕಾವೇರಿ ನದಿಗಳ ಜೋಡಣೆ ಯೋಜನೆಗೆ ಕರ್ನಾಟಕದ ಸಮ್ಮತಿ ಇದೆ ಎಂದು ಮುಖ್ಯಮಂತ್ರಿ ನೀಡಿರುವ ಹೇಳಿಕೆಯನ್ನು ಎಚ್ಡಿಕೆ ತೀವ್ರವಾಗಿ ಖಂಡಿಸಿದ್ದು, ರಾಜ್ಯದ ನೀರಾವರಿ ಹಿತಾಸಕ್ತಿಯ ಬಗ್ಗೆ ಮುಖ್ಯಮಂತ್ರಿ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ನದಿ ಜೋಡಣೆ ಯೋಜನೆಗೆ ತಮ್ಮ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ, ಮೊದಲು ಕರ್ನಾಟಕಕ್ಕೆ ಎಷ್ಟು ನೀರು ಹಂಚಿಕೆಯಾಗುತ್ತದೆ ಎಂಬುದು ಸ್ಪಷ್ಟವಾಗಬೇಕು. ನೀರಿನ ಪ್ರಮಾಣ ನಿಗದಿಯಾಗದೇ ಯೋಜನೆಗೆ ಸಮ್ಮತಿ ನೀಡುವುದು ರಾಜ್ಯದ ಹಿತಾಸಕ್ತಿಗೆ ವಿರುದ್ಧ ಎಂದು ಹೇಳಿದರು.
2023ರಲ್ಲಿ ಸಿದ್ಧಗೊಂಡ ಸಮಗ್ರ ಯೋಜನಾ ವರದಿಯಲ್ಲಿ (ಡಿಪಿಆರ್) ಕರ್ನಾಟಕಕ್ಕೆ ನೀರಿನ ಹಂಚಿಕೆ ಇರಲಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೋರಾಟದ ಬಳಿಕ 15 ಟಿಎಂಸಿ ನೀರು ಮಾತ್ರ ಕರ್ನಾಟಕಕ್ಕೆ ದೊರೆತಿದ್ದು, ಅದನ್ನೂ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸುವ ಷರತ್ತು ವಿಧಿಸಲಾಗಿದೆ ಎಂದು ಅವರು ತಿಳಿಸಿದರು.
ನದಿ ಜೋಡಣೆ ಮತ್ತು ನೀರಿನ ಹಂಚಿಕೆ ಎನ್ನುವುದು ಬೆಂಗಳೂರಿನಲ್ಲಿ ಕುಳಿತು ರಿಯಲ್ ಎಸ್ಟೇಟ್ ಮಾಡುವಷ್ಟು ಸುಲಭದ ವಿಷಯವಲ್ಲ. ಇಂತಹ ಸೂಕ್ಷ್ಮ ವಿಚಾರದಲ್ಲಿ ಮುಖ್ಯಮಂತ್ರಿ ತಜ್ಞರು, ಅಧಿಕಾರಿಗಳು ಹಾಗೂ ರಾಜ್ಯದ ಪರ ವಾದಿಸುವ ಕಾನೂನು ತಜ್ಞರ ಸಲಹೆ ಪಡೆಯಬೇಕಿತ್ತು ಎಂದು ಕುಮಾರಸ್ವಾಮಿ ಹೇಳಿದರು.
ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಕೇಂದ್ರ ಸರ್ಕಾರ ಘೋಷಿಸಲಿದೆ ಎಂಬ ಮುಖ್ಯಮಂತ್ರಿಯವರ ಹೇಳಿಕೆಯನ್ನು ಪ್ರಶ್ನಿಸಿದ ಅವರು, ಈ ಕುರಿತು ಕೇಂದ್ರೀಯ ಜಲ ಆಯೋಗ ಅಥವಾ ರಾಷ್ಟ್ರೀಯ ಜಲ ಮಂಡಳಿಯಲ್ಲಿ ಯಾವುದೇ ಅಂತಿಮ ನಿರ್ಧಾರವಾಗಿದೆಯೇ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶಾಸಕ ಸ್ವರೂಪ ಗೌಡ, ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಹಾಗೂ ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ ಉಪಸ್ಥಿತರಿದ್ದರು.
*ನದಿ ಜೋಡಣೆ ಮತ್ತು ನೀರಿನ ಹಂಚಿಕೆ ಎನ್ನುವುದು ಬೆಂಗಳೂರಿನಲ್ಲಿ ಕುಳಿತು ರಿಯಲ್ ಎಸ್ಟೇಟ್ ಮಾಡುವಷ್ಟು ಸುಲಭದ ವಿಷಯವಲ್ಲ. ಇಂತಹ ಸೂಕ್ಷ್ಮ ವಿಚಾರದಲ್ಲಿ ಮುಖ್ಯಮಂತ್ರಿ ತಜ್ಞರು, ಅಧಿಕಾರಿಗಳು ಹಾಗೂ ರಾಜ್ಯದ ಪರ ವಾದಿಸುವ ಕಾನೂನು ತಜ್ಞರ ಸಲಹೆ ಪಡೆಯಬೇಕಿತ್ತು.