ಮದ್ದೂರು: ನಗರದ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮ ದೇವಸ್ಥಾನದ ಆವರಣದಲ್ಲಿ ಶ್ರೀ ಸಿಡಿರಾಯಣ್ಣ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಮಠಮನೆಯಿಂದ ಭಕ್ತರಿಂದ ಬಾಯಿ ಬೀಗ ಸಮೇತ ಶ್ರೀ ಸಿಡಿರಣ್ಣ ಉತ್ಸವ ಪ್ರಮುಖ ಬೀದಿಗಳಲ್ಲಿ ಆಗಮಿಸಿದಾಗ ಭಕ್ತರು ಸಿಡಿರಾಯಣ್ಣನ ಮೇಲೆ ಮೂಟೆಗಟ್ಟಲೆ ಕಡ್ಲೆಪುರಿ ಸುರಿಯುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.
ನಂತರ ಶ್ರೀ ಮದ್ದೂರಮ್ಮ ದೇಗುಲ ಆವರಣದಲ್ಲಿ ಸಿಡಿ ರಾಯಣ್ಣ ಉತ್ಸವ ನೆರವೇರಿತು. ಸಿಡಿ ರಾಯಣ್ಣನಿಗೆ ಹರಕೆ ಹೊತ್ತ ಭಕ್ತರು ತಮ್ಮ ಮಕ್ಕಳನ್ನು ಕಾಗಡಿಯಲ್ಲಿ ಕೊಡಿಸಿ ಸುತ್ತಿಸುತ್ತಾರೆ. ಹೀಗೆ ಮಾಡಿದರೆ, ಮಕ್ಕಳಿಗೆ ಯಾವುದೇ ಖಾಯಿಲೆ ಬರುವುದಿಲ್ಲ ಎಂಬ ನಂಬಿಕೆ. ಇದಲ್ಲದೇ ನವ ದಂಪತಿಗಳು ಈ ಉತ್ಸವದಲ್ಲಿ ಪಾಲ್ಗೊಂಡು ಸಿಡಿರಾಯಣ್ಣನಿಗೆ ಹಣ್ಣು-ದವನ ಎಸೆದು ಹರಕೆ ಸಲ್ಲಿಸುವುದು, ಬಾಯಿ ಬೀಗ ಹರಕೆ ಸಲ್ಲಿಸುವುದು ವಾಡಿಕೆಯಾಗಿದೆ.
ಸ್ಟಾರ್ ಯುವಕರ ಬಳಗದ ವತಿಯಿಂದ ಭಕ್ತರಿಗೆ ಪಾನಕ, ಮಜ್ಜಿಗೆ ವಿತರಣೆ ಮಾಡಲಾಯಿತು. ಸಾಗರ್, ಹೇಮಂತ್, ಪುನೀತ್, ಸಿದ್ದರಾಜು, ಅವಿನಾಶ, ಹರ್ಷ ಇದ್ದರು.