ಆಸ್ತಿಕರನ್ನು ಆಕರ್ಷಿಸುತ್ತಿರುವ ಶ್ರೀ ಶಿವಶಕ್ತಿಧಾಮ

ಶ್ರೀ ಶಿವಶಕ್ತಿಧಾಮ
ಶ್ರೀ ಶಿವಶಕ್ತಿಧಾಮ
Published on

| ಪ್ರಶಾಂತ ರಿಪ್ಪನ್ಪೇಟೆ

ಹಿಂದೂ ಸಂಸ್ಕೃತಿಯಲ್ಲಿ ದೇವಾಲಯಗಳನ್ನು ಶಕ್ತಿಕೇಂದ್ರ ಎಂದೇ ಕರೆಯಲಾಗುತ್ತದೆ. ಯಾವುದೇ ದೇವಾಲಯಗಳಲ್ಲಿ ನಡೆಯುವ ಶಾಸ್ತ್ರಬದ್ಧ ಪೂಜೆ-ಪುನಸ್ಕಾರಗಳು, ಹೋಮ-ಹವನಗಳು ಆ ಕ್ಷೇತ್ರದ ಶಕ್ತಿವೃದ್ಧಿಯ ಜೊತೆಗೆ ನಂಬಿ ಬರುವ ಭಕ್ತರ ಬೇಡಿಕೆಯನ್ನು ಈಡೇರಿಸುತ್ತವೆ ಎಂಬ ನಂಬಿಕೆಗಳಿವೆ. ಈ ನಂಬಿಕೆಗಳು ನಿಜವಾದಾಗ ಭಕ್ತರ ಬಾಯಿಂದ ಬಾಯಿಗೆ ಹರಡಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತದೆ. ಅಂತೆಯೇ ಹಿಂದೂ ಸಂಸ್ಕೃತಿಯ ನಿರಂತರ ಪ್ರಸಾರದ ಸತ್ಕಾಳಜಿ ಇರಿಸಿಕೊಂಡ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಎಂ.ಡಿ. ಡಾ. ಆನಂದ ಸಂಕೇಶ್ವರ ಅವರು ಪಾಲಿಕೊಪ್ಪದ ಹೆದ್ದಾರಿ ಪಕ್ಕದಲ್ಲಿ ನಿರ್ವಿುಸಿರುವ ಶ್ರೀ ಶಿವಶಕ್ತಿ ಧಾಮವನ್ನು ಪುರಾತನ ಶೃಂಗೇರಿ ಶಾರದಾ ಪೀಠಕ್ಕೆ ವಹಿಸಿಕೊಡುವ ಮೂಲಕ ನಿರಂತರ ಪೂಜಾ ಕೈಂಕರ್ಯಗಳು ನಡೆಯುವುದಕ್ಕೆ ಕಾರಣೀಭೂತರಾಗಿರುವುದು ಸಮಾಜಕ್ಕೆ ಗೊತ್ತಿರುವ ಸಂಗತಿ.

ಈ ದೇವಾಲಯ ಪ್ರತಿಷ್ಠಾಪನೆಯಾದಾಗಿನಿಂದ ಉತ್ತರ ಕರ್ನಾಟಕ ಭಾಗದ ಬೃಹತ್ ಧಾರ್ವಿುಕ ಕೇಂದ್ರವಾಗುವ ನಿರೀಕ್ಷೆ ಎಲ್ಲರಲ್ಲಿತ್ತು. ಆ ನಿರೀಕ್ಷೆಯನ್ನು ಮೀರಿ ಉತ್ತರ ಕರ್ನಾಟಕ ಮಾತ್ರವಲ್ಲದೆ ನಾಡಿನ ವಿವಿಧ ಭಾಗಗಳಿಂದ ದೇವಾಲಯಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ವಿವಿಧ ಮಾಧ್ಯಮಗಳಲ್ಲಿ ಮಾಹಿತಿ ಪಡೆದುಕೊಂಡಿರುವ ಆಸ್ತಿಕ ಜನತೆ ದೇವಾಲಯದ ದರ್ಶನಕ್ಕಾಗಿ ನಿತ್ಯ ಆಗಮಿಸುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ವಾರಾಂತ್ಯ, ರಜಾ ದಿನಗಳಂದು ಇನ್ನೂ ಹೆಚ್ಚಾಗುತ್ತಾರೆ. ಅದರಲ್ಲೂ ಹಬ್ಬ-ಹರಿದಿನ, ವಿಶೇಷ ದಿನಗಳಂದು ನಾಲ್ಕೈದು ಸಾವಿರ ಜನರು ಭೇಟಿ ನೀಡಿ ಪೂಜೆ ಸಲ್ಲಿಸಿ ದರ್ಶನ, ಪ್ರಸಾದ ಸ್ವೀಕರಿಸುತ್ತಿದ್ದಾರೆ.

ನೆರೆಹೊರೆಯಲ್ಲಿರುವ ಪವಿತ್ರ ಕ್ಷೇತ್ರಗಳು

ಹುಬ್ಬಳ್ಳಿಯು ಶತಮಾನಗಳಿಂದಲೂ ಧಾರ್ವಿುಕ ಕಾರಣಕ್ಕೆ ರಾಷ್ಟ್ರ ಪ್ರಸಿದ್ಧಿ ಪಡೆದ ನಗರ. ಮಹಾ ಶಿವಯೋಗಿಗಳಾಗಿದ್ದ ಶ್ರೀಸಿದ್ಧಾರೂಢ ಸ್ವಾಮಿಗಳಿಗೆ ದೇಶಾದ್ಯಂತ ಭಕ್ತರಿದ್ದಾರೆ. ದೇಶದ ವಿವಿಧೆಡೆಯಿಂದ ಅಜ್ಜನ ದರ್ಶನಕ್ಕೆ ಭಕ್ತರು ಇಂದಿಗೂ ಬರುತ್ತಾರೆ. ಅಂತೆಯೇ ಹುಬ್ಬಳ್ಳಿಯ ಹೊರವಲಯದಲ್ಲಿರುವ ಪಾಲಿಕೊಪ್ಪವು ಬಹು ಹಿಂದಿನಿಂದಲೂ ಪವಿತ್ರ ಮತ್ತು ಪಾವನ ಭೂಮಿಯಾಗಿ ಪ್ರಸಿದ್ಧವಾಗಿದೆ. ವೀರಶೈವ ಲಿಂಗಾಯತ ಧರ್ಮದ ಸನಾತನ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀರಂಭಾಪುರಿ ವೀರಸಿಂಹಾಸನ ಮಹಾಪೀಠದ 119ನೇ ಜಗದ್ಗುರುಗಳಾಗಿ, ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಜಾಗತಿಕ ಸಂದೇಶ ಸಾರಿದ ಶ್ರೀ ಗಂಗಾಧರ ಜಗದ್ಗುರುಗಳ ಜನ್ಮಸ್ಥಾನ ಈ ಪಾಲಿಕೊಪ್ಪ. ಇಂದಿಗೂ ಪಾಲಿಕೊಪ್ಪದಲ್ಲಿ ಪೂಜ್ಯರು ಜನಿಸಿದ ಹಿರೇಮಠ ಮತ್ತು ಆ ಪರಂಪರೆ ಇದೆ. ಪಾಲಿಕೊಪ್ಪಕ್ಕೆ ಮೂರ್ನಾಲ್ಕು ಕಿ.ಮೀ. ದೂರದಲ್ಲಿರುವ ತಡಸ ಕ್ರಾಸ್ನಲ್ಲಿರುವ ವೇದಮಾತೆ ಗಾಯಿತ್ರಿ ದೇವಿ ದೇವಾಲಯವು ದಕ್ಷಿಣ ಭಾರತದ ಅಪರೂಪದ ಕ್ಷೇತ್ರ.

ಇದು ಶ್ರೀಬಾಲಕೃಷ್ಣಾನಂದ ಸರಸ್ವತಿ ಸ್ವಾಮೀಜಿಯವರ ಸತ್ಯಸಂಕಲ್ಪದ ಸಾಕಾರ ರೂಪವಾಗಿದೆ. ಪಕ್ಕದ ತಡಸ ಗ್ರಾಮದೊಳಗೆ ಒಂದು ಪವಾಡ ವೀರಭದ್ರೇಶ್ವರ ದೇವಾಲಯವಿದೆ. ಜೈನರಾಗಿದ್ದ ಶ್ರೀಬಸವರಾಜ ಗುರೂಜಿಯವರಿಂದ ಸ್ಥಾಪನೆಗೊಂಡು ಹಲವು ಪವಾಡ ಸೃಷ್ಟಿಸುತ್ತಿರುವ ಕ್ಷೇತ್ರವಿದು. ವಿಆರ್ಎಲ್ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ಜೈನ ಸಮುದಾಯದ ಪವಿತ್ರ ಕ್ಷೇತ್ರವಾಗಿರುವ ವರೂರು ನವಗ್ರಹ ತೀರ್ಥಕ್ಷೇತ್ರವು ಪಾಲಿಕೊಪ್ಪದಿಂದ ಕೇವಲ 2 ಕಿ.ಮೀ.ದೂರದಲ್ಲಿದೆ. ಈ ಕ್ಷೇತ್ರಕ್ಕೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇದೇ ಪಿ.ಬಿ. ರಸ್ತೆಗೆ ಹೊಂದಿಕೊಂಡಂತಿರುವ ಬುಡರಸಿಂಗಿ ಶ್ರೀ ರಾಜೇಂದ್ರ ಸುರೀಶ್ವರಜಿ ಮಹಾರಾಜರ ಮಂದಿರ, ಗಬ್ಬೂರು ಪಾರ್ಶ್ವನಾಥ ಮಂದಿರ, ಆಚಾರ್ಯ ಧನಪಾಲ್ ಸುರೀಶ್ವರಜಿ ಜೈನಮುನಿಗಳ ಸಮಾಧಿ ಇತ್ಯಾದಿ ಪ್ರಸಿದ್ಧ ಕ್ಷೇತ್ರಗಳ ಸಾಲಿಗೆ ಪಾಲಿಕೊಪ್ಪದ ಶ್ರೀ ಶಿವಶಕ್ತಿಧಾಮವು ಕಳಸಪ್ರಾಯವಾಗಿ ಸೇರ್ಪಡೆಯಾಗಿದೆ.

ದೇವರಿಗೆ ನಡೆಯುವ ವಿವಿಧ ಸೇವೆ

ಶಿವಶಕ್ತಿಧಾಮವು ಶೃಂಗೇರಿ ಶಾರದಾ ಪೀಠದ ಆಡಳಿತದಲ್ಲಿ ನಡೆಯುವ ಒಂದು ಧಾರ್ವಿುಕ ಕ್ಷೇತ್ರ. ವೈದಿಕ ಪದ್ಧತಿಯಂತೆ ಇಲ್ಲಿನ ಎಲ್ಲ ದೇವರುಗಳಿಗೆ ನಿತ್ಯ ಪೂಜೆ, ಧಾರ್ವಿುಕ ವಿಧಿ-ವಿಧಾನಗಳು ನಡೆಯುತ್ತವೆ. ಇಲ್ಲಿನ ಪ್ರಧಾನ ದೈವಸ್ಥಾನದಲ್ಲಿರುವ ಶ್ರೀ ಆನಂದೇಶ್ವರ ಸ್ವಾಮಿಗೆ ನಿತ್ಯ ರುದ್ರಾಭಿಷೇಕ, ಸೋಮವಾರ ಮತ್ತು ಪ್ರದೋಷ ಕಾಲದಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಕಾರ್ತೀಕ ಮಾಸದಲ್ಲಿ ದೀಪೋತ್ಸವ, ಶ್ರಾವಣ ಮಾಸದಲ್ಲಿ ಸ್ವಹಸ್ತ ರುದ್ರಾಭಿಷೇಕ, ಶಿವರಾತ್ರಿಯಂದು ವಿಶೇಷ ಪೂಜೆಗಳು ನಡೆಯುತ್ತವೆ.

ಜ್ಞಾನಾಂಬಿಕ ಅಮ್ಮನವರಿಗೆ ನಿತ್ಯ ಕುಂಕುಮಾರ್ಚನೆ, ನವರಾತ್ರಿ-ದಸರಾ ಸಂದರ್ಭದಲ್ಲಿ 9 ದಿನಗಳ ವಿಶೇಷ ಅಲಂಕಾರ, ಪೂಜೆ ಹಾಗೂ ದುರ್ಗಾ ಹೋಮ ಇತ್ಯಾದಿ ಸೇವೆಗಳು ನಡೆಯುತ್ತವೆ. ವಿಜಯ ಗಣಪತಿ ಸನ್ನಿಧಾನದಲ್ಲಿ ನಿತ್ಯ ಪೂಜೆಯ ಜೊತೆಗೆ ಪ್ರತಿ ಸಂಕಷ್ಠಿಯಂದು ಗಣಪತಿ ಹೋಮ, ಮೋದಕ ಸೇವೆ ಇತ್ಯಾದಿ ಪೂಜೆ ಹಾಗೂ ಗಣೇಶ ಚತುರ್ಥಿಯಂದು 5 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಅಪರೂಪವೆನಿಸುವ ಶನೈಶ್ಚರನ ಸಾನ್ನಿಧ್ಯವೂ ಇಲ್ಲಿದ್ದು, ಪ್ರತಿ ಶನಿವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಸ್ವಾಮಿಗೆ ತಿಲ ತೈಲಾಭಿಷೇಕ ಸೇವೆ ನಡೆಯುತ್ತದೆ. ಇನ್ನುಳಿದಂತೆ ನವಗ್ರಹ, ಕಾಲಭೈರವ ಮತ್ತಿತರ ಎಲ್ಲ ದೇವರ ಸಾನ್ನಿಧ್ಯದಲ್ಲೂ ನಿತ್ಯ ಪೂಜೆ ನೆರವೇರಿಸಲಾಗುತ್ತದೆ.

  • ನಿತ್ಯ ಪೂಜೆಯ ಜತೆಗೆ ಎಲ್ಲ ಹಬ್ಬ ಹರಿದಿನಗಳಂದು ವಿಶೇಷ ಪೂಜೆ.
  • ವೈಯಕ್ತಿಕ ಸಂಕಲ್ಪದ ಮೇರೆಗೆ ಮೃತ್ಯುಂಜಯ ಹೋಮ, ಗಣಪತಿ ಹೋಮ, ನವಗ್ರಹ ಶಾಂತಿ, ಕಾಳ ಸರ್ಪ ಶಾಂತಿ, ರುದ್ರ ಹೋಮ, ಲಕ್ಷ್ಮೀ ನಾರಾಯಣ ಹೃದಯ ಹೋಮ.
  • ಜಾತಕ ಸೂಚಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
  • ಮೂಲ ನಕ್ಷತ್ರ ದಿವಸ ಅಕ್ಷರಾಭ್ಯಾಸ ಸೇವೆ ಮಾಡಿಸಿಕೊಡಲಾಗುವುದು.
  • ಅಕ್ಷಯ ತೃತೀಯದಂದು ಸಾಮೂಹಿಕ ಅಕ್ಷರಾಭ್ಯಾಸ ಇರುತ್ತದೆ.
  • ಅನ್ನ ದಾಸೋಹಕ್ಕೆ ಭಕ್ತರು ಅಕ್ಕಿ, ಬೇಳೆ, ಬೆಲ್ಲ, ಇತ್ಯಾದಿ ದಿನಸಿ ವಸ್ತುಗಳನ್ನು ದಾನವಾಗಿ ಕೊಡಬಹುದು.
  • ಜನ್ಮದಿನದ ಸ್ಮರಣಾರ್ಥ ವಿಶೇಷ ಅನ್ನದಾನ ಸೇವೆ.
  • ಕುಟುಂಬದ ಹಿರಿಯರ ಪುಣ್ಯಸ್ಮರಣೆ ನಿಮಿತ್ತ ನಿತ್ಯ ಅನ್ನ ದಾಸೋಹ ಸೇವೆ.
  • ಗೋ ಪೂಜೆ ಸದ್ಯದಲ್ಲೇ ಆರಂಭ.

ವೈಜ್ಞಾನಿಕತೆ, ಪ್ರಗತಿಪರ ಚಿಂತನೆ ಇತ್ಯಾದಿ ಹೆಸರಿನಲ್ಲಿ ಧಾರ್ವಿುಕ ಆಚರಣೆ, ನಂಬಿಕೆಗಳ ಬಗ್ಗೆ ಅಲ್ಲಲ್ಲಿ ಲಘುವಾದ ಮಾತುಗಳು ಆಗಾಗ ಕೇಳಿಬಂದರೂ, ಸನಾತನ ಹಿಂದೂ ಧಾರ್ವಿುಕ ವಿಚಾರಗಳಲ್ಲಿ ಜನರು ಶ್ರದ್ಧೆ ಕಳೆದುಕೊಂಡಿಲ್ಲ. ಈ ಮಾತಿಗೆ ಸಾಕ್ಷಿ ಉತ್ತರ ಕರ್ನಾಟಕದ ವಾಣಿಜ್ಯ ನಗರ ಹುಬ್ಬಳ್ಳಿಯ ಹೊರ ವಲಯದಲ್ಲಿರುವ ಪಾಲಿಕೊಪ್ಪದ ಶ್ರೀ ಶಿವಶಕ್ತಿಧಾಮ. ಆಸ್ತಿಕರನ್ನು ಆಕರ್ಷಿಸುತ್ತಿರುವ ಪಾಲಿಕೊಪ್ಪದ ಶ್ರೀಶಿವಶಕ್ತಿಧಾಮವು ಸಾವಿರಾರು ಜನರ ಶ್ರದ್ಧಾ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ.

ಪ್ರಮುಖ ಧಾರ್ವಿುಕ ತಾಣವಾಗಿ ಪ್ರಸಿದ್ಧಿ

2024ರ ಮಾಘ ಮಾಸದ ಶುಕ್ಲಪಕ್ಷದ ತ್ರಯೋದಶಿ (22.02.2024) ಯಂದು ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಜಗದ್ಗುರು ಶ್ರೀವಿಧುಶೇಖರ ಭಾರತಿ ಮಹಾಸ್ವಾಮೀಜಿ ಅವರ ಅಮೃತ ಹಸ್ತದಿಂದ ಪ್ರತಿಷ್ಠಾಪನೆಗೊಂಡ ಶ್ರೀಶಿವಶಕ್ತಿಧಾಮವು ಕೇವಲ ಎರಡು ವರ್ಷಗಳಲ್ಲಿ ಪ್ರಸಿದ್ಧ ಧಾರ್ವಿುಕ ತಾಣವಾಗಿ ಮಾರ್ಪಾಡಾಗಿದೆ. ಹುಬ್ಬಳ್ಳಿ ಧಾರವಾಡ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಯ ಜನರಿಗೂ ಒಮ್ಮೆ ಭೇಟಿ ನೀಡಲೇ ಬೇಕೆಂಬ ಅಪೇಕ್ಷೆ ಉಂಟಾಗಿದೆ. ಜೊತೆಗೆ ಶ್ರೀಕ್ಷೇತ್ರವು ಪೂನಾ-ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಈ ಮಾರ್ಗವಾಗಿ ಸಂಚರಿಸುವ ಆಸ್ತಿಕ ಬಂಧುಗಳನ್ನು ಸೆಳೆಯುತ್ತಿದೆ. ಕ್ಷೇತ್ರದ ಹೊರನೋಟವನ್ನು ಕಂಡು ಮಾರುಹೋಗಿ ಕಡ್ಡಾಯವಾಗಿ ಭೇಟಿ ನೀಡುವವರಿದ್ದಾರೆ. ಹಾಗೆ ಭೇಟಿ ನೀಡಿದವರು ತಮ್ಮ ಬಂಧುಗಳು, ಸ್ನೇಹಿತರಿಗೂ ಭೇಟಿ ನೀಡುವಂತೆ ಮಾಹಿತಿ ನೀಡುತ್ತಾರೆ. ಇದರಿಂದಾಗಿ ನಿತ್ಯ ಹೊಸ ಹೊಸ ಭಕ್ತರ ತಂಡಗಳು ಕ್ಷೇತ್ರಕ್ಕೆ ಭೇಟಿ ನೀಡುತ್ತಿವೆ.

ಸನಾತನ ಧರ್ಮದ ನಂಬಿಕೆ ಮತ್ತು ಆಚರಣೆಗಳು ಕೇವಲ ಪರಂಪರೆಯಾಗಿರದೆ ದೈನಂದಿನ ಜೀವನ ಕ್ರಮವಾಗಿವೆ. ಅಂತಹ ಸನಾತನ ಸಂಸ್ಕೃತಿಯನ್ನು ನಿರಂತರವಾಗಿ ಪ್ರಸಾರ ಮಾಡುವ ಧಾರ್ವಿುಕ ಕೇಂದ್ರಗಳು ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಇವೆ. ಸಮಾಜದಿಂದ ಎಲ್ಲವನ್ನು ಪಡೆದ ಮನುಷ್ಯ ಸಮಾಜಕ್ಕೆ ಏನಾದರೂ ಮರಳಿ ಕೊಡಬೇಕು. ಅಂತಹ ಉದ್ದೇಶದಿಂದ ನಿರ್ವಣವಾಗಿರುವುದೇ ಹುಬ್ಬಳ್ಳಿಯ ಪಾಲಿಕೊಪ್ಪದ ಶ್ರೀಶಿವಶಕ್ತಿಧಾಮ. ಇದು ಕೇವಲ ಧಾರ್ವಿುಕ ಕೇಂದ್ರವಾಗಿರದೆ, ಆಗಮಿಸುವ ಭಕ್ತರ ಮನಸ್ಸಿಗೆ ನೆಮ್ಮದಿ ನೀಡುವ ಯೋಗಭೂಮಿ, ಪುಣ್ಯಭೂಮಿಯೂ ಆಗಿದೆ. ಇಲ್ಲಿರುವ ಸಭಾಭವನವು ಎಲ್ಲ ವರ್ಗದ ಜನರಿಗೆ ಮದುವೆ ಮತ್ತಿತರ ಶುಭ ಕಾರ್ಯಗಳನ್ನು ಮಾಡಲು ಉತ್ತಮ ಅವಕಾಶ ಒದಗಿಸಲಿದೆ. ಯಾವುದೇ ಭೇದವಿಲ್ಲದೆ ಸಮಾಜದ ಎಲ್ಲ ಸ್ತರದ ಜನರು ಇದರ ಸದುಪಯೋಗ ಮಾಡಿಕೊಳ್ಳಬಹುದು.

| ಡಾ. ವಿಜಯ ಸಂಕೇಶ್ವರ ಚೇರ್ಮನ್, ವಿಆರ್​ಎಲ್​ ಸಮೂಹ ಸಂಸ್ಥೆಗಳು

ಮನುಷ್ಯ ವ್ಯವಹಾರ, ಉದ್ಯೋಗ ಇತ್ಯಾದಿ ಎಷ್ಟೇ ಒತ್ತಡದಲ್ಲಿದ್ದರೂ ತಾನು ನಂಬಿರುವ ದೇವರ ಸಾನ್ನಿಧ್ಯಕ್ಕೆ ಬಂದಾಗ ನೆಮ್ಮದಿಯನ್ನು ಕಾಣುತ್ತಾನೆ. ದೇಶದಲ್ಲಿ ಹಲವು ಪ್ರಸಿದ್ಧ ಧಾರ್ವಿುಕ ಕ್ಷೇತ್ರಗಳಿದ್ದರೂ ಎಲ್ಲರೂ ಆ ಎಲ್ಲ ಕ್ಷೇತ್ರಗಳಿಗೆ ಹೋಗುವುದಕ್ಕೆ ಸಾಧ್ಯವಿಲ್ಲ. ಅಂತಹವರು ತಮ್ಮ ಊರಿನಲ್ಲೇ ದೇವರ ದರ್ಶನ ಮಾಡಬೇಕೆಂಬ ಉದ್ದೇಶದಿಂದ ನಾವು, ವಿಆರ್ಎಲ್ ಕೇಂದ್ರ ಕಚೇರಿ ಇರುವ ವರೂರು ಸಮೀಪದ ಪಾಲಿಕೊಪ್ಪದಲ್ಲಿ ದೇವಾಲಯಗಳ ಸಮುಚ್ಚಯವೊಂದನ್ನು ನಿರ್ವಿುಸಿ ಅದನ್ನು ಶೃಂಗೇರಿ ಮಠದವರಿಗೆ ಒಪ್ಪಿಸಿದ್ದೇವೆ. ಆಸ್ತಿಕ ಜನರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗಲಿ ಎಂಬ ಸದಿಚ್ಛೆ ನಮ್ಮದು. ದೇವಾಲಯ ಲೋಕಾರ್ಪಣೆಗೊಂಡು ಎರಡು ವರ್ಷ ಪೂರ್ಣಗೊಂಡಿದ್ದು, ನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ಬರುತ್ತಿದ್ದಾರೆ. ಹಾಗೆ ಬರುವ ಭಕ್ತರ ಇಷ್ಟಾರ್ಥಗಳು ಈಡೇರಲಿ. ದೇವರ ಕೃಪೆ ಎಲ್ಲರಿಗೂ ದೊರೆಯಲಿ ಎಂದು ಆಶಿಸುತ್ತೇನೆ.

| ಡಾ. ಆನಂದ ಸಂಕೇಶ್ವರ ಎಂ.ಡಿ., ವಿಆರ್​ಎಲ್​ ಸಮೂಹ ಸಂಸ್ಥೆಗಳು

ಹುಬ್ಬಳ್ಳಿಯ ಪಾಲಿಕೊಪ್ಪ ಗ್ರಾಮದಲ್ಲಿರುವ ಶ್ರೀಶಿವಶಕ್ತಿಧಾಮದ ಪ್ರತಿಷ್ಠಾಪನಾ ಕುಂಭಾಭಿಷೇಕವನ್ನು ಜಗದ್ಗುರು ಶ್ರೀವಿಧುಶೇಖರ ಭಾರತೀ ಸನ್ನಿಧಾನಂಗಳವರು ತಮ್ಮ ಅಮೃತ ಹಸ್ತದಿಂದ ನೆರವೇರಿಸಿದ್ದು, ಪ್ರಸ್ತುತ 2ನೇ ವರ್ಷದ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವ ವಿಚಾರವನ್ನರಿತು ಶೃಂಗೇರಿ ಪೀಠದ ಉಭಯ ಶ್ರೀ ಜಗದ್ಗುರು ಮಹಾಸ್ವಾಮಿಗಳವರು ಬಹಳ ಸಂತೋಷಪಟ್ಟಿದ್ದಾರೆ. ಶ್ರೀ ಶಾರದಾ ಚಂದ್ರಮೌಳೀಶ್ವರರ ಕೃಪೆಯಿಂದ ಹಮ್ಮಿಕೊಂಡಿರುವ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಯಶಸ್ವಿಯಾಗಿ ಪೂರ್ತಿಗೊಳ್ಳಲಿ, ಭಾಗವಹಿಸಿದ ಸಮಸ್ತ ಆಸ್ತಿಕ ಭಕ್ತ ಜನರೆಲ್ಲರಿಗೂ ಉತ್ತರೋತ್ತರ ಶ್ರೇಯಸ್ಸು ಲಭಿಸಲಿ ಎಂದು ಶ್ರೀಗಳವರು ಆಶೀರ್ವದಿಸಿದ್ದಾರೆ.

| ಪಿ.ಎ. ಮುರಳಿ ಆಡಳಿತಾಧಿಕಾರಿಗಳು, ಶೃಂಗೇರಿ ಮಠ

ಎರಡನೇ ವರ್ಷದ ಸಂಭ್ರಮ

2024ನೇ ಫೆ.22ರಂದು ಲೋಕಾರ್ಪಣೆಯಾದ ಹುಬ್ಬಳ್ಳಿಯ ಪಾಲಿಕೊಪ್ಪದ ಶ್ರೀಶಿವಶಕ್ತಿಧಾಮದಲ್ಲಿ ಹಿಂದೂ ಪಂಚಾಂಗದ ಪ್ರಕಾರ ತಿಥಿಗೆ ಅನುಗುಣವಾಗಿ ಮಾಘ ಮಾಸದ ಶುಕ್ಲಪಕ್ಷದ ತ್ರಯೋದಶಿಯ ಜ.31 ಶನಿವಾರದಂದು ದ್ವಿತೀಯ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಆ ದಿನ ಪ್ರಾತಃಕಾಲದಿಂದಲೇ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಲಿದ್ದು, ವಿಶೇಷವಾಗಿ ಬೆಳಗ್ಗೆ 7.30ಕ್ಕೆ ಗಣಪತಿ ಹೋಮ, ರುದ್ರ ಹೋಮ, ಫಲಪಂಚಾಮೃತ ಅಭಿಷೇಕ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಗೃಹಶಾಂತಿಗಾಗಿ ನವಗ್ರಹ ಹೋಮ, ಶನಿಶಾಂತಿ ಪೂಜೆಗಳು ನಡೆಯಲಿವೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನಂತರ ಭಕ್ತರಿಗೆ ಅನ್ನಪ್ರಸಾದ ವಿತರಣೆ ಮಾಡಲಾಗುತ್ತದೆ. ವಾರ್ಷಿಕೋತ್ಸವದ ಅಂಗವಾಗಿ ಮಧ್ಯಾಹ್ನ 3 ಗಂಟೆಯಿಂದ ವಿವಿಧ ತಂಡಗಳಿಂದ ಭಜನೆ, ಭಗವದ್ಗೀತೆ ಪಠಣ ನಡೆಯಲಿದೆ. ಸಂಜೆ 6.30ಕ್ಕೆ ಸರ್ವ ಸಂಕಷ್ಟ ಹರ ಸೌಭಾಗ್ಯದಾಯಕ ‘ದುರ್ಗಾ ದೀಪ ನಮಸ್ಕಾರ’ ನಡೆಯಲಿದೆ. ನಂತರ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ಮಾಡಲಾಗುತ್ತದೆ. ಈ ಎಲ್ಲ ಪವಿತ್ರ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

ಶುಭ ಕಾರ್ಯಗಳಿಗೆ ಸೂಕ್ತ ಸ್ಥಳ ಶಿವಶಕ್ತಿಧಾಮ

ನಮ್ಮ ಹಿರಿಯರ ಕಾಲದಿಂದಲೂ ವಿವಾಹ ಇತ್ಯಾದಿ ಯಾವುದೇ ಶುಭ ಕಾರ್ಯಗಳು ನಡೆಯಬೇಕೆಂದರೆ ಅದಕ್ಕೆ ದೇವರ ಕೃಪೆ ಇರಬೇಕೆಂಬ ನಂಬಿಕೆ ಇತ್ತು. ಆ ಕಾರಣದಿಂದಲೇ ದೇವಸ್ಥಾನಗಳಲ್ಲಿ ವಿವಾಹವಾಗುವ ಸಂಪ್ರದಾಯ ಇತ್ತೀಚಿನವರೆಗೆ ನಡೆದುಕೊಂಡು ಬಂದಿದೆ. ಆದರೆ ಕಲ್ಯಾಣ ಮಂಟಪಗಳ ಪರಿಕಲ್ಪನೆ ಎಲ್ಲೆಡೆ ಹೆಚ್ಚಾದ ಮೇಲೆ ದೇವಸ್ಥಾನಗಳಲ್ಲಿ ಮದುವೆ ಮಾಡುವ ಸಂಪ್ರದಾಯ ಕಡಿಮೆಯಾಯಿತು. ಶ್ರೀ ಶಿವಶಕ್ತಿಧಾಮದಲ್ಲಿ ವಿವಾಹ ಮತ್ತಿತರ ಶುಭ ಕಾರ್ಯಗಳನ್ನು ಮಾಡುವುದಕ್ಕೆ ಪ್ರಶಸ್ತವಾಗಿದೆ. ಇಲ್ಲಿರುವ ಸಭಾಭವನದಲ್ಲಿ ಒಂದು ಸಾವಿರ ಜನರಿಗೆ ಬೇಕಾದ ಎಲ್ಲ ವ್ಯವಸ್ಥೆ ಇದೆ. ಕುರ್ಚಿ, ಅಡುಗೆ ಮಾಡಲು ಬೇಕಾದ ಪಾತ್ರೆಗಳು, ಊಟದ ಕೊಠಡಿ, ವಿದ್ಯುತ್, ನೀರು ಎಲ್ಲವನ್ನು ಸೇರಿ ಕಡಿಮೆ ವೆಚ್ಚದಲ್ಲಿ ಮದುವೆ ಮಾಡಲು ಅವಕಾಶ ನೀಡಲಾಗುತ್ತದೆ.

ಜೊತೆಗೆ ಸಭಾ ಭವನದ ಪಕ್ಕದಲ್ಲೇ ಶಿವ, ಪಾರ್ವತಿ, ಗಣಪತಿ ಸೇರಿದಂತೆ ವಿವಿಧ ದೇವರ ಸಾನ್ನಿಧ್ಯ ಇರುವುದರಿಂದ ಇಲ್ಲಿ ವಿವಾಹ ಆಗುವುದರಿಂದ ದೇವರ ಕೃಪೆಯು ದೊರೆಯುತ್ತದೆ ಎಂಬ ನಂಬಿಕೆ ಇರುತ್ತದೆ. ವಾಣಿಜ್ಯೋದ್ದೇಶದಿಂದ ನಗರದ ಮಧ್ಯ ಭಾಗದಲ್ಲಿರುವ ಕಲ್ಯಾಣ ಮಂಟಪಗಳಲ್ಲಿ ಪಾರ್ಕಿಂಗ್​ ಸಮಸ್ಯೆ, ವಾಹನಗಳ ಒತ್ತಡ ಸಾಮಾನ್ಯ. ಆದರೆ ಶಿವಶಕ್ತಿಧಾಮವು ನಗರ ಪ್ರದೇಶದಿಂದ ದೂರ ಇರುವುದರಿಂದ ಆ ಸಮಸ್ಯೆ ಇಲ್ಲ. ಮದುವೆ ಮಾಡಿಸುವವರು ತಮಗೆ ಬೇಕಾದ ಹಾಗೆ ಅಡುಗೆ ಮಾಡಿಸಿಕೊಳ್ಳಲು ತಮ್ಮ ಕಡೆಯ ಸಸ್ಯಾಹಾರಿ ಅಡುಗೆಯವರನ್ನು ಕರೆತರಬಹುದು. ಮದುವೆ ಮಾಡಿಸುವುದಕ್ಕೆ ತಮ್ಮ ಸಂಪ್ರದಾಯಕ್ಕೆ ಸರಿ ಹೊಂದುವ ಪುರೋಹಿತರನ್ನು ಹೊರಗಿನಿಂದ ಕರೆದುಕೊಂಡು ಬರುವುದಕ್ಕೂ ಅವಕಾಶವಿದೆ. ಸಾಮಾನ್ಯವಾಗಿ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸಾಧ್ಯವಿಲ್ಲ.

ಕಲ್ಯಾಣ ಮಂಟಪಗಳ ಆಯ್ಕೆಯಲ್ಲೂ ಬಡವರಿಗೆ, ಶ್ರೀಮಂತರಿಗೆ ಎಂಬ ದರ್ಜೆಗಳಿವೆ. ಆದರೆ ಶಿವಶಕ್ತಿಧಾಮವು ಒಂದು ಬೃಹತ್ ದೇವಾಲಯಗಳ ಸಮುಚ್ಚಯವಾಗಿರುವುದರಿಂದ ಬಡವರು, ಶ್ರೀಮಂತರು ಎಲ್ಲರೂ ಸಮಾನವಾಗಿ ಮದುವೆ ಮತ್ತಿತರ ಶುಭ ಕಾರ್ಯಗಳನ್ನು ಮಾಡಬಹುದು. ದುಬಾರಿಯಿಲ್ಲದೆ, ಕಡಿಮೆ ವೆಚ್ಚದಲ್ಲಿ ಶಾಸ್ತ್ರಬದ್ಧವಾಗಿ, ಮದುವೆ ಮಾಡಲು ಬೇಕಾದ ವ್ಯವಸ್ಥೆಗಳು ಇಲ್ಲಿವೆ. ಈಗಾಗಲೆ ಕಳೆದ ವರ್ಷ ಶಿವಶಕ್ತಿಧಾಮದಲ್ಲಿ 10 ವಿವಾಹ ಕಾರ್ಯಗಳು ಯಶಸ್ವಿಯಾಗಿ ನಡೆದಿವೆ. ಸೀಮಂತ, ಷಷ್ಠಿಪೂರ್ತಿ, ಉಪನಯನ ಇತ್ಯಾದಿ ಶುಭ ಕಾರ್ಯಗಳು ಕೂಡ ನೆರವೇರಿವೆ. ಮದುವೆ ಮತ್ತಿತರ ಶುಭಕಾರ್ಯಗಳಿಗೆ ಸಭಾಭವನ ಬೇಕಾದವರು ದೇವಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

  • ಶಿವಶಕ್ತಿಧಾಮದಲ್ಲಿ ಗಲಾಟೆ, ಗದ್ದಲಗಳಿಲ್ಲದ ಪ್ರಶಾಂತ ಪರಿಸರವಿದೆ.
  • ವಿಶಾಲ ಪಾರ್ಕಿಂಗ್​ ಸೌಲಭ್ಯವಿದ್ದು, ಸ್ವಚ್ಛತೆ, ಪರಿಶುದ್ಧತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
  • ಪವಿತ್ರ ಸ್ಥಳದಲ್ಲಿ ಶಾಸ್ತ್ರಬದ್ಧವಾಗಿ ಮದುವೆ ಕಾರ್ಯವನ್ನು ನೆರವೇರಿಸಬಹುದು.
  • ಫೋಟೋಗ್ರಫಿ, ವೀಡಿಯೋಗ್ರಫಿಗೆ ಹೇಳಿ ಮಾಡಿಸಿದ ವಾತಾವರಣ.ಮದುವೆ ಮಾಡಿಸಲು ಬೇಕಾದ ಪುರೋಹಿತರು ಇಲ್ಲಿಯೇ ಇರುತ್ತಾರೆ.
  • ವರಪೂಜೆ, ಕಾಶೀಯಾತ್ರೆ ಮತ್ತಿತರ ಶಾಸ್ತ್ರಗಳನ್ನು ಮಾಡಿಸಲು ಸ್ಥಳದ ಕೊರತೆ ಇಲ್ಲ.
  • 1 ಸಾವಿರ ಜನರಿಗೆ ಅಡುಗೆ ಮಾಡಲು ಪಾತ್ರೆಗಳ ಸೌಲಭ್ಯವಿದೆ.
  • ಕುರ್ಚಿ, ಟೇಬಲ್, ವಿದ್ಯುತ್, ಆರ್.ಓ. ವಾಟರ್ ಮತ್ತಿತರ ಸೌಲಭ್ಯಗಳಿವೆ.

ದೇವಸ್ಥಾನಕ್ಕೆ ಬರುವ ಮಾರ್ಗ

  • ಹುಬ್ಬಳ್ಳಿ ಹೊರ ವಲಯದಲ್ಲಿರುವ ಪಾಲಿಕೊಪ್ಪದ ಶ್ರೀ ಶಿವಶಕ್ತಿ ಧಾಮಕ್ಕೆ ಬೆಂಗಳೂರು ಕಡೆಯಿಂದ ಬೆಂಗಳೂರು-ದಾವಣಗೆರೆ (ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ) ಮಾರ್ಗವಾಗಿ ಹಾವೇರಿ ದಾಟಿದ ನಂತರ ತಡಸ ಕ್ರಾಸ್ನಿಂದ ಸರ್ವಿಸ್ ರಸ್ತೆಯಲ್ಲಿ ಆಗಮಿಸಬೇಕು.
  • ಹುಬ್ಬಳ್ಳಿ ಕಡೆಯಿಂದ (ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ) ವರೂರ ಗ್ರಾಮಕ್ಕೆ ಆಗಮಿಸಿ ಅಂಡರ್ಪಾಸ್ ಮೂಲಕ ಸರ್ವಿಸ್ ರಸ್ತೆಯಲ್ಲಿ ಹಾದು ಶ್ರೀ ಶಿವಶಕ್ತಿ ಧಾಮ ತಲುಪಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net