ಶಿರಾ:ನಗರದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಶಾಸಕ ಟಿ.ಬಿ.ಜಯಚಂದ್ರ ಮತ್ತು ಜಿಲ್ಲಾಧಿಕಾರಿ ಶುಭಕಲ್ಯಾಣ್ ನೇತೃತ್ವದಲ್ಲಿ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಲಾಯಿತು. ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗೆಹರಿಸುವಂತೆ ಮನವಿ ಸಲ್ಲಿಸಿದರು.
ನಂತರ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಇದುವರೆಗೂ ನೂರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳ ಕುರಿತು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಮುಖ್ಯವಾಗಿ ರೈಲ್ವೆ ಕಾಮಗಾರಿ ಆರಂಭವಾಗಿದ್ದು, ಈ ವಿಚಾರದಲ್ಲಿ ಸ್ವಲ್ಪ ಗೊಂದಲವಿತ್ತು. ರೈಲ್ವೆ ಕೆಲಸ ಮಾಡಲು ಇರುವ ಅಡ್ಡಿ ಆತಂಕಗಳನ್ನೆಲ್ಲ ನಿವಾರಣೆ ಮಾಡಲಾಗಿದೆ. ಈಗ ಬಂದಿರುವ ಅರ್ಜಿಗಳ ಪೈಕಿ ಬಗರ್ ಹುಕುಂ ಸಮಸ್ಯೆಗೆ ಸಂಬಂಧಪಟ್ಟ ಅರ್ಜಿಗಳೇ ಹೆಚ್ಚಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಇದರ ಕುರಿತು ಕಮಿಟಿ ರಚಿಸಿ ಕ್ರಮಕ್ಕೆ ಮುಂದಾಗಲಾಗುವುದು ಎಂದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾತನಾಡಿ, ಸ್ವೀಕರಿಸಿದ ಅಜಿಗಳನ್ನು ಐಪಿಜಿಆರ್ಎಸ್ನಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ ಪರಿಶೀಲಿಸಲಾಗುವುದು. ಅಡುಗೆ ಅನಿಲದ ಸಮಸ್ಯೆ ಕ್ರಮೇಣ ಬಗೆಹರಿಯುತ್ತಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಮಧುಗಿರಿ ಉಪವಿಭಾಗಾಧಿಕಾರಿ ಶಿವಪ್ಪ ಗೋಟುರ್, ತಹಸೀಲ್ದಾರ್ ಆನಂದ್ ಕುಮಾರ್, ತಾಪಂ ಇಒ ಹರೀಶ್, ನಗರಸಭೆ ಆಯುಕ್ತ ರುದ್ರೇಶ್, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.