ಆನೇಕಲ್ ತಾಲೂಕಿನ ದೊಮ್ಮಸಂದ್ರದಲ್ಲಿ ಹಮ್ಮಿಕೊಂಡಿದ್ದ ಆನೇಕಲ್ ತಾಲೂಕು ವಹ್ನಿಕುಲ ಕ್ಷತ್ರಿಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ವಿಜೇತರ ಬಹುಮಾನ ವಿತರಣೆಯಲ್ಲಿ ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘದ ಉಪಾಧ್ಯಕ್ಷ ಮಾಜಿ ಸೈನಿಕ ಸಿ.ವೇಣು, ಸಂಘದ ಅಧ್ಯಕ್ಷ ವರ್ತೂರು ಗಿರೀಶ್, ಹೆಬ್ಬಗೋಡಿ ಸ್ಥಾಯಿ ಸಮಿತಿ ಅಧ್ಯಕ್ಷ ಜಯರಾಮ್, ನಗರಸಭೆ ಅಧ್ಯಕ್ಷ ರಾಮಚಂದ್ರ, ಬಿಜೆಪಿ ಮುಖಂಡ ಹುಲ್ಲಹಳ್ಳಿ ಶ್ರೀನಿವಾಸ್ ಇತರರು ಇದ್ದರು.
ಸರ್ಜಾಪುರ : ಸಮಾಜದ ಏಕತೆ ಮತ್ತು ಅಭಿವೃದ್ಧಿಗೆ ಕ್ರೀಡೆಗಳು ಅತ್ಯಂತ ಮಹತ್ವ. ಯುವಜನತೆ ದುಶ್ಚಟಗಳಿಂದ ದೂರವಿದ್ದು, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘದ ಉಪಾಧ್ಯಕ್ಷ, ಮಾಜಿ ಸೈನಿಕ ಸಿ.ವೇಣು ಹೇಳಿದರು.
ಸರ್ಜಾಪುರ ಸಮೀಪದ ದೋಮ್ಮಸಂದ್ರದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಆನೇಕಲ್ ತಾಲೂಕು ವಹ್ನಿಕುಲ ಕ್ಷತ್ರಿಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಮಂಗಳವಾರ ತೆರೆ ಕಂಡಿದ್ದು, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕ್ರೀಡಾಕೂಟಗಳು ಮನರಂಜನೆಗಾಗಿ ಮಾತ್ರವಲ್ಲದೆ, ಸಮಾಜದೊಳಗಿನ ಬಾಂಧವ್ಯ ಗಟ್ಟಿಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ. ಗ್ರಾಮದಿಂದ ರಾಜ್ಯಮಟ್ಟದವರೆಗೆ ಇಂತಹ ಪಂದ್ಯಾವಳಿ ಆಯೋಜಿಸುವುದರಿಂದ ಆಟಗಾರರಿಗೆ ಉತ್ತಮ ವೇದಿಕೆ ಸಿಗುತ್ತದೆ. ವಹ್ನಿಕುಲ ಕ್ಷತ್ರಿಯ ಸಮುದಾಯದ ಯುವಕರು ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರಬೇಕಿದ್ದು, ಕ್ರೀಡೆಯೊಂದಿಗೆ ಶಿಕ್ಷಣಕ್ಕೂ ಸಮಾನ ಮಹತ್ವ ನೀಡಬೇಕು. ಸಮುದಾಯದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಸ್ಪರ್ಧೆಯಲ್ಲಿ 16 ತಂಡಗಳು ಭಾಗವಹಿಸಿದ್ದವು. ವಿಶೇಷವಾಗಿ ಮಹಾಭಾರತದ ಕುರುಕ್ಷೇತ್ರ ಯುದ್ಧದ ಪಾತ್ರಧಾರಿಗಳ ಹೆಸರನ್ನು ತಂಡಗಳಿಗೆ ಇಟ್ಟುಕೊಂಡು ಕಣಕ್ಕಿಳಿದಿದ್ದರು. ಅಂತಿಮ ಪಂದ್ಯದಲ್ಲಿ ಮಾಯಸಂದ್ರದ ವೀರ ಕ್ಷತ್ರಿಯಸ್ ತಂಡವು ಪ್ರಥಮ ಸ್ಥಾನ ಮುಡುಗೇರಿಸಿಕೊಂಡಿತು. ಜಿಗಣಿಯ ಪಾಂಡವ ವಾರಿಯರ್ಸ್ ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿದೆ.
ಲಕ್ಷಿ$್ಮನಾರಾಯಣ, ಶ್ರೀನಿವಾಸ್, ಸಿ.ಎಂ.ಸುಬ್ರಹ್ಮಣಿ, ಎ.ಸಿ.ಮಣಿ, ಸಿ.ರಾಮಚಂದ್ರ, ಶಿವರಾಜ್, ಗಣೇಶ್, ಗೋಪಿ, ಮುರಳಿ, ಆನಂದ್, ಸುನೀಲ್ ಕುಮಾರ್, ಮಂಜುನಾಥ್, ಸಿ.ಎ.ಮಂಜುನಾಥ್, ಸಿ.ಡಿ.ಹೊಸಕೋಟೆ ಮುರಳಿ ಇತರರು ಇದ್ದರು.