ಹೊರ್ತಿ: ದೇಶದ ಸಂಸ್ಕೃತಿ ಅರಿತುಕೊಳ್ಳಲು ವಿದೇಶಿಯರು ಉತ್ಸಾಹ ತೋರುತ್ತಿದ್ದಾರೆ. ಆದರೆ ದೇಶವಾಸಿಗಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ನೈತಿಕ ಅಧಃಪತನಕ್ಕೆ ಕಾರಣವಾಗಿದೆ. ತನ್ಮೂಲಕ ನಮ್ಮತನ ಕಳೆದುಕೊಳ್ಳುತ್ತಿದ್ದಾರೆ ಎಂದು ಇಂಚಗೇರಿ ಮಠದ ಗುರುಪೀಠದ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.
ಇಲ್ಲಿನ ಇಂಚಗೇರಿ ಮಠದಲ್ಲಿ ಶ್ರೀಮಾಧವಾನಂದ 46ನೇ ಪುಣ್ಯಸ್ಮರಣೋತ್ಸವದ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ವೈಚಾರಿಕತೆ ಮತ್ತು ವೈಜ್ಞಾನಿಕತೆ ನೆಪದಲ್ಲಿ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರಗಳ ಪರಂಪರೆ ಹಾಗೂ ಆದರ್ಶಗಳನ್ನು ಜನತೆ ಮರೆಯುತ್ತಿದ್ದಾರೆ. ವಿಶೇಷವಾಗಿ ಯುವ ಜನಾಂಗ ಆಧ್ಯಾತ್ಮಿಕ-ಧಾರ್ಮಿಕ ಕಾರ್ಯಕ್ರಮ, ಸಂಸ್ಕಾರ ಮತ್ತು ಸಂಸ್ಕೃತಿ, ಸದ್ವಿಚಾರಗಳಿಂದ ವಿಮುಖವಾಗುತ್ತಿದ್ದಾರೆ. ಆದರೆ ಸುಕ್ಷೇತ್ರ ಇಂಚಗೇರಿ ಮಠದ ಅಧ್ಯಾತ್ಮ ಸಂಪ್ರದಾಯದ ತತ್ವ, ಆದರ್ಶ, ವಿಚಾರ, ಸತ್ಸಂಗ ಸದ್ವಿಚಾರ ಯುವಕರು ಸದ್ಬಳಕೆ ಮಾಡಿಕೊಂಡು ಸುಂದರ ಜೀವನ ಕಂಡು ಕೊಳ್ಳಬೇಕು ಎಂದರು.
ವಿಠ್ಠಲಗೌಡ ವೈ. ಪಾಟೀಲ ಮಾತನಾಡಿ, ಶ್ರೀಕ್ಷೇತ್ರ ಇಂಚಗೇರಿ ಮಠದ ಶ್ರೀ ಮಾಧವಾನಂದರು ಅಧ್ಯಾತ್ಮ ಬೋಧನೆಯೊಂದಿಗೆ ದೇಶ ಸ್ವಾತಂತ್ರ್ಯ, ಕರ್ನಾಟಕ ಏಕೀಕರಣ ಮತ್ತು ಗೋವಾ ವಿಮೋಚನೆ ಹೋರಾಟ ಚಳವಳಿಯಲ್ಲಿ ಅಸಂಖ್ಯಾ ಭಕ್ತರೊಂದಿಗೆ ಭಾಗವಿಹಿಸಿದಲ್ಲದೆ ಸಾಮಾಜಿಕ ಸೇವೆಯಲ್ಲಿ ಕಾರ್ಯ ತತ್ಪರವಾಗಿ, ಶ್ರೀಮಠ ತನ್ನದೇ ಆದ ವೈಶಿಷ್ಟ್ಯತೆಗೆ ಹೆಸರುವಾಸಿಯಾಗಿದೆ. ಹಿಂದುಳಿದ ಬಡ, ನಿರಾಶ್ರಿತರಿಗೆ ಆಶ್ರಯ ನೀಡಿ, ಸರ್ಕಾರ ಮಾಡದ ಕಾರ್ಯ ಶ್ರೀಮಠ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.