_1777657412375.webp?w=480&auto=format%2Ccompress&fit=max)
_1777657412375.webp?w=480&auto=format%2Ccompress&fit=max)
ಮಾತು ಎಂಬುದು ಮನುಷ್ಯನಿಗೆ ದೊರೆತಿರುವ ಅದ್ಭುತ ವರ ಮತ್ತು ಅಸಾಧಾರಣ ಶಕ್ತಿ. ಮಾತಿನ ಮೂಲಕ ಭಾವನೆಗಳ ವಿನಿಮಯ ಸರಾಗ. ಮನಸ್ಸನ್ನು ಆರ್ಥ ಮಾಡಿಕೊಳ್ಳಲು ಮಾತೇ ಸಾಧನ. ಆದರೆ, ಇತ್ತೀಚಿನ ಕಾಲಮಾನದಲ್ಲಿ ವರ್ಷದಿಂದ ವರ್ಷಕ್ಕೆ ತಂತ್ರಜ್ಞಾನದ ಮೇಲಿನ ಅವಲಂಬನೆ, ಅದರೊಂದಿಗಿನ ಒಡನಾಟ ಹೆಚ್ಚಿದೆ. ಮನುಷ್ಯ ಟೆಕ್ನಾಲಜಿ ಸಾಧನಗಳಲ್ಲೇ ಹೆಚ್ಚು ಹೊತ್ತು ಕಳೆಯುತ್ತಿದ್ದಾನೆ. ಇದರ ಭೀಕರ ಪರಿಣಾಮವೆಂದರೆ ಭಾವನಾಜೀವಿಯಾದ ಮಾನವ ಯಂತ್ರದಂತಾಗುತ್ತಿದ್ದಾನೆ. ತಂತ್ರಜ್ಞಾನದ ಅತಿಯಾದ ಸಹವಾಸ ಮನುಷ್ಯನ ಮಾತನ್ನೂ ಕಡಿಮೆ ಮಾಡಿದೆ. ಇದು ಯುವಸಮೂಹದಲ್ಲಿ ಸಂವಹನ ಶಕ್ತಿಯನ್ನು ಕುಂದಿಸುತ್ತಿದೆಯಲ್ಲದೆ, ಒಂಟಿತನವನ್ನೂ ಬೆಳೆಸುತ್ತಿದೆ. ಇದರಿಂದ ಹೊರಬರಲು ಮತ್ತೆ ಮಾತಿನ ಮಂಟಪ ಕಟ್ಟಬೇಕಿದೆ, ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಬೇಕಿದೆ.
ಸುತ್ತಲೂ ಸದ್ದುಗದ್ದಲವಿದೆ, ಆದರೆ ಮಾತುಗಳಿಲ್ಲ! ಹೌದು, ಅಚ್ಚರಿಯೆನಿಸಿದರೂ ಇದು ಈ ದಿನಗಳ ಕಠೋರ ವಾಸ್ತವ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗದ್ದಲಕ್ಕೆ ಕೊರತೆಯೇ ಇಲ್ಲ. ಆದರೆ ಮನುಷ್ಯರ ಧ್ವನಿಗಳು ಮತ್ತು ಅರ್ಥಪೂರ್ಣ ಮಾತುಕತೆಗಳು, ಪಿಸುಮಾತುಗಳು ಮಾತ್ರ ಕ್ಷೀಣಿಸುತ್ತಿವೆ. ಮೆಟ್ರೋ ಪ್ರಯಾಣವಿರಲಿ ಅಥವಾ ಕಚೇರಿಯ ಊಟದ ವಿರಾಮವಿರಲಿ, ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್ ಫೋನ್ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಇದು ಯಾವುದೋ ಒಂದೆರಡು ರಾಷ್ಟ್ರಗಳ, ಒಂದೆರಡು ಪ್ರದೇಶಗಳ ಸಮಸ್ಯೆಯಲ್ಲ. ಜಾಗತಿಕವಾಗಿ ಹಬ್ಬಿರುವ ಈ ಸಮಸ್ಯೆಯಿಂದ ಮನುಷ್ಯರು ಪರಸ್ಪರ ಮಾತನಾಡುವುದನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ ಎಂಬ ಆತಂಕಕಾರಿ ಅಂಶವನ್ನು ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದ ಇತ್ತೀಚಿನ ಸಂಶೋ ಧನೆಯು ಬಿಚ್ಚಿಟ್ಟಿದೆ.
ಅಧ್ಯಯನ ವರದಿಯ ಪ್ರಕಾರ, 2005ರಿಂದ 2019ರ ನಡುವೆ ವ್ಯಕ್ತಿ ದಿನಕ್ಕೆ ಸರಾಸರಿ ಬಳಸುವ ಮಾತುಗಳ ಸಂಖ್ಯೆಯಲ್ಲಿ ಶೇಕಡ 28ರಷ್ಟು ಇಳಿಕೆ ಯಾಗಿದೆ! ಮನ ಶ್ಶಾಸ್ತ್ರಜ್ಞ ಮಥಿಯಾಸ್ ಮೆಹಾಲ್ ಅವರ ಪ್ರಕಾರ, ನಾವು ಬಳಸುತ್ತಿದ್ದ ಪದಗಳನ್ನು ಅವಲೋಕಿಸಿದರೆ ಪ್ರತಿ ವರ್ಷ ನಾವು ಸರಾಸರಿ 1.2 ಲಕ್ಷ ಕಡಿಮೆ ಪದಗಳನ್ನು ಬಳಸುತ್ತಿದ್ದೇವೆ. ಮಾತನಾಡುವ ವೇಳೆ 2005ರಲ್ಲಿ ದಿನಕ್ಕೆ ಸರಾಸರಿ 16,600 ಪದಗಳು ಬಳಕೆಯಾಗುತ್ತಿದ್ದವು. 2019ರ ಹೊತ್ತಿಗೆ ಇದು ದಿನಕ್ಕೆ 12,000ಕ್ಕಿಂತ ಕಡಿಮೆ ಪದಗಳಿಗೆ ಬಂದು ತಲುಪಿದೆ. ಈ ಕುಸಿತವು ವಿಶೇಷವಾಗಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರಲ್ಲಿ ಹೆಚ್ಚಾಗಿ ಕಂಡುಬಂದಿದೆ. ಇಂದಿನ ಯುವಪೀಳಿಗೆ ಭಾವನೆಗಳನ್ನು ಧ್ವನಿಯ ಮೂಲಕ ವ್ಯಕ್ತಪಡಿಸುವ ಬದಲು ಟೆಕ್ಸ್ ್ಟ ಮೆಸೇಜ್ ಅಥವಾ ಎಮೋಜಿಗಳ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟಪಡುತ್ತಿದ್ದಾರೆ.
ಪೊ›. ಮೆಹಾಲ್ ಎಚ್ಚರಿಸುವಂತೆ, ಸಂದೇಶಗಳು ಎಂದಿಗೂ ಧ್ವನಿ/ಮಾತಿಗೆ ಸಾಟಿಯಾಗಲಾರವು. ಮಾತನಾಡುವಾಗ ವ್ಯಕ್ತವಾಗುವ ಮುಖಭಾವ, ಧ್ವನಿಯ ಏರಿಳಿತ ಮತ್ತು ದೇಹಭಾಷೆಯು ಸಂವಹನವನ್ನು ಹೆಚ್ಚು ಪರಿಣಾಮಕಾರಿ ಯಾಗಿಸುತ್ತದೆ. ಆದರೆ, ಸಂದೇಶಗಳಲ್ಲಿ ಈ ಎಲ್ಲ
ಸೂಕ್ಷ್ಮತೆಗಳು ಮಾಯವಾಗುತ್ತವೆ, ಇದು ಸಂವಹನದಲ್ಲಿ ಗೊಂದಲವನ್ನು ಸೃಷ್ಟಿಸುತ್ತದೆ.
ಪೊ›ಫೆಸರ್ ಜಿಲಿಯನ್ ಸ್ಯಾಂಡ್ಸ್ಟ್ರಾಮ್ ತಮ್ಮ ‘ಒನ್ಸ್ ಅಪಾನ್ ಎ ಸ್ಟ್ರೇಂಜರ್’ ಪುಸ್ತಕದಲ್ಲಿ ಅಪರಿಚಿತರೊಂದಿಗೆ ಮಾತನಾಡುವ ಮಹತ್ವವನ್ನು ವಿವರಿಸಿದ್ದಾರೆ. ನೆರೆಹೊರೆಯವರೊಂದಿಗೆ ಅಥವಾ ಅಂಗಡಿಯ ಬಳಿ ನಿಂತಿರುವ ಅಪರಿಚಿತರೊಂದಿಗೆ ಕಿರುನಗೆ ಬೀರಿ ಮಾಡುವ ಸಣ್ಣ ಸಂಭಾಷಣೆಗಳು ಮಾನಸಿಕ ಆರೋಗ್ಯಕ್ಕೆ ಬೂಸ್ಟರ್ ಆಗಿ ಕೆಲಸ ಮಾಡುತ್ತವೆ. ಇದು ನಮ್ಮ ಮೂಡ್ ಸುಧಾರಿಸುವುದಲ್ಲದೆ, ಜಗತ್ತು ಸುಂದರವಾಗಿದೆ ಎಂಬ ಭಾವನೆಯನ್ನು ಮೂಡಿಸುತ್ತದೆ, ಎನ್ನುತ್ತಾರೆ ಅವರು. ಸಂವಹನ ಎಂಬುದು ಒಂದು ಕಲೆ. ನಾವು ಅದರ ಅಭ್ಯಾಸವನ್ನು ಬಿಟ್ಟರೆ, ಕಾಲಕ್ರಮೇಣ ಸಾಮಾಜಿಕವಾಗಿ ಅಸಮರ್ಥರಾಗುತ್ತೇವೆ, ಸ್ನೇಹಿತರನ್ನು ಕಳೆದುಕೊಂಡು ಏಕಾಂಗಿಯಾಗುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.
ಮುಂದಿನ ಬಾರಿ ನೀವು ಸರದಿಯಲ್ಲಿ ನಿಂತಾಗ ಅಥವಾ ಸಹೋದ್ಯೋಗಿಯ ಪಕ್ಕ ಕುಳಿತಾಗ, ಸ್ಮಾರ್ಟ್ ಫೋನ್ ಹೊರತೆಗೆಯುವ ಬದಲು ಒಂದು ಸಣ್ಣ ಸಂಭಾಷಣೆಯನ್ನು ಪ್ರಾರಂಭಿಸಿ. ನೆನಪಿಡಿ, ನಿಮ್ಮ ಮಾತುಗಳೇ ಸಮಾಜವನ್ನು ಒಗ್ಗೂಡಿಸುವ ಅತ್ಯಂತ ಬಲವಾದ ಸೇತುವೆ. ತಂತ್ರಜ್ಞಾನವು ನಮ್ಮನ್ನು ಇಡೀ ಜಗತ್ತಿನೊಂದಿಗೆ ಸಂರ್ಪಸಿರಬಹುದು, ಆದರೆ ಅದು ನಮ್ಮ ಪಕ್ಕದಲ್ಲಿರುವವರಿಂದ ನಮ್ಮನ್ನು ದೂರ ಮಾಡಿದೆ. ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆ ಸಂದರ್ಭಕ್ಕೆ ತಕ್ಕಂತೆ ಇರಲಿ, ಆದರೆ ಇಂದಿನ ಸಂದರ್ಭದಲ್ಲಿ ಮಾತು ಜೀವನದ ಸಂಜೀವಿನಿ ಎಂಬುದನ್ನು ನಾವು ಮರೆಯಬಾರದು. ನಾವು ಎಷ್ಟು ಹೆಚ್ಚು ಸಂಭಾಷಿಸುತ್ತೇವೆಯೋ ಅಷ್ಟು ಹೆಚ್ಚು ಮಾನವೀಯತೆಯನ್ನು ಉಳಿಸಿಕೊಳ್ಳುತ್ತೇವೆ.
ಮನುಷ್ಯನ ಮಾತುಗಳು ಕಡಿಮೆಯಾಗುತ್ತಿ ರುವುದು ಕೇವಲ ಅಂಕಿ-ಅಂಶಗಳ ವಿಷಯವಲ್ಲ; ಇದು ನಮ್ಮ ಸಾಮಾಜಿಕ ಮತ್ತು ಮಾನಸಿಕ ಸಂರಚನೆಯನ್ನೇ ಬದಲಿಸುತ್ತಿದೆ. ಸಂವಹನ ಕಡಿಮೆಯಾದಂತೆ ನಮ್ಮ ನಡವಳಿಕೆಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳು, ಅದರಿಂದ ಸೃಷ್ಟಿಯಾಗು ತ್ತಿರುವ ಸಮಸ್ಯೆಗಳು ಒಂದೇರಡಲ್ಲ.
ತಾಳ್ಮೆಯ ಕೊರತೆ: ಮುಖಾಮುಖಿ ಸಂಭಾಷಣೆಯಲ್ಲಿ ನಾವು ಎದುರಿಗಿದ್ದವರ ಮಾತು ಕೇಳಿಸಿಕೊಳ್ಳುವ ತಾಳ್ಮೆ ಹೊಂದಿರಬೇಕಾಗುತ್ತದೆ. ಆದರೆ ಡಿಜಿಟಲ್ ಜಗತ್ತಿನಲ್ಲಿ ಎಲ್ಲವೂ ತಕ್ಷಣವೇ ಸಿಗುವುದರಿಂದ, ನಿಜ ಜೀವನದ ಸಂಭಾಷಣೆಗಳು ನಮಗೆ ಕಿರಿಕಿರಿ ಅಥವಾ ದಣಿವು ತರಿಸುತ್ತಿವೆ.
ವರ್ತನೆ: ಭಾವನೆಗಳನ್ನು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗದಿದ್ದಾಗ, ಅದು ಕಿರಿಕಿರಿ ಅಥವಾ ಸಿಟ್ಟಿನ ರೂಪದಲ್ಲಿ ಹೊರಬರುತ್ತದೆ. ಧ್ವನಿಯ ಏರಿಳಿತದ ಮೂಲಕ ವ್ಯಕ್ತವಾಗಬೇಕಾದ ಭಾವನೆಗಳು ಸಂದೇಶಗಳಲ್ಲಿ ಕಳೆದುಹೋಗಿ, ತಪ್ಪು ತಿಳಿವಳಿಕೆಗಳು ಹೆಚ್ಚುತ್ತಿವೆ.
ಆಧುನಿಕ ತಂತ್ರಜ್ಞಾನ ನಮ್ಮ ಕೆಲಸವನ್ನು ಸುಲಭಗೊಳಿಸಿರಬಹುದು, ಆದರೆ ಅವು ನಮ್ಮ ಸಾಮಾಜಿಕ ಜೀವನವನ್ನು ತುಂಬ ನೀರಸಗೊಳಿಸಿವೆ. ಮಾತುಕತೆಯ ಅವಕಾಶಗಳನ್ನು ಕಸಿದುಕೊಂಡಿದೆ.
ಡಿಜಿಟಲ್ ಆರ್ಡರ್ ಮತ್ತು ಪೇಮೆಂಟ್: ರೆಸ್ಟೋರೆಂಟ್ ಅಥವಾ ಕಿರಾಣಿ ಅಂಗಡಿಗಳಲ್ಲಿ ಯಾರೊಂದಿಗೂ ಮಾತನಾಡದೆ ಆರ್ಡರ್ ಮಾಡುವುದು ಮತ್ತು ಹಣ ಪಾವತಿಸುವುದು ಸಾಧ್ಯವಾಗಿದೆ. ಹಿಂದೆಲ್ಲ, ಕಿರಾಣಿ ಅಂಗಡಿಗೆ ಅಥವಾ ಹಾಲು, ತರಕಾರಿ ಖರೀದಿಗೆ ಮನೆ ಸಮೀಪದ ಅಂಗಡಿಗೆ, ಮಿನಿ ಮಾರುಕಟ್ಟೆಗೆ ಹೋದರೆ ಮಾತಿನ ಮೂಲಕವೇ ವ್ಯಾಪಾರಿಗಳ ಜತೆ ಸ್ನೇಹ ಮತ್ತು ಬಾಂಧವ್ಯ ಬೆಳೆಯುತ್ತಿತ್ತು. ಕಷ್ಟ-ಸುಖ ಅರಿಯಲು ಸಾಧ್ಯವಾಗುತ್ತಿತ್ತು. ಗ್ರಾಹಕರು ಕಾಳಜಿಯ ನಾಲ್ಕು ಮಾತನಾಡಿದರೆ, ವ್ಯಾಪಾರಿಯ ಮನಸ್ಸು ನಿರಾಳವಾಗುತ್ತಿತ್ತು. ಅಥವಾ ವ್ಯಾಪಾರಿ ತೋರಿದ ಆಪ್ತಭಾವಕ್ಕೆ ಗ್ರಾಹಕನ ಮನಸ್ಸು ಅರಳುತ್ತಿತ್ತು.
ಮನೆಯಿಂದಲೇ ಕೆಲಸ ಮಾಡುವ (ವರ್ಕ್ ಫ್ರಾಮ್ ಹೋಮ್ ಪದ್ಧತಿಯಿಂದಾಗಿ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಬೆರೆಯುವ ಅವಕಾಶಗಳು ಕಡಿಮೆಯಾಗಿವೆ. ಮೀಟಿಂಗ್ಗಳನ್ನು ಸಹ ಮನೆಯಿಂದಲೇ ನಿರ್ವಹಿಸಲಾಗುತ್ತದೆ. ಆದರೆ, ಕಚೇರಿಯ ವಾತಾವರಣ, ಸಿಬ್ಬಂದಿಯ ಸ್ನೇಹ, ಅವರೊಂದಿಗಿನ ಹರಟೆ ಈ ಎಲ್ಲ ಸಂಗತಿಗಳ ಭಾವಸಂಭ್ರಮವೇ ಅನನ್ಯ.
ಜನರು ಹಿಂದೆಂದಿಗಿಂತಲೂ ಹೆಚ್ಚು ಸಮಯವನ್ನು ಒಂಟಿಯಾಗಿ ಕಳೆಯುತ್ತಿದ್ದಾರೆ, ಇದರಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿನ ‘ಸ್ಮಾಲ್ ಟಾಕ್’ ಅಪ್ರಸ್ತುತವಾಗುತ್ತಿದೆ. ಮುಂಚೆ ಬಸ್ ಅಥವಾ ರೈಲಿನಲ್ಲಿ ಪ್ರಯಾಣ ಆರಂಭಿಸಿದರೆ ಅಕ್ಕಪಕ್ಕದ ಪ್ರಯಾಣಿಕರೊಂದಿಗೆ ಹರಟುತ್ತ ಗಮ್ಯ ತಲುಪುವ ಹೊತ್ತಿಗೆ ಸ್ನೇಹ ಬೆಳೆದಿರುತ್ತಿತ್ತು.
ಸಂಭಾಷಣೆಯು ಒಂದು ಕ್ಯಾರ್ಥಸಿಸ್ (ಭಾವನೆಗಳ ಶುದ್ಧೀಕರಣ) ಇದ್ದಂತೆ. ಮನದಾಳದ ಮಾತುಗಳನ್ನು ಹಂಚಿಕೊಳ್ಳದಿದ್ದಾಗ ಒತ್ತಡ, ಖಿನ್ನತೆ ಮತ್ತು ತೀವ್ರ ಒಂಟಿತನ ಕಾಡುತ್ತದೆ. ಒಬ್ಬರ ಮುಖ ನೋಡಿ ಅವರ ನೋವನ್ನು ಅರ್ಥಮಾಡಿಕೊಳ್ಳುವ ಗುಣ ನಶಿಸುತ್ತಿದೆ. ಪರದೆಯ ಮೇಲೆ ಕೇವಲ ಅಕ್ಷರಗಳನ್ನು ನೋಡುವುದರಿಂದ ನಮಗೆ ಎದುರಿಗಿದ್ದವರ ನೋವಿನ ತೀವ್ರತೆ ಅರ್ಥವಾಗುವುದಿಲ್ಲ.
ಮುಂದಿನ ಪೀಳಿಗೆಗೆ ‘ಸಂವಹನ ಕಲೆ’ ಮರೆತು ಹೋಗಬಹುದು. ಇದ ರಿಂದ ವೃತ್ತಿ ಬದುಕಿನಲ್ಲಿ ತಂಡ ದೊಂದಿಗೆ ಕೆಲಸ ಮಾಡುವುದು ಕಷ್ಟವಾಗಬಹುದು.
ಪತಿ-ಪತ್ನಿ, ಪಾಲಕರು ಮತ್ತು ಮಕ್ಕಳ ನಡುವೆ ಮೌನ ಹೆಚ್ಚಾದಂತೆ ಪರಸ್ಪರ ನಂಬಿಕೆ ಮತ್ತು ಭಾವನಾತ್ಮಕ ಬೆಸುಗೆ ಸಡಿಲವಾಗುತ್ತಿದೆ. ಅಸಮಾಧಾನ ಗಳನ್ನು ರ್ಚಚಿಸಿ ಬಗೆಹರಿಸುವ ಬದಲು ಮೌನವಾಗಿ ರುವುದು ಸಂಬಂಧಗಳನ್ನು ಹದಗೆಡಿಸುತ್ತಿದೆ.
ಡಿಜಿಟಲ್ ಉಪವಾಸ: ದಿನದ ಕೆಲವು ಗಂಟೆಗಳನ್ನು ಮೊಬೈಲ್ ಫೋನ್ ರಹಿತ ಸಮಯವೆಂದು ಘೊಷಿಸಿಕೊಳ್ಳಬೇಕು. ವಿಶೇಷವಾಗಿ ಊಟದ ಸಮಯದಲ್ಲಿ ಮತ್ತು ಮಲಗುವ ಮುನ್ನ ಫೋನ್ ದೂರವಿಟ್ಟು ಕುಟುಂಬದವರೊಂದಿಗೆ ಮಾತನಾಡಿ.
ಸಕ್ರಿಯ ಸಂವಹನ: ಟೆಕ್ಸ್ಟ್ ಮೆಸೇಜ್ ಮಾಡುವ ಬದಲು ಸಾಧ್ಯವಾದಷ್ಟು ಫೋನ್ ಕಾಲ್ ಮಾಡಿ ಅಥವಾ ವಿಡಿಯೋ ಕಾಲ್ ಮಾಡಿ. ಇನ್ನೂ ಉತ್ತಮವೆಂದರೆ ನೇರವಾಗಿ ಭೇಟಿಯಾಗಿ ಮಾತನಾಡಿ. ಅಪರಿಚಿತರೊಂದಿಗೆ, ನೆರೆಹೊರೆಯವರೊಂದಿಗೆ ಅಥವಾ ದಿನಸಿ ಅಂಗಡಿಯವರೊಂದಿಗೆ ಹವಾಮಾನದ ಬಗ್ಗೆಯೋ ಅಥವಾ ಸಣ್ಣ ವಿಷಯಗಳ ಬಗ್ಗೆಯೋ ಮಾತು ಆರಂಭಿಸಿ. ಇದು ಮಿದುಳಿಗೆ ಸಾಮಾಜಿಕ ವ್ಯಾಯಾಮ ನೀಡುತ್ತದೆ.
ಹವ್ಯಾಸಗಳನ್ನು ಬದಲಿಸಿ: ಒಂಟಿಯಾಗಿ ಮೊಬೈಲ್ ಫೋನ್ನಲ್ಲಿ ಗೇಮ್ ಆಡುವ ಬದಲು, ಗ್ರೂಪ್ ಆಕ್ಟಿವಿಟಿಗಳಲ್ಲಿ ತೊಡಗಿಕೊಳ್ಳಿ. ಉದಾಹರಣೆಗೆ, ವಾಕಿಂಗ್ ಗ್ರೂಪ್ಗಳು, ಪುಸ್ತಕ ಓದುವ ಕ್ಲಬ್ಗಳು ಅಥವಾ ಕ್ರೀಡಾ ಸಂಘಗಳು. ಕೇಳಿಸಿಕೊಳ್ಳುವುದನ್ನು ಕಲಿಯಿರಿ. ಸಂವಹನವೆಂದರೆ ಕೇವಲ ಮಾತನಾಡುವುದಲ್ಲ, ಎದುರಿಗಿದ್ದವರು ಹೇಳುವುದನ್ನು ಗಮನವಿಟ್ಟು ಕೇಳುವುದು ಕೂಡ ಮುಖ್ಯ. ಇದು ಪರಸ್ಪರ ಗೌರವವನ್ನು ಹೆಚ್ಚಿಸುತ್ತದೆ.