ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಕಿಡಿ

ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಗೇಟ್ ಸಮೀಪ ಜಾರಕಿಹೊಳಿ ಬ್ರಿಗೇಡ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಗೋವಿಂದ ನಾಯಕ್, ರಾಜೇಂದ್ರ ವಿ ನಾಯಕ್, ಮೋನಿಷ್, ಧನುಷ್ ಗೌಡ, ರವಿ ಬಾಂಡ್, ಕೆಂಪ , ಅರುಣ್ ನಾಯಕ್, ಮನೋಜ್ ಪಿ.ನಾಯಕ್, ಸುಕೃತ್, ಯಶ್ವಂತ್ ಇತರರು ಇದ್ದರು.
ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಗೇಟ್ ಸಮೀಪ ಜಾರಕಿಹೊಳಿ ಬ್ರಿಗೇಡ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಗೋವಿಂದ ನಾಯಕ್, ರಾಜೇಂದ್ರ ವಿ ನಾಯಕ್, ಮೋನಿಷ್, ಧನುಷ್ ಗೌಡ, ರವಿ ಬಾಂಡ್, ಕೆಂಪ , ಅರುಣ್ ನಾಯಕ್, ಮನೋಜ್ ಪಿ.ನಾಯಕ್, ಸುಕೃತ್, ಯಶ್ವಂತ್ ಇತರರು ಇದ್ದರು.
Published on
ಗುಂಡ್ಲುಪೇಟೆ: ಮೈಸೂರು- ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ-766ರ ಕಾಮಗಾರಿ ವಿಳಂಬದಿಂದ ದಿನನಿತ್ಯ ಅಪಘಾತಗಳು ಸಂಭವಿಸುತ್ತಿದೆ ಎಂದು ಆರೋಪಿಸಿ ಜಾರಕಿಹೊಳಿ ಬ್ರಿಗೇಡ್ ಮುಖ್ಯಸ್ಥ ಗೋವಿಂದ ನಾಯಕ್ ನೇತೃತ್ವದಲ್ಲಿ ತಾಲೂಕಿನ ಗರಗನಹಳ್ಳಿ ಗೇಟ್ ಸಮೀಪ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಗೋವಿಂದನಾಯಕ್ ಮಾತನಾಡಿ, ಕಳೆದ ಒಂದು ವರ್ಷದಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದರೂ, ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ರಸ್ತೆಯ ಒಂದೇ ಬದಿಯಲ್ಲಿ ವಾಹನ ಸಂಚರಿಸುತ್ತಿದ್ದು, ಅಪಘಾತಗಳು ಹೆಚ್ಚಾಗಿವೆ. ತಾಲೂಕಿನ ಗರಗನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ರಸ್ತೆ ಕಾಮಗಾರಿಯಿಂದ ಉಂಟಾಗುತ್ತಿರುವ ಧೂಳಿನಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ ಸುತ್ತಮುತ್ತಲಿನ ಕೃಷಿ ಭೂಮಿಗಳಲ್ಲಿನ ಬೆಳೆಗಳಿಗೂ ಹಾನಿಯಾಗುತ್ತಿದೆ ಎಂದು ದೂರಿದರು.

ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ರಸ್ತೆಯಲ್ಲಿ ಒಂದಲ್ಲಾ ಒಂದುಕಡೆ ಅಪಘಾತ ನಡೆಯುತ್ತಿದ್ದು, ಸಾವು-ನೋವು ಉಂಟಾಗುತ್ತಿವೆ. ಹೆದ್ದಾರಿ ಪ್ರಾಧಿಕಾರದವರು ಸಾರ್ವಜನಿಕರಿಗೆ ಗುಣಮಟ್ಟದ ರಸ್ತೆ ಒದಗಿಸದಿದ್ದರೂ ಮೈಸೂರು ಮತ್ತು ಗುಂಡ್ಲುಪೇಟೆ (ಕಣ್ಣೆಗಾಲ) ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ಸಂಗ್ರಹಿಸುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ . ಆದರೂ ಶಾಸಕರು ಹಾಗೂ ಸಂಸದರು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಶುಲ್ಕ ವಸೂಲಾತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಟೋಲ್ ಗೇಟ್ ಬಳಿಯಲ್ಲೇ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ರಾಜೇಂದ್ರ ವಿ.ನಾಯಕ್, ಮೋನಿಷ್, ಧನುಷ್ ಗೌಡ, ರವಿ ಬಾಂಡ್, ಕೆಂಪ , ಅರುಣ್ ನಾಯಕ್, ಮನೋಜ್ ಪಿ.ನಾಯಕ್, ಸುಕೃತ್, ಯಶ್ವಂತ್, ವಿನು ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net