ಕಲಬುರಗಿ ಜಿಲ್ಲೆಯಲ್ಲಿ 8.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ:ಬೀಜ-ರಸಗೊಬ್ಬರ ಕೊರತೆಯಿಲ್ಲ ; DC ಇಕ್ರಮ್ ಶರೀಫ್

,
,
Published on
ಕಲಬುರಗಿ: ಜಿಲ್ಲೆಯಲ್ಲಿ ಪ್ರಸಕ್ತ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಪ್ರಮುಖವಾಗಿ ತೊಗರಿ, ಹೆಸರು, ಉದ್ದಿ, ಹತ್ತಿ, ಸೋಯಾಬೀನ್ ಬೆಳೆ ಸೇರಿದಂತೆ ಒಟ್ಟು 8.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ‌ ಗುರಿ ಹೊಂದಲಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹೇಳಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಮುಖವಾಗಿ ತೊಗರಿ 6.3 ಲಕ್ಷ ಹೆಕ್ಟೇರ್, ಹೆಸರು 0.54 ಲಕ್ಷ ಹೆಕ್ಟೇರ್, ಉದ್ದು 0.25 ಲಕ್ಷ ಹೆಕ್ಟೇರ್, ಸೋಯಾಬೀನ್ 0.23 ಲಕ್ಷ ಹೆಕ್ಟೇರ್ ಹಾಗೂ ಹತ್ತಿ ಬೆಳೆಯನ್ನು 1.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.
ಇನ್ನು ಮುಂಗಾರು ಬಿತ್ತನೆಗೆ ಕೃಷಿ ಇಲಾಖೆಯಿಂದ ವ್ಯಾಪಕ ಸಿದ್ಧತೆ ಕೈಗೊಳ್ಳಲಾಗಿದ್ದು, ಮುಂಗಾರು ಹಂಗಾಮಿಗೆ ಜಿಲ್ಲೆಗೆ ಒಟ್ಟು 22,828.03 ಕ್ವಿಂಟಲ್ ಬಿತ್ತನೆ ಬೀಜಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ತೊಗರಿ 6,011.17 ಕ್ವಿಂಟಲ್, ಹೆಸರು 535.93 ಕ್ವಿಂಟಲ್, ಉದ್ದು 379.40 ಕ್ವಿಂಟಲ್ ಹಾಗೂ ಸೋಯಾಬೀನ್ 15,681.64 ಕ್ವಿಂಟಲ್ ಸೇರಿದೆ. ಈಗಾಗಲೇ ಒಟ್ಟು 22,608.14 ಕ್ವಿಂಟಲ್ ಬೀಜಗಳ ಇಂಡೆಂಟ್ ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ (ಆರ್‌ಎಸ್‌ಕೆ) ಸಮರ್ಪಕವಾಗಿ ದಾಸ್ತಾನು ಮಾಡಲಾಗಿದ್ದು, ಯಾವುದೇ ರೀತಿಯ ಬಿತ್ತನೆ ಬೀಜದ ಕೊರತೆ ಇಲ್ಲ. ಹೀಗಾಗಿ ರೈತರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಇಕ್ರಮ್ ಶರೀಫ್ ಅವರು ಸ್ಪಷ್ಟಪಡಿಸಿದರು.
ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿದರೆ ಕ್ರಮ:
ಜಿಲ್ಲೆಯಲ್ಲಿ ಯಾವುದೇ ಕೃಷಿ ಪರಿಕರ ಮಾರಾಟ ಅಂಗಡಿಯವರು ರಸಗೊಬ್ಬರವನ್ನು ಹೆಚ್ಚಿನ‌ ದರಕ್ಕೆ‌ ಮಾರಾಟ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಡಿ.ಸಿ ಅವರು, ಈಗಾಗಲೆ ಕಳೆದ ವಾರ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಜಿಲ್ಲೆಯ ಜೇವರ್ಗಿ, ಯಡ್ರಾಮಿ, ಚಿತ್ತಾಪುರ, ಸೇಡಂ ತಾಲೂಕಿನಲ್ಲಿ ದಾಳಿ ಮಾಡಿ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ 26 ಅಂಗಡಿಗಳಿಗೆ‌ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿದ್ದ ರಸಗೊಬ್ಬರವನ್ನು ಸಂಶಾಯಸ್ಪಗೊಂಡು ಪ್ರಸ್ತುತ ಮಾರಾಟ ಮಾಡದಂತೆ ತಡೆ ಆದೇಶ‌ ನೀಡಿದೆ. ಇದು ನಿರಂತರವಾಗಿ ನಡೆಯುವಂತೆ ನಿರ್ದೇಶನ ನೀಡಿದ್ದೇನೆ ಎಂದರು.
ರಸಗೊಬ್ಬರ ದಾಸ್ತಾನಿದೆ,ಆತಂಕ ಬೇಡ
ಪ್ರಸಕ್ತ 2026-27ನೇ ಸಾಲಿಗೆ ಜಿಲ್ಲೆಗೆ ಒಟ್ಟು 99,863 ಮೆಟ್ರಿಕ್ ಟನ್ ರಸಗೊಬ್ಬರ ಹಂಚಿಕೆ ಮಾಡಲಾಗಿದೆ. ಜೂನ್ ಮಾಹೆಯ ಅಂತ್ಯದವರೆಗೆ ಒಟ್ಟು 50,297 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದ್ದು, ಆರಂಭಿಕ ಶುಲ್ಕ ಒಳಗೊಂಡಂತೆ ಒಟ್ಟು 59,402 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ. ಇದರಲ್ಲಿ ಈಗಾಗಲೇ 21,051 ಮೆಟ್ರಿಕ್ ಟನ್ ರಸಗೊಬ್ಬರವನ್ನು ರೈತರಿಗೆ ವಿತರಿಸಲಾಗಿದೆ. ಇನ್ನುಳಿದಂತೆ 11,634 ಮೆ.ಟನ್ ಯೂರಿಯಾ, 9,583 ಮೆ.ಟನ್ ಡಿಎಪಿ ಹಾಗೂ 13,990 ಮೆ.ಟನ್ ಕಾಂಪ್ಲೆಕ್ಸ್ ಸೇರಿ ಒಟ್ಟು 38,351 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ರಸಗೊಬ್ಬರದ ಕೊರತೆಯ ಬಗ್ಗೆ ಆತಂಕ ಬೇಡ ಎಂದರು.
ಜಿಲ್ಲೆಯಲ್ಲಿ ರಸಗೊಬ್ಬರದ ಅಭಾವವಿಲ್ಲದಿದ್ದರೂ, ಡಿಎಪಿ ಹಾಗೂ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ಗೊಬ್ಬರಗಳನ್ನು ಬಳಸಲು ರೈತರಲ್ಲಿ ಜಾಗೃತಿ ಮೂಡಿಸಲು ಗ್ರಾಮವಾರು ವ್ಯಾಪಕ ಪ್ರಚಾರ ಕಾರ್ಯ ಸಹ ಕೃಷಿ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಸಂಕನೂರ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ,  ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net