ಮುಧೋಳದ ಕವಿ ಚಕ್ರವರ್ತಿ ರನ್ನ ಸಾಂಸ್ಕೃತಿಕ ಭವನದಲ್ಲಿ ಚಿಂತನಸಿರಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮವನ್ನು ಎಲ್.ಬಿ. ನಾಯಕ ಹಾಗೂ ಗಣ್ಯರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಡಾ. ಬದ್ರಿ ಪ್ರಸಾದ್, ಎಂ.ಆರ್. ದೇಸಾಯಿ, ಡಾ. ಸಂಗಮೇಶ ಕಲ್ಯಾಣಿ, ಡಾ. ಶಿವಾನಂದ ಕುಬಸದ ಇತರರಿದ್ದರು.
ಮುಧೋಳ: ರೈತರು ತಮ್ಮ ಭೂಮಿಗೆ ಯಾವುದು ಸೂಕ್ತ ಬೆಳೆ ಎಂಬುದನ್ನು ಅರಿಯಲು ಪ್ರತಿ ಮೂರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ನಿವೃತ್ತ ಪ್ರಧಾನ ಕೃಷಿ ವಿಜ್ಞಾನಿ ಎಲ್.ಬಿ. ನಾಯಿಕ ಹೇಳಿದರು.
ನಗರದ ಕವಿ ಚಕ್ರವರ್ತಿ ರನ್ನ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಚಿಂತನಸಿರಿ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಮಣ್ಣಿನೊಂದಿಗೆ ಮಾತುಕತೆ’ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಿಂತನಸಿರಿ ಸಂಸ್ಥೆ ಸದಾ ಮೌಲ್ಯಯುತ ವಿಚಾರಗಳನ್ನು ಮುಂದಿಟ್ಟುಕೊಂಡು ರೈತಪರ ಕಾರ್ಯಕ್ರಮಗಳನ್ನು ರೂಪಿಸುತ್ತ ಬಂದಿರುವುದು ಶ್ಲಾಘನೀಯ. ರೈತರು ಎದುರಿಸುತ್ತಿರುವ ಕೃಷಿ ಸಮಸ್ಯೆಗಳಿಗೆ ಮತ್ತು ಪ್ರಶ್ನೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ ಎಂದು ತಿಳಿಸಿದರು.
ಚಿಂತನಸಿರಿ ಗೌರವಾಧ್ಯಕ್ಷ ಎಂ.ಆರ್. ದೇಸಾಯಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಹಾಗೂ ರೈತರ ಸಬಲೀಕರಣಕ್ಕಾಗಿ ಚಿಂತನಾ ಸಭೆಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಆಶಯ ನುಡಿಗಳನ್ನಾಡಿದ ಚಿಂತನ ಸಿರಿ ಅಧ್ಯಕ್ಷ ಡಾ. ಸಂಗಮೇಶ ಕಲ್ಯಾಣಿ, ಇಂದಿನ ಆಧುನಿಕ ಕೃಷಿ ಪದ್ಧತಿಯಲ್ಲಿ ಮಣ್ಣಿನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ರೈತರು ಕೇವಲ ರಾಸಾಯನಿಕ ಕೃಷಿಗೆ ಶರಣಾಗದೆ, ಪ್ರಾಚೀನ ಹಾಗೂ ನೈಸರ್ಗಿಕ ಪದ್ಧತಿಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು.
ಚಿಂತನಸಿರಿ ನಿಕಟಪೂರ್ವ ಅಧ್ಯಕ್ಷ ಡಾ. ಶಿವಾನಂದ ಕುಬಸದ ಮಾತನಾಡಿ, ಕೃಷಿ ಮತ್ತು ಪರಿಸರ ಒಂದಕ್ಕೊಂದು ಬೆಸೆದುಕೊಂಡಿವೆ. ರೈತರು ಕೇವಲ ಬೆಳೆ ಉತ್ಪಾದನೆ ಬಗ್ಗೆ ಮಾತ್ರವಲ್ಲದೆ, ಮಣ್ಣಿನ ಜೀವ ವೈವಿಧ್ಯತೆ ಉಳಿವಿನ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕಾದ ಕಾಲಘಟ್ಟವಿದು ಎಂದರು.
ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಬದ್ರಿ ಪ್ರಸಾದ್ ಪಿ.ಆರ್. ಮಾತನಾಡಿ, ಭೂಮಿಗೆ ಅತಿಯಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಮೊದಲನೇ ವರ್ಷ ದೊರೆತಷ್ಟು ಇಳುವರಿ ಕ್ರಮೇಣ ಎರಡನೇ ಮತ್ತು ಮೂರನೇ ವರ್ಷ ಕಡಿಮೆಯಾಗುತ್ತಾ ಹೋಗುತ್ತದೆ. ಕೇವಲ ರಾಸಾಯನಿಕ ಅವಲಂಬಿಸದೆ, ಸಾವಯವ ಗೊಬ್ಬರವನ್ನು ಕೂಡ ಮಣ್ಣಿಗೆ ಸೇರಿಸಬೇಕು. ಇದರಿಂದ ಭೂಮಿ ಲವತ್ತತೆಯನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ಸಾಧ್ಯ ಎಂದು ವಿವರಿಸಿದರು.
ಡಾ. ಸಂಗಮೇಶ ಕಲ್ಯಾಣಿ, ರಮೇಶ್ ಅಣ್ಣಿಗೇರಿ ಡಾ. ಶಿವಾನಂದ ಕುಬಸದ, ಡಾ. ಎಂ.ಆರ್. ಬೆಣ್ಣೂರ ಇತರರಿದ್ದರು.