ಕೇಬಲ್ ಅಳವಡಿಕೆ ನೆಪ ರಸ್ತೆ ಮೇಲೆ ಮಣ್ಣು

ಪ್ರಮುಖ ಗ್ರಾಮಗಳಿಗೆ ತೆರಳುವ ಮುಖ್ಯ ರಸ್ತೆ ಬದಿಯಲ್ಲಿ ಕೇಬಲ್ ಅಳವಡಿಸುವ ಸಲುವಾಗಿ ಜೆಸಿಬಿಯಿಂದ ತಗ್ಗು ತೋಡಿ ಅದರ ಮಣ್ಣನ್ನು ಹಾಕಿರುವುದು.
ಪ್ರಮುಖ ಗ್ರಾಮಗಳಿಗೆ ತೆರಳುವ ಮುಖ್ಯ ರಸ್ತೆ ಬದಿಯಲ್ಲಿ ಕೇಬಲ್ ಅಳವಡಿಸುವ ಸಲುವಾಗಿ ಜೆಸಿಬಿಯಿಂದ ತಗ್ಗು ತೋಡಿ ಅದರ ಮಣ್ಣನ್ನು ಹಾಕಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಂಚಾರಕ್ಕೆ ಸಂಚಕಾರ
  • ಸಂಬಂಧಿತ ಇಲಾಖೆ ಅಧಿಕಾರಿಗಳ ಅನುಮತಿ ಪಡೆದಿಲ್ಲವೆಂಬ ಆರೋಪ
ಚಡಚಣ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಪ್ರಮುಖ ಗ್ರಾಮಗಳಿಗೆ ತೆರಳುವ ಮುಖ್ಯ ರಸ್ತೆಗಳ ಬದಿಗಳಲ್ಲಿ ಬಿಎಸ್‌ಎನ್‌ಎಲ್ ಕೇಬಲ್ ಅಳವಡಿಸುವ ಸಂಬಂಧ ಜೆಸಿಬಿಯಿಂದ ತಗ್ಗು ತೋಡಿ ಅದರ ಮಣ್ಣನ್ನು ರಸ್ತೆ ಮೇಲೆ ಹಾಕುತ್ತಿರುವ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.
ತಾಲೂಕಿನ ಜಿಗಜೇವಣಿಯಿಂದ ಇಂಚಗೇರಿ, ಚಡಚಣದಿಂದ ಗೋಡಿಹಾಳ ಮಾರ್ಗವಾಗಿ ಲೋಣಿ ಬಿ.ಕೆ., ಲೋಣಿಯಿಂದ ಕೆರೂರ, ರೇವತಗಾಂವದಿಂದ ಉಮರಜ, ಜೀರಂಕಲಗಿಯಿಂದ ದೇವರನಿಂಬರಗಿ ಗ್ರಾಮಗಳಿಗೆ ಹೋಗುವ ಮುಖ್ಯ ರಸ್ತೆಗಳಲ್ಲಿ ಇಂತಹ ಸಮಸ್ಯೆ ಎದುರಾಗಿದೆ.
ರಸ್ತೆಯ ಬದಿ ತಗ್ಗು ತೋಡಿ, ತಗ್ಗನ್ನು ಸರಿಯಾಗಿ ಮುಚ್ಚದ ಪರಿಣಾಮ ಭಾನುವಾರ ಇಂಚಗೇರಿ ಗ್ರಾಮದಿಂದ ಜಿಗಜೇವಣಿ ಗ್ರಾಮಕ್ಕೆ ತೆರಳುತ್ತಿರುವ ಟಾಟಾ ಎಸ್ ವಾಹನ ಆಯಾತಪ್ಪಿ ರಸ್ತೆಯ ಬದಿಗೆ ಮುಗುಚಿ ಬಿದ್ದ ಘಟನೆಯೂ ನಡೆದಿದೆ. ಅಲ್ಲದೇ ಹಲವು ಬಾರಿ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದಿರುವ ಘಟನೆಗಳೂ ನಡೆದು ಗ್ರಾಮಸ್ಥರು ಹಲವು ಬಾರಿ ಸಂಬಂಧಿತ ಗುತ್ತಿಗೆದಾರರು ಇದ್ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ.
ಈ ವಿಷಯವಾಗಿ ಸಾರ್ವಜನಿಕರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ ಅವರು, ಯಾವುದೇ ಕಾಮಗಾರಿಗೆ ನಮ್ಮಿಂದ ಪೂರ್ವಾನುಮತಿ ಪಡೆದೇ ಇಲ್ಲ ಎಂದು ಹೇಳುತ್ತಿದ್ದಾರೆ.
ಬಿಎಸ್‌ಎನ್‌ಎಲ್ ಅಧಿಕಾರಿಗಳನ್ನು ಕೇಳಿದರೆ ಅವರು ಈ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂಬ ಹೇಳಿಕೆ ಕೊಡುತ್ತಿದ್ದಾರೆ. ಹಾಗಿದ್ದರೆ ಕೇಬಲ್ ಅಳವಡಿಕೆ ಮಾಡಲು ಸಂಬಂಧಿತರು ಯಾರ ಅನುಮತಿ ಪಡೆದಿದ್ದಾರೆ ? ಎಂಬುದು ಜನತೆಯ ಪ್ರಶ್ನೆಯಾಗಿದೆ. ಈ ಕಾಮಗಾರಿಯಿಂದ ರಸ್ತೆ ಸಂಚಾರಕ್ಕೆ ಆಗುತ್ತಿರುವ ತೊಂದರೆ ಕುರಿತು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಘೋಷಿತ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಪ್ರಭಾಕರ ನಿರಾಳೆ ಆಗ್ರಹಿಸಿದ್ದಾರೆ.
"

ಸಂಬಂಧಪಟ್ಟ ಪಾಲಿಕ್ಯಾಬ್ ಕಂಪನಿಯವರಿಗೆ ಕೇಳಿದರೆ ಅವರು ರಾಜ್ಯಮಟ್ಟದಿಂದ ಅನುಮತಿ ಪಡೆದಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಅನುಮತಿ ಕುರಿತು ಇಂಡಿ ವಿಭಾಗೀಯ ಕಚೇರಿಗೆ ಯಾವುದೇ ಪತ್ರ ನೀಡಿಲ್ಲ. ನಮ್ಮ ಇಲಾಖೆಗೂ ಕೂಡ ಸಾರ್ವಜನಿಕರಿಂದ ಈ ಕುರಿತು ದೂರುಗಳು ಬಂದಿವೆ. ಕಂಪನಿಯವರಿಗೆ ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದೆ. ತಪ್ಪಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.

ಎಸ್.ಬಿ. ಪಾಟೀಲ, ವಿಭಾಗೀಯ ಅಧಿಕಾರಿ, ಲೋಕೋಪಯೋಗಿ ಇಲಾಖೆ

"

ಸಂಬಂಧಪಟ್ಟ ಪಾಲಿಕ್ಯಾಬ್ ಕಂಪನಿಯವರು ಇಲಾಖೆಗೆ ಕಾಮಗಾರಿ ಕುರಿತು ಮಾಹಿತಿ ನೀಡಿಲ್ಲ. ಅನುಮತಿ ಕೂಡ ಪಡೆದಿಲ್ಲ. ನಮ್ಮ ಇಲಾಖೆಗೂ ಕೂಡ ಸಾರ್ವಜನಿಕರಿಂದ ಕಾಮಗಾರಿಯ ಕುರಿತು ದೂರುಗಳು ಬಂದಿದ್ದು, ಈ ಕುರಿತು ನಮ್ಮ ಇಲಾಖೆ ಹಿರಿಯ ಅಧಿಕಾರಿಗಳಿಗೆ ಇ-ಮೇಲ್ ಮುಖಾಂತರ ಮಾಹಿತಿ ನೀಡಿದ್ದೇನೆ.

ವಿಠ್ಠಲ ಜಾಧವ, ಜೆಟಿಓ. ಬಿಎಸ್‌ಎನ್‌ಎಲ್, ವಿಜಯಪುರ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net