

ಬೆಂಗಳೂರು : ಶೋಷಿತ ಸಮಾಜದ ಎಲ್ಲ ಸಮುದಾಯಗಳು ಒಗ್ಗಟ್ಟಿನಿಂದ ಸಾಗಿದಾಗ ಮಾತ್ರ ಸಾಮಾಜಿಕ ನ್ಯಾಯದ ಆಶಯಗಳನ್ನು ಸಾಕಾರಗೊಳಿಸಲು ಸಾಧ್ಯ. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಎಲ್ಲರೂ ಸಹೋದರರಂತೆ ಒಂದಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಮುನಿಯಪ್ಪ ಹೇಳಿದರು.
ವಸಂತ ನಗರದ ಲಿಡ್ಕರ್ ಭವನದಲ್ಲಿ ಲಿಡ್ಕರ್ ಸಂಸ್ಥೆಯ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಳಮೀಸಲಾತಿ ವಿಚಾರವಾಗಿ ಸರ್ಕಾರದ ಮಟ್ಟದಲ್ಲಿ ಹಲವು ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಮುದಾಯಗಳ ಬೇಡಿಕೆಗಳು ಹಾಗೂ ಕಾರ್ಯಕರ್ತರ ಸಮಸ್ಯೆಗಳನ್ನು ಪರಸ್ಪರ ಚರ್ಚೆಯ ಮೂಲಕ ಪರಿಹರಿಸಿಕೊಳ್ಳಬೇಕು. ಯಾವುದೇ ವಿಚಾರದಲ್ಲಿ ಒಡಕು ಮೂಡದಂತೆ ಎಲ್ಲರೂ ಸಂಯಮದಿಂದ ನಡೆದುಕೊಳ್ಳಬೇಕು. ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳು ಒಗ್ಗಟ್ಟಿಗೆ ಧಕ್ಕೆಯಾಗಬಾರದು. ಕುಟುಂಬದಲ್ಲಿ ಅಣ್ಣ-ತಮ್ಮಂದಿರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಹೊರಗಿನ ಸಮಸ್ಯೆ ಎದುರಾದಾಗ ಒಂದಾಗುವಂತೆ ಒಗ್ಗಟ್ಟಿದ್ದಾಗ ಮಾತ್ರ ಹೆಚ್ಚಿನ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಸಚಿವರು ವಿವರಿಸಿದರು.
1976ರಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಸ್ಥಾಪಿಸಿದ ಲಿಡ್ಕರ್ ಸಂಸ್ಥೆಗೆ 50 ವರ್ಷಗಳು ಪೂರ್ಣಗೊಂಡಿದ್ದು, 2010ರಲ್ಲಿ ಸಂಸ್ಥೆಗೆ ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಎಂದು ಮರು ನಾಮಕರಣ ಮಾಡಲಾಗಿದೆ. ಬಾಬು ಜಗಜೀವನರಾಮ್ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಸಾಮಾಜಿಕ ಪರಿವರ್ತನೆಗೆ ಮಹತ್ವದ ಕೊಡುಗೆ ನೀಡಿವೆ. ಇಲ್ಲಿ ದುಡಿಯುವ ಕಾರ್ಮಿಕರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಲೇಬಲ್ ಅವಶ್ಯಕತೆ ಇದ್ದು, ಆ ಬಗ್ಗೆ ಸಂಸ್ಥೆ ಕಾರ್ಯಯೋಜನೆ ರೂಪಿಸಿದರೆ ಸರ್ಕಾರ ಅದಕ್ಕೆ ಬೇಕಾದ ಸಹಕಾರ ನೀಡಲಿದೆ ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.
ಸಮಾರಂಭದಲ್ಲಿ ಲಿಡ್ಕರ್ ಎಂಡಿ ಡಾ.ಎಚ್.ನಟರಾಜ್, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಕೃಷ್ಣಮೂರ್ತಿ ಹಾಗೂ ವಿವಿಧದ ದಲಿತಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.