ಕುಣಿಗಲ್ :ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ಸಮಾನತೆ ತರಲು ಶ್ರಮಿಸಿದ ಶಾಂತವೇರಿ ಗೋಪಾಲಗೌಡರ ಸಾಧನೆ ಅವಿಸ್ಮರಣೀಯ ಎಂದು ಇತಿಹಾಸ ವಿಭಾಗದ ಮುಖ್ಯಸ್ಥಎಂ.ಟಿ.ಈಶ್ವರಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ, ಕನ್ನಡ, ಇತಿಹಾಸ ವಿಭಾಗದಿಂದ ಏರ್ಪಡಿಸಿದ್ದ ಶಾಂತವೇರಿ ಗೋಪಾಲಗೌಡರ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಶಾಂತವೇರಿ ಗೋಪಾಲಗೌಡರು
ಸಮಾಜವಾದಿ ಚಳವಳಿಯ ಅಗ್ರ ನೇತಾರರು.ಸಮಾಜ ಪರಿವರ್ತನೆಯ ಕನಸು ಕಂಡ ಮೇರು ವ್ಯಕ್ತಿ. ಸಮಾಜವಾದಿ ಚಿಂತನೆಗೆ ನಾಂದಿ ಹಾಡಿ, ರಾಜಕಾರಣಿಯಾಗಿ ಜನರ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದು ಬಣ್ಣಿಸಿದರು.
ಐಕ್ಯುಎಸಿ ಸಂಚಾಲಕರಾದ ಡಾ.ಟಿ.ಎನ್.ನರಸಿಂಹಮೂರ್ತಿ ಮಾತನಾಡಿ, ಶಾಂತವೇರಿ ಗೋಪಾಲಗೌಡರು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಲು ಶ್ರಮಿಸಿದರು. ಅವರ ಸಾಧನೆ, ಭವಿಷ್ಯದ ಪೀಳಿಗೆಗೆ ಮಾದರಿಯಾಗಿದೆ ಎಂದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎಂ.ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾರ ಪ್ರಾಂಶುಪಾಲೆಡಾ.ಎಂ.ಕೆ.ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಶಾಂತವೇರಿ ಗೋಪಾಲಗೌಡರ ಕುರಿತಂತೆ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದ ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಲಾಯಿತು.