

ದೊಡ್ಡಬಳ್ಳಾಪುರ :
ಡಾ.ರಾಜ್ಕುಮಾರ್ ವೃತ್ತಿ ಬದುಕಿನಲ್ಲಿ ಮಾದರಿ ವ್ಯಕ್ತಿತ್ವ ರೂಢಿಸಿಕೊಂಡವರು. ಅವರ ಸಾಮಾಜಿಕ ಮತ್ತು ವೈಯಕ್ತಿಕ ಬದುಕು ಪ್ರತಿಯೊಬ್ಬರಿಗೂ ಮಾದರಿ ಎಂದು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ ಹೇಳಿದರು.
ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿರುವ ಡಾ.ರಾಜ್ಕುಮಾರ್ ಪುತ್ಥಳಿ ಮುಂದೆ ವಿವಿಧ ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದಎನ್.ಆರ್.ರಮೇಶ್ ಅವರ "ಲೀಲಮ್ಮ ನಿನ್ನ ಗಂಡ ಯಾರಮ್ಮ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಳಿ ಸುದ್ದಿಗಳು ಆಗಾಗ್ಗೆ ಅವರ ಕುರಿತಾಗಿ ತಪ್ಪು ಮಾಹಿತಿ ಹರಡುವ ಪ್ರಯತ್ನ ನಡೆದಿದ್ದವು. ಅವುಗಳಿಗೆ ಈ ಪುಸ್ತಕದಲ್ಲಿ ಉತ್ತರವಿದೆ. ಡಾ.ರಾಜ್ಕುಮಾರ್ ರೀತಿಯಲ್ಲೇ ಲೀಲಾವತಿ ಅವರೂ ಅಪ್ರತಿಮ ಕಲಾವಿದೆ. ಅಭಿಜಾತ ಮಾದರಿಯಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಪಡೆದವರು. ಇಡೀ ಬದುಕಿನಲ್ಲಿ ಡಾ.ರಾಜ್ಕುಮಾರ್ ಅವರಾಗಲೀ, ಲೀಲಾವತಿ ಅವರಾಗಲಿ ಎಂದಿಗೂ ಪರಸ್ಪರ ಅಗೌರವದಿಂದ ನಡೆದುಕೊಂಡವರಲ್ಲ. ಅದೇ ರೀತಿ ಯಾವುದೇ ಆರೋಪ-, ಪ್ರತ್ಯಾರೋಪಗಳನ್ನೂ ಮಾಡಿದವರೂ ಅಲ್ಲ. ಆದರೆ, ಒಬ್ಬ ಮೇರುನಟನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ, ಅನಗತ್ಯವಾಗಿ ಅವರ ಹೆಸರಿಗೆ ಮಸಿ ಬಳೆಯುವ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದರು.
ಡಿ.ಪಿ.ಆಂಜನೇಯ, ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜೆ.ಆರ್.ರಮೇಶ್, ಗೌರವಾಧ್ಯಕ್ಷ ನಾರಾಯಣಸ್ವಾಮಿ, ಸಂಜೀವ, ಕರವೇ ಅಧ್ಯಕ್ಷ ಮರುಳಾರಾಧ್ಯ, ಕನ್ನಡ ಪಕ್ಷದ ವೆಂಕಟೇಶ್, ಮುನಿಪಾಪಯ್ಯ ಇದ್ದರು.