'ಕಾರಿನಲ್ಲಿ ಗರ್ಭಿಣಿ ಪತ್ನಿ ಇರಲಿಲ್ಲ, ಆದರೆ..'; ಬೆಂಗಳೂರು ರಸ್ತೆ ಮಧ್ಯೆ ಪ್ರತಿಭಟಿಸಿದ್ದ ವ್ಯಕ್ತಿ ಹೇಳಿದ್ದು ಹೀಗೆ..Bengaluru

Bengaluru Traffic Protest
Bengaluru Traffic Protest
Published on

ಪ್ರಮುಖ ಮುಖ್ಯಾಂಶಗಳು

  • ವಿಐಪಿ ಸಂಚಾರ ಮುಕ್ತ ಕಾರಿಡಾರ್​ ವಿರುದ್ಧ ವ್ಯಕ್ತಿ ಪ್ರತಿಭಟನೆ.
  • ನಾನು ನನ್ನ ಪತ್ನಿ ಜೊತೆಗೆ ಇರಲಿಲ್ಲ ಎಂದು ಸ್ಪಷ್ಟನೆ ಕೊಟ್ಟ ಪ್ರತಿಭಟನೆಕಾರ.
  • ತಪ್ಪು ಮಾಹಿತಿ ಹರಡಿದರೆ ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ಪೊಲೀಸರು.
Bengaluru Traffic Protest Governor: ನಿನ್ನೆಯಿಂದ ಬೆಂಗಳೂರಿನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವಿಚಾರ ಎಂದರೆ, ವ್ಯಕ್ತಿಯೊಬ್ಬಬ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ್ದ ವಿಡಿಯೋ.  ಇದು ವೈರಲ್​ ಆಗುತ್ತಲೇ ಸಿಟಿ ನಿವಾಸಿಗಳು ಇಲ್ಲಿನ ವಿವಿಐಪಿ ಸಂಸ್ಕೃತಿ ಬಗ್ಗೆ ಕಿಡಿಕಾರಿದ್ದರು.  ಹೈಡ್ರಾಮಾದ ಬಳಿಕ ಪೊಲೀಸರು ಕೈಗೊಂಡ ಕ್ರಮದಿಂದ ನಿಜಾಂಶ ಏನೆಂದು ತಿಳಿದುಬಂದಿದೆ.ಈ ಬಗ್ಗೆ ಪ್ರತಿಭಟಿಸಿದ ವ್ಯಕ್ತಿ ಸಹ ಸ್ಪಷ್ಟನೆ ಕೊಟ್ಟಿದ್ದಾರೆ. 
ನಾನು ನನ್ನ ಪತ್ನಿ ಜೊತೆಗೆ ಕಾರಿನಲ್ಲಿ ಇರಲಿಲ್ಲ. ಆಕೆ ಗರ್ಭಿಣಿ. ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿದ್ದಾಳೆ. ನಾನು ಒಬ್ಬನೇ ಕಾರಿನಲ್ಲಿ ಇದ್ದೆ. ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿದ್ದೆ ಮತ್ತು ತುರ್ತು ವೈದ್ಯಕೀಯ ಕಾರಣಗಳಿಗಾಗಿ ಆಕೆಯನ್ನು ಕರೆತರಲು ತಕ್ಷಣವೇ ಮನೆಗೆ ಹೋಗಲು ಪ್ರಯತ್ನಿಸುತ್ತಿದ್ದೆ. ಈ ಮಧ್ಯೆ ಸಂಚಾರ ಸ್ಥಗಿತಗೊಳಿಸಿದ್ದು ಆತಂಕಕ್ಕೆ ಕಾರಣವಾಯ್ತು ಎಂದು ಸುದೀರ್ಘವಾದ ಪೋಸ್ಟ್​ ಬರೆದುಕೊಂಡು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ಸಹ ತಪ್ಪು ಮಾಹಿತಿ ಹರಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಏನಿದು ಘಟನೆ?
ರಾಜ್ಯಪಾಲರ ಬೆಂಗಾವಲು ವಾಹನ ಸಂಚಾರಕ್ಕಾಗಿ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.  ಇದರಿಂದ ಸಿಟ್ಟಾದ ಮೋಹಿತ್​​ ಹೆಸರಿನ ಪ್ರತಿಭಟನಾಕಾರ ರಸ್ತೆ ಮಧ್ಯೆ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದ, ಓಲ್ಡ್​ ಏರ್ಪೋರ್ಟ್​ ರಸ್ತೆಯಲ್ಲಿ ಈಗಾಗಲೇ ಸುರಂಗ ಮಾರ್ಗದ ರಸ್ತೆ ನಿರ್ಮಾಣ ಹಂತದಲ್ಲಿದೆ. ಇದರಿಂದ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆ ಇದೆ. ಈ ಮಧ್ಯೆ ರಾಜ್ಯಪಾಲರ ಸಂಚಾರದಿಂದಾಗಿ ಸುಮಾರು 30 ನಿಮಿಷಗಳ ಕಾಲ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಗರ್ಭಿಣಿ ಪತ್ನಿಯನ್ನು ಹೊತ್ತೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡರು. ವಿಐಪಿ ಸಂಸ್ಕೃತಿ ದೂರಾವಾಗೋದು ಯಾವಾಗ ಎಂದು ಪ್ರಜ್ವಲ್​ ಪ್ರಿನ್ಸ್​ ಎನ್ನುವವರು ತಮ್ಮ ಎಕ್ಸ್​ ಖಾತೆಯಲ್ಲಿ  ವಿಡಿಯೋ ಹಂಚಿಕೊಂಡಿದ್ದರು. 

 ಈ ಬಗ್ಗೆ ಪೊಲೀಸರು ಏನಂದ್ರು?

 ಎಸಿಪಿ ಈಸ್ಟ್​​ ಬೆಂಗಳೂರು ಸಂಚಾರ ಪೊಲೀಸರ ಪ್ರಕಾರ, ಮೋಹಿತ್​ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರ ನಡೆಸಲಾಗಿದೆ. ಅವರು ಪತ್ನಿ ಜೊತೆ ಇರಲಿಲ್ಲ ಒಬ್ಬರೆ ಪ್ರಯಾಣಿಸುತ್ತಿದ್ದರು. ನಾವು ಸ್ಪಷ್ಟನೆ ನೀಡಲು ಬಯಸುವುದೇನೆಂದರೆ ಯಾವುದೇ ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್‌ಗಳು ಮತ್ತು ವೈದ್ಯಕೀಯ ತುರ್ತು ಪ್ರಕರಣಗಳಿಗೆ ಯಾವಾಗಲೂ ಆದ್ಯತೆ ನೀಡಲಾಗುತ್ತದೆ. ಸಾರ್ವಜನಿಕರಿಗೆ ಇದನ್ನು ಪುನಃ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ಗಂಭೀರ ವಿಚಾರಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಆಧಾರರಹಿತವಾಗಿ ಪ್ರಚಾರ ಮಾಡುವ ಮುನ್ನ ಎಚ್ಚರವಹಿಸಿ. ಸತ್ಯ ಏನು, ನಿಜಾಂಶ ಏನಿದೆ ಎನ್ನುವುದನ್ನು ಪರಿಶೀಲನೆ ನಡೆಸಿ ಆನಂತರ ವಿಚಾರಗಳನ್ನು ಹಂಚಿಕೊಳ್ಳಿ. ಸುಳ್ಳು ಸುದ್ದಿಗಳನ್ನು ಹರಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಟ್ವೀಟ್ ಮಾಡಿದೆ. 
ಪ್ರತಿಭಟನಾಕಾರ ಮೋಹಿತ್​ ಏನಂದ್ರು?
ಕಳೆದ ಒಂದು ದಿನದಿಂದ ನನಗೆ ಹಲವರು ಸಾಕಷ್ಟು ಬೆಂಬಲ ಕೊಟ್ಟಿದ್ದೀರಿ ಆದರೆ, ನಾನೀಗ ನನ್ನ ಕಡೆಯ ವಿಚಾರವನ್ನು ಹೇಳುವ ಸಮಯ ಬಂದಿದೆ. ತಪ್ಪಾಗಿ ವರದಿಯಾಗಿರುವ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇನೆ ಎನ್ನುತ್ತಾ..ಹೇಳಿದ್ದು ಹೀಗೆ
ಕೆಲವು ಕಡೆ ಸುದ್ದಿಯಾಗಿರುವಂತೆ ನಾನು ನನ್ನ ಪತ್ನಿ ಜೊತೆ ಕಾರಿನಲ್ಲಿರಲಿಲ್ಲ.  ಆದರೆ, ನನಗೆ ತುರ್ತು ಕೆಲಸವಿತ್ತು. ಪತ್ನಿಯ ಗರ್ಭಾವಸ್ಥೆಯ ಕೊನೆಯ ದಿನ ಹೀಗಾಗಿ ನಾನು ಕೂಡಲೇ ಆಕೆ ಬಳಿ ಪ್ರಯಾಣಿಸಬೇಕಿತ್ತು. ಮನೆಗೆ ತಲುಪಲು ಇಸ್ರೋ ಜಂಕ್ಷನ್‌ನಲ್ಲಿ ಯು-ಟರ್ನ್ ತೆಗೆದುಕೊಳ್ಳಬೇಕಾಗಿತ್ತು. ಇಲ್ಲಿನ ಟ್ರಾಫಿಕ್​ ಹೇಗಿದೆ ಎಂದು ನಿಮಗೆ ತಿಳಿದೇ ಇದೆ. ಆದ್ದರಿಂದ ನನಗೆ ಆತಂಕವಾಗಿತ್ತು ಎಂದರು.
ನಾನು ರಸ್ತೆಯಲ್ಲಿ ತುಂಬಾ ಹೊತ್ತು ಕಾದೆ. ನನಗೆ ಪತ್ನಿಯ ಆರೋಗ್ಯದ ಬಗ್ಗೆ ಚಿಂತೆಯಾಯಿತು. ನಿರಾಶೆಗೊಳಗಾದೆ ಆ ಹತಾಶೆಯೇ ಕೊನೆಗೆ ಈಗ ಎಲ್ಲರೂ ನೋಡಿರುವ ಘಟನೆಗೆ ಕಾರಣವಾಯಿತು. ನನಗೆ ಟ್ರಾಫಿಕ್​ ಪೊಲೀಸರ ವಿರುದ್ಧ ಯಾವುದೇ ದ್ವೇಷ ಅಥವಾ ದೂರು ಇಲ್ಲ.  ಇಂದಿನ ದಿನದಲ್ಲಿ  ವಿಐಪಿ ಮತ್ತು ವಿವಿಐಪಿ ಸಂಚಾರಕ್ಕಾಗಿ ಸಂಚಾರ ಮುಕ್ತ ಕಾರಿಡಾರ್​ ನಿರ್ಮಿಸಿ, ಗಂಟೆ ಗಂಟಲೇ ಕಾಯುವಂತೆ ಮಾಡುವುದು ಎಷ್ಟು ಸರಿ. ಈ ಹತಾಶೆಯಿಂದ ಪ್ರತಿಭಟಿಸಿದೆ ಎಂದು ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net