

ರಾಜ್ಯದಲ್ಲಿ 2026-27ನೇ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಕರು ಪಾಠಗಳನ್ನೇ ಮಾಡುತ್ತಿಲ್ಲ. ಈ ಬಗ್ಗೆ ಪಾಲಕರು ಆತಂಕ ವ್ಯಕ್ತಪಡಿಸಿದ್ದು, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.
ರಾಜ್ಯದಲ್ಲಿ ಮತದಾರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿರುವ ಕಾರಣ ಶಾಲಾ ಶಿಕ್ಷಕರು ಹಾಗೂ ಪಿಯು ಉಪನ್ಯಾಸಕರು ಬೂತ್ಮಟ್ಟದ ಅಧಿಕಾರಿಗಳಾಗಿ (ಬಿಎಲ್ಒ) ತೊಡಗಿಸಿಕೊಂಡಿದ್ದಾರೆ. ಶಾಲೆಯಲ್ಲಿ ಒಬ್ಬರೋ ಇಬ್ಬರೋ ಅತಿಥಿ ಶಿಕ್ಷಕರು ನಿರ್ವಹಣೆ ಮಾಡುತ್ತಿದ್ದಾರೆ. ಅವರು ಕೂಡ ಬಿಸಿಯೂಟ, ಹಾಲು, ಮೊಟ್ಟೆ/ಬಾಳೆಹಣ್ಣು ವಿತರಣೆ ಸೇರಿ ಇತರ ಸೌಲಭ್ಯಗಳನ್ನು ವಿತರಿಸುವಲ್ಲಿಯೇ ನಿರತರಾಗಿದ್ದಾರೆ. ಶಾಲೆಗಳಲ್ಲಿ ಪಾಠ-ಪ್ರವಚನ ಕುರಿತು ಪ್ರಶ್ನಿಸಿದರೂ ಶಿಕ್ಷಕರು ಅಸಹಾಯಕತೆ ತೋರ್ಪಡಿಸುತ್ತಿದ್ದಾರೆ. ಹಾಗಾದರೆ, ಮಕ್ಕಳ ಕತೆ ಏನು? ಎಂದು ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಎಸ್ಐಆರ್ ಕೆಲಸವನ್ನು ಸದ್ಯಕ್ಕೆ ಆ.9ರವರೆಗೆ ವಿಸ್ತರಿಸಲಾಗಿದೆ. ಒಂದು ವೇಳೆ ಪೂರ್ಣಗೊಳ್ಳದಿದ್ದರೆ ಮತ್ತೆ ಸಮಯ ವಿಸ್ತರಿಸುತ್ತಾರೆ. ಶಾಲಾ ಆರಂಭವಾಗಿ ಕನಿಷ್ಠ ಎರಡೂವರೆ ತಿಂಗಳು ಮುಗಿಯಲಿದೆ. ಈ ನಡುವೆ ಹಬ್ಬ-ಹರಿದಿನ, ಸರ್ಕಾರಿ ರಜೆಗಳು, ದಸರಾ ರಜೆ ಬರಲಿವೆ. ಇನ್ನೆಲ್ಲಿ ಪಾಠ ನಡೆಯಲಿವೆ ಎಂದು ಪ್ರಶ್ನಿಸಿದ್ದಾರೆ.
ಈ ಶೈಕ್ಷಣಿಕ ವರ್ಷ ಎಸ್ಐಆರ್ ಕೆಲಸಕ್ಕೇ ಮುಗಿಯುವುದಿಲ್ಲ. ಮುಂದಿನ ದಿನಗಳಲ್ಲಿ ಜಿಬಿಎ, ಜಿಪಂ ಸೇರಿ ಸ್ಥಳೀಯ ಚುನಾವಣೆ ಘೋಷಿಸುವ ಸಾಧ್ಯತೆಗಳಿವೆ. ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಕೇಂದ್ರ ಸರ್ಕಾರ ಜನಗಣತಿ ಆರಂಭಿಸುವ ಸಾಧ್ಯತೆಗಳಿವೆ. ಹೀಗಾದರೆ ಮಕ್ಕಳ ಪರಿಸ್ಥಿತಿ ಏನು ಎಂದು ಪಾಲಕ ರವಿಕುಮಾರ್ ಪ್ರಶ್ನಿಸಿದ್ದಾರೆ.
ಕೆಲಸವನ್ನೂ ಮಾಡಬೇಕು. ಅತ್ತ ಪಾಠಗಳನ್ನೂ ನೋಡಬೇಕು. ಶಾಲೆಯಲ್ಲಿನ ಸೌಲಭ್ಯ ವಿತರಣೆಗಳ ವಿವರಗಳನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು. ಇಡೀ ದಿನ ಇದೇ ಕೆಲಸವಾಗಿದ್ದು, ಬೋಧನೆಗೆ ಸಮಯವೇ ಸಿಗುತ್ತಿಲ್ಲ. ಪಾಠಗಳನ್ನು ಯಾವಾಗ ಪೂರ್ಣಗೊಳಿಸುವುದು ಎಂಬ ಪ್ರಶ್ನೆ ಎದುರಾಗಿದೆ. ಪರಿಸ್ಥಿತಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ, ಅಧಿಕಾರಿಗಳೇ ಎಸ್ಐಆರ್ ಮುಗಿಸುವಂತೆ ಹೇಳುತ್ತಿರುವುದರಿಂದ ಅನಿವಾರ್ಯವಾಗಿ ಭಾಗವಹಿಸಬೇಕಿದೆ ಎಂದು ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾ ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳಿಗಿಂತ ಶಿಕ್ಷಕರು ಮತ್ತು ಪಿಯು ಉಪನ್ಯಾಸಕರಿಗೇ ಭಯವಾಗಿದೆ. ಫಲಿತಾಂಶ ನೀಡದಿದ್ದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಮೇಲಿಂದ ಮೇಲೆ ಪ್ರಶ್ನಿಸುತ್ತಾರೆ ಎಂದು ಶಿಕ್ಷಕರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ತರಗತಿಗಳಲ್ಲಿ ಬೋಧನೆ ಮತ್ತು ಎಸ್ಐಆರ್ಗೆ ಸಮಾನವಾಗಿ ಸಿಬ್ಬಂದಿ ನಿಯೋಜಿಸಲು ಜಿಲ್ಲಾ ಹಂತದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಶಾಲಾ ಮುಖ್ಯಶಿಕ್ಷಕರು ನಿರ್ವಹಣೆ ಮಾಡಬೇಕಿದೆ.
| ವಿಕಾಸ್ ಕಿಶೋರ್ ಸುರಳ್ಕರ್ ಶಾಲಾ ಶಿಕ್ಷಣ ಆಯುಕ್ತ
ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಸುತ್ತಿರುವ ಚುನಾವಣೆ ಆಯೋಗಕ್ಕೆ ಪ್ರಸ್ತುತ ನಡೆಯುತ್ತಿರುವ ಎನ್ಯುಮರೇಷನ್ ಫಾಮ್ರ್ ಡಿಜಿಟಲೀಕರಣ ಪ್ರಕ್ರಿಯೆಯ ಮೂಲ ಹಂತಕ್ಕಿಂತಲೂ, ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯ ನಂತರದ ಎರಡನೇ ಚರಣವೇ ಸವಾಲಾಗಿ ಪರಿಣಮಿಸುವ ಲಕ್ಷಣಗಳು ದಟ್ಟವಾಗಿವೆ. ಆ.17ರಂದು ಕರಡು ಮತದಾರರ ಪಟ್ಟಿ ಹೊರಬೀಳಲಿದೆ. ಜು.30ರ ಅಂಕಿ-ಅಂಶಗಳ ಪ್ರಕಾರ, ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ ಶೇ.78.03 ಎನ್ಯುಮರೇಷನ್ ಫಾರ್ಮ್ಗಳು ಡಿಜಿಟಲೀಕರಣಗೊಂಡಿವೆ. ಇನ್ನು 23 ಲಕ್ಷದಷ್ಟು ಎನ್ಯುಮರೇಷನ್ ಸ್ವೀಕರಿಸಿ ಡಿಜಿಟಲೀಕರಿಸಿದರೆ ಮೊದಲ ಹಂತ ಮುಕ್ತಾಯವಾಗಲಿದೆ. ಆದರೆ, ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ಎಲೆಕ್ಟೋರಲ್ ನೋಂದಣಿ ಅಧಿಕಾರಿಗಳು (ಇಆರ್ಒ) ಪರಿಶೀಲಿಸಿ, ಅಂಗೀಕರಿಸಿದರಷ್ಟೇ ಅಂತಿಮ ಪಟ್ಟಿಗೆ ಸೇರ್ಪಡೆಯಾಗುತ್ತವೆ.
ಪ್ರಸ್ತುತ ಬಂದಿರುವ ಅರ್ಜಿಗಳಲ್ಲಿ ಲೋಪಗಳು ಕಂಡುಬಂದಿರಬಹುದು. ಈ ಸವಾಲು ಎದುರಿಸಲು ಆಯೋಗ ಸಕಲ ಸಿದ್ಧತೆ ನಡೆಸುತ್ತಿದೆ. ಆ.8ರವರೆಗೆ ಪರಿಶೀಲನೆ ಹಾಗೂ ಡಿಜಿಟಲೀಕರಣ ಮುಕ್ತಾಯಗೊಳ್ಳುತ್ತಿದ್ದಂತೆ, ಆ.8ರಿಂದ 17ರವರೆಗೆ ಇಆರ್ಒಗಳು ಮತ್ತು ತಳಮಟ್ಟದ ಸಿಬ್ಬಂದಿಗೆ 2ನೇ ಹಂತದ ಕಾರ್ಯಾಚರಣೆಯ ತರಬೇತಿ ಮತ್ತು ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತದೆ. ತದನಂತರ ಆ.17ಕ್ಕೆ ಕರಡು ಪಟ್ಟಿ ಪ್ರಕಟಗೊಂಡ ತಕ್ಷಣವೇ, ಶಂಕಾಸ್ಪದ ಅರ್ಜಿಗಳನ್ನು ಹೊಂದಿರುವ ಮತದಾರರಿಗೆ ನೋಟಿಸ್ ವಿತರಿಸುವ ಅಭಿಯಾನ ಆರಂಭಗೊಳ್ಳಲಿದೆ.
ರಾಜ್ಯಮಟ್ಟದ ಸದ್ಯದ ಚಿತ್ರಣ ಗಮನಿಸಿದರೆ, ಆನ್ಲೈನ್ ಮೂಲಕ ನೇರವಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 6,70,814 (ಶೇ.1.21) ಆಗಿದೆ. ಇನ್ನೊಂದೆಡೆ, ಮೃತಪಟ್ಟವರು, ಕಾಯಂ ಆಗಿ ಸ್ಥಳಾಂತರಗೊಂಡವರು ಮತ್ತು ಪತ್ತೆಯಾಗದ ಮತದಾರರನ್ನು ಒಳಗೊಂಡ ‘ಎಎಸ್ಡಿಡಿಒ’ ವರ್ಗದ ಸಂಖ್ಯೆಯೇ ಬರೋಬ್ಬರಿ 91.86 ಲಕ್ಷಕ್ಕೂ (ಶೇ.16.57) ಅಧಿಕವಿದೆ. ಗ್ರೇಟರ್ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇಂದಿಗೂ ಡಿಜಿಟಲೀಕರಣದ ಪ್ರಮಾಣ ಶೇ. 44ರಿಂದ 50ರಷ್ಟೇ ಇದೆ.
ಆರು ಜನಕ್ಕಿಂತ ಹೆಚ್ಚಿದ್ದರೆ ನೋಟಿಸ್!: ವಿವಿಧ ವಿಚಾರಗಳಲ್ಲಿ ಆಯೋಗ ನೋಟಿಸ್ ಕೊಡಲಿದೆ. ನೈಜ ಮಾಹಿತಿ ಖಚಿತ ಮಾಡಿಕೊಳ್ಳುವುದಷ್ಟೇ ನೋಟಿಸ್ ನೀಡುವ ಉದ್ದೇಶವಾಗಿರುತ್ತದೆ. ಹೆಸರಿನಲ್ಲಿ ವ್ಯತ್ಯಾಸ, ವಯೋಮಾನ, ಹುಟ್ಟಿದ ದಿನಾಂಕ ವ್ಯತ್ಯಾಸ, ತಂದೆ- ಮಗನ ನಡುವಿನ ವಯೋಮಾನದ ಅಂತರ (15 ವರ್ಷಕ್ಕಿಂತ ಕಡಿಮೆ ಇದ್ದರೆ), ಪ್ರೋಜನಿ ಲಿಂಕ್ ಮಾಡಿದ್ದರೆ ಅಜ್ಜ, ಅಜ್ಜಿ- ಮೊಮ್ಮಕ್ಕಳ ವಯೋಮಾನದ ಬಗ್ಗೆ (40 ವರ್ಷಕ್ಕಿಂತ ಕಡಿಮೆ ಇದ್ದರೆ) ನೋಟಿಸ್ ಬರಲಿದೆ. ಬಹು ಮುಖ್ಯವಾಗಿ ಮನೆಯಲ್ಲಿ ಆರು ಮತದಾರರಿಗಿಂತ ಹೆಚ್ಚಿದ್ದರೆ ನೋಟಿಸ್ ಬರಲಿದ್ದು, ಸದಸ್ಯರನ್ನು ಖಚಿತಪಡಿಸಿಕೊಳ್ಳಲು ನೀಡಲಾಗುತ್ತದೆ.
ದಾಖಲೆ ಸಲ್ಲಿಕೆ: ಕೆಲವು ಪ್ರಕರಣಗಳಲ್ಲಿ ದಾಖಲೆ ಸಲ್ಲಿಸಬೇಕಾಗುತ್ತದೆ. ಆ ದಾಖಲೆಯನ್ನು ಬಿಎಲ್ಒ- ಇಆರ್ಒಗಳು ಖಚಿತಪಡಿಸಿಕೊಂಡ ನಂತರ ಅರ್ಜಿ ಅಂಗೀಕರಿಸುತ್ತಾರೆ. ಉದಾಹರಣೆಗೆ 2002ರ ಮತದಾರರ ಪಟ್ಟಿಯ ಮಾಹಿತಿ ನೀಡದೇ ಇದ್ದರೆ, ಹೆಸರು ತಪ್ಪಾದ ಪ್ರಕರಣಗಳಲ್ಲಿ, ವಯೋಮಾನದ ಮಾಹಿತಿ ತಪ್ಪಾಗಿದ್ದರೆ ಯಾವ ದಾಖಲೆ ಸಲ್ಲಿಕೆ ಮಾಡಬೇಕೆಂದು ಆಯೋಗ ಆ.17ರ ಬಳಿಕ ಮಾಹಿತಿ ನೀಡಲಿದೆ.
ಅರ್ಜಿಗಳು ಡಿಜಿಟಲೀಕರಣದ ಬಳಿಕ ಆಟೋ ಚೆಕ್ ಆಗಲಿದೆ. ತಂತ್ರಜ್ಞಾನವೇ ಹೊಂದಾಣಿಕೆ ಯಾಗದ ಅಂಶವನ್ನು ಎತ್ತಿ ತೋರಿಸಿ ನೋಟಿಸ್ ಜನರೇಟ್ ಮಾಡಿಕೊಡಲಿದೆ. ಇಆರ್ಒಗಳು ಅದನ್ನು ಮುದ್ರಿಸಿ ಬಿಎಲ್ಒಗಳ ಮೂಲಕ ಸಂಬಂಧಪಟ್ಟ ಮತದಾರರಿಗೆ ತಲುಪಿಸಲಿದ್ದಾರೆ. ಜತೆಗೆ ಕರಡು ಮತದಾರರ ಪಟ್ಟಿಯಲ್ಲಿ ದೋಷಗಳಿದ್ದಲ್ಲಿ ಅದನ್ನು ಸರಿಪಡಿಸಿ ಕೊಳ್ಳಲು ಫಾರಂ 8 ಬಳಸಲು ತಿಳಿಸಲಾಗುತ್ತದೆ. ಫಾರಂ 8 ಭರ್ತಿ ಮಾಡಿ ಸೂಕ್ತ ದಾಖಲೆಯೊಂದಿಗೆ ನೀಡಿದರೆ ಮತದಾರರ ಪಟ್ಟಿಯಲ್ಲಿನ ಮಾಹಿತಿ ದೋಷರಹಿತವಾಗಿ ದಾಖಲಾಗುತ್ತದೆ.