sir process: ಸವಾಲುಗಳ ದಾಟಿ ಸಾಗಿ ಬಂದ ಎಸ್‌ಐಆರ್

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • 11 ಬಾರಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ
  • ಮೊದಲ ಪರಿಷ್ಕರಣ ನಂತರ 17.3 ಕೋಟಿ ಮತದಾರರು
  • 1989ರಲ್ಲಿ ಮತದಾನದ ವಯಸ್ಸು 18ಕ್ಕೆ ಇಳಿಕೆ

ಮಂಜುನಾಥ ಗದಗಿನ ಹುಬ್ಬಳ್ಳಿ
ಅಕ್ರಮ, ಮರಣ, ಎರಡು ಕಡೆ ಮತದಾನ ಹೊಂದಿದವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ದೇಶಾದ್ಯಂತ ನಡೆದಿದೆ. ಈ ಬಾರಿ ಮಾತ್ರ ದೇಶದಲ್ಲಿ ತೀವ್ರ ಚರ್ಚೆಗೂ ಕಾರಣವಾಗಿದೆ. ಆದರೆ, ದೇಶದಲ್ಲಿ ಇದುವರೆಗೂ 11 ಬಾರಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆದಿದ್ದು, ಅನರ್ಹರಿಗೆ ಗೇಟ್‌ಪಾಸ್ ನೀಡಲಾಗಿದೆ.
ಭಾರತದಲ್ಲಿ ಮತದಾರರ ಪಟ್ಟಿಯ ತಯಾರಿಕೆಯು ಒಂದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಿಂದ ಹಿಡಿದು ಇಂದು ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಯಾಗಿ ವಿಕಸನಗೊಂಡಿದೆ. 1950ರ ದಶಕದಲ್ಲಿ ಅಲ್ಪಸಂಖ್ಯಾತ ಶ್ರೀಮಂತ ವರ್ಗಕ್ಕೆ ಸೀಮಿತವಾಗಿದ್ದ ಮತದಾನದ ಹಕ್ಕಿನಿಂದ, ಇಂದಿನ ಸಾರ್ವತ್ರಿಕ ವಯಸ್ಕ ಮತದಾನದ ಪದ್ಧತಿಯವರೆಗೆ ಬೆಳೆದು ಬಂದಿದೆ. ಅದರಲ್ಲೂ ಕಾಲಕಾಲಕ್ಕೆ ಮತದಾರರ ಪಟ್ಟಿ ಪರಿಷ್ಕರಿಸುತ್ತ ಪಾರದರ್ಶಕ ಚುನಾವಣೆಗಳಿಗೆ ಸಾಕ್ಷಿಯಾಗಿದೆ.
ಯಾವ ವರ್ಷಗಳಲ್ಲಿ ನಡೆದಿವೆ?: 1952-56, 1957, 1961, 1965, 1966, 1983-84, 1987-89, 1992, 1993, 1995 ಹಾಗೂ 2002-04 ಈ ವರ್ಷಗಳಲ್ಲಿ ದೇಶದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮಾಡಲಾಗಿದೆ. ಮೂರು ಬಾರಿ ಜವಾಹರಲಾಲ್ ನೆಹರೂ ಕಾಲದಲ್ಲಿ, ಒಂದು ಬಾರಿ ಲಾಲ್‌ಬಹಾದ್ದೂರ್ ಶಾಸ್ತ್ರೀ, ಎರಡು ಬಾರಿ ಇಂದಿರಾ ಗಾಂಧಿ, ಒಂದು ಬಾರಿ ರಾಜೀವ್ ಗಾಂಧಿ, ಎರಡು ಬಾರಿ ಪಿ.ವಿ.ನರಸಿಂಹರಾವ್ ಹಾಗೂ 2002ರಲ್ಲಿ ಅಟಲ್‌ಬಿಹಾರಿ ವಾಜಪೇಯಿ ಆಡಳಿತದಲ್ಲಿ ಆರಂಭಗೊಂಡು ಮನಮೋಹನಸಿಂಗ್ ಆಡಳಿತದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿದಿದೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ 12ನೇ ಎಸ್‌ಆರ್‌ಐ ಪ್ರಕ್ರಿಯೆ ನಡೆದಿದಿದ್ದು, ಎರಡು ಹಂತದಲ್ಲಿ ಮುಗಿದು ಮೂರನೇ ಹಂತದ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಆದರೆ, ಬಾರಿ ಸರ್ ಎಂಬ ಪದದಿಂದ ದೇಶಾದ್ಯಂತ ಬಾರಿ ಸಂಚಲನ ಮೂಡಿಸಿದೆ. ಇದು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿದೆ.
ಮೊದಲ ಪರಿಷ್ಕರಣೆ: ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಅಂದರೆ 1952-1956ರಲ್ಲಿ ಸಾರ್ವತ್ರಿಕ ವಯಸ್ಕ ಮತದಾನದ ಆಧಾರದ ಮೇಲೆ ಪಟ್ಟಿ ತಯಾರಿಸಲಾಯಿತು. ಇದು ಪ್ರಜಾಪ್ರಭುತ್ವಕ್ಕೆ ಭದ್ರ ಅಡಿಪಾಯ ಹಾಕಿತು. ಆಗ 17.3 ಕೋಟಿ ಮತದಾರರಿದ್ದರು. ಸದ್ಯ 96 ಕೋಟಿಗೂ ಅಧಿಕ ಮತದಾರರು ಇದ್ದಾರೆ.
ಶಾಸನಬದ್ಧ ಸುಧಾರಣೆಗಳು: 1957-1966ವರೆಗೂ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಶಾಸನಬದ್ಧ ಸುಧಾರಣೆಗಳನ್ನು ತರಲಾಯಿತು. 1957, 61, 65, 66ರಲ್ಲಿ ನಿಯಮಿತವಾಗಿ ಮತದಾರ ಪಟ್ಟಿ ಪರಿಷ್ಕರಣೆ ಮಾಡಲಾಯಿತು. 1956ರ ತಿದ್ದುಪಡಿಯ ಮೂಲಕ ‘ಮುಖ್ಯ ಚುನಾವಣಾ ಅಧಿಕಾರಿ’ (ಸಿಇಒ) ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ’ ಹುದ್ದೆಗಳನ್ನು ಸೃಷ್ಟಿಸಲಾಯಿತು. 1966ರಲ್ಲಿ ಪ್ರತಿ ಚುನಾವಣೆಗೂ ಮುನ್ನ ಪರಿಷ್ಕರಣೆ ನಡೆಸುವ ಕಡ್ಡಾಯ ನಿಯಮ ಜಾರಿಗೆ ಬಂತು.
ಗುರುತಿನ ಚೀಟಿ ಬಂತು: 1983-1995ರವರೆಗೂ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಕ್ಷೇತ್ರಗಳ ಮರು ವಿಂಗಡಣೆ, ಮತದಾರರ ಪಟ್ಟಿಗಳ ದೋಷ ನಿವಾರಣೆ ಮಾಡಲಾಯಿತು. 1989ರಲ್ಲಿ ಮತದಾನದ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು. 1998ರಲ್ಲಿ ಚುನಾವಣಾ ಆಯೋಗ ತನ್ನ ಜಾಲತಾಣವನ್ನು ಪ್ರಾರಂಭಿಸಿತು. 1993ರಲ್ಲಿ ಐತಿಹಾಸಿಕ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ’ (ಎಪಿಕ್) ಪರಿಚಯಿಸಲಾಯಿತು.
ಬಿಎಲ್‌ಒಗಳ ಪರಿಚಯ: 2002-2004ರಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ) ನೇಮಕ ಮನೆ ಮನೆಗೆ ಭೇಟಿ ನೀಡಿ ಪಟ್ಟಿ ಪರಿಷ್ಕರಣೆ ಮಾಡಲಾಯಿತು. ಈ ಪ್ರಕ್ರಿಯೇ ವೇಳೆ ಮತದಾರರ ಪಟ್ಟಿಗೆ ಡಿಜಿಟಲ್ ಟಚ್ ನೀಡಲಾಯಿತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿ ಪ್ರಮುಖವಾಗಿದ್ದು, ಇದನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಮಾಡಲೇ ಬೇಕು. ಇಲ್ಲವಾದರಲ್ಲಿ ಅನರ್ಹರು, ಅಕ್ರಮ ವಲಸಿಗರು ಮತದಾನದ ಹಕ್ಕು ಪಡೆದು ವ್ಯವಸ್ಥೆಯನ್ನೇ ಹಾಳು ಮಾಡುತ್ತಾರೆ. ಸದ್ಯ ನಡೆಯುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಗೆ ಸಕಲರೂ ಸಾಥ್ ನೀಡಿ ಸುಭದ್ರ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಬೇಕಾಗಿದೆ.

ಬಿಹಾರದಿಂದ 12ಕ್ಕೆ ಪರಿಷ್ಕರಣೆ

2025 ಜೂನ್‌ನಲ್ಲಿ ಬಿಹಾರದಲ್ಲಿ ಮೊದಲ ಬಾರಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಆರಂಭಗೊಂಡು ಸೆಪ್ಟೆಂಬರ್‌ನಲ್ಲಿ ಕೊನೆಗೊಂಡಿತು. ಈ ವೇಳೆ 36 ಲಕ್ಷ ಜನ ವಲಸಿಗರು, 22 ಲಕ್ಷ ಮೃತಪಟ್ಟ, 7 ಲಕ್ಷ ಜನ ಒಂದಕ್ಕಿಂತ ಹೆಚ್ಚು ನೋಂದಾಯಿಸಿದ್ದಾರೆ ಎಂದು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಒಟ್ಟು 66 ಲಕ್ಷ ಮತದಾರರು ಅನರ್ಹರು ಎಂದು ಚುನಾವಣೆ ಆಯೋಗ ತಿಳಿಸಿತ್ತು.
ಹಂತ ಎರಡು 2025 ಅಕ್ಟೋಬರ್‌ನಿಂದ 2026 ಫೆಬ್ರವರಿವರೆಗೂ ಛತ್ತಿಸಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮ ಬಂಗಾಲ, ಪುದುಚೇರಿ, ಲಕ್ಷದ್ವೀಪ, ಅಂಡಮಾನ್-ನಿಕೋಬಾರ ದ್ವೀಪಗಳಲ್ಲಿ ನಡೆದಿದೆ. ಅನರ್ಹ ಮತದಾರರ ಮಾಹಿತಿಯನ್ನು ಇನ್ನೂ ನೀಡಿಲ್ಲ.
ಮೂರನೇ ಹಂತ 2026 ಜುಲೈನಲ್ಲಿ ಆರಂಭಗೊಂಡಿದ್ದು, ಇದು ಅಕ್ಟೋಬರ್‌ವರೆಗೂ ನಡೆಯಲಿದೆ. ಇದರಲ್ಲಿ 16 ರಾಜ್ಯ, ಮೂರು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಕರ್ನಾಟಕದಲ್ಲೂ ಜೂನ್ 30ರಿಂದ ಆರಂಭಗೊಂಡಿದೆ. ಇದಕ್ಕಾಗಿ 59,050 ಬಿಎಲ್‌ಒ, 25,284 ಬಿಎಲ್‌ಎಗಳನ್ನು ನೇಮಕ ಮಾಡಲಾಗಿದೆ. ಒಟ್ಟು 5,55,74,064 ಮತದಾರರು ಕರ್ನಾಟದಲ್ಲಿ ಇದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net