

ಬೆಂಗಳೂರು: ಚುನಾವಣೆ ಆಯೋಗ ರಾಜ್ಯದಲ್ಲಿ ನಡೆಸಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯ ಭಾಗವಾಗಿ ಕರಡು ಮತದಾರರ ಪಟ್ಟಿ ಸಿದ್ಧಪಡಿಸುವ ಹಂತ ತಲುಪಿದ್ದು, ಈ ವೇಳೆ ಅನೇಕ ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ. ಆ.18ರ ಎಎಸ್ಡಿಡಿಒ ದತ್ತಾಂಶಗಳ ಪ್ರಕಾರ ರಾಜ್ಯಾದ್ಯಂತ ಒಟ್ಟು 1,07,96,409 ಪ್ರಕರಣ ಗುರುತಿಸಲಾಗಿದ್ದು, ಈ ಪೈಕಿ ‘ಶಾಶ್ವತವಾಗಿ ಸ್ಥಳಾಂತರಗೊಂಡವರ’ ಸಂಖ್ಯೆ 65,45,717 ರಷ್ಟಿದೆ. ಇದರ ಜತೆಗೆ ಮೃತಪಟ್ಟಿರುವ 16,39,871 ಜನರ ಮಾಹಿತಿಯೂ ಪಟ್ಟಿಯಲ್ಲಿದೆ.
2026ರ ಜೂನ್ 1ರಲ್ಲಿ ಮತದಾರರ ಪಟ್ಟಿಯಲ್ಲಿದ್ದವರಿಗೆ ಅರ್ಜಿ ಮುದ್ರಿಸಿ ಮನೆಗೆ ಕಳಿಸಲಾಗಿತ್ತು. ಇವರ ಪೈಕಿ 65.45 ಲಕ್ಷ ಮತದಾರರು ಶಾಶ್ವತವಾಗಿ ವಿಳಾಸ ಬದಲಿಸಿದ ಕಾರಣ ಅವರಿಗೆ ಅರ್ಜಿ ತಲುಪಿಲ್ಲ. ಹೀಗಾಗಿ ಅವರೆಲ್ಲ ಹೊಸದಾಗಿ ಫಾರಂ 6 ಸಲ್ಲಿಸಬೇಕಾಗುತ್ತದೆ. ರಾಜ್ಯದ 5.54 ಕೋಟಿ ಮತದಾರರಿಗೆ ಎನ್ಯುಮರೇಷನ್ ಫಾಮ್ರ್ ವಿತರಿಸಲು ಆಯೋಗ ಕ್ರಮಕೈಗೊಂಡಿತ್ತು, ಈ ಪೈಕಿ 4.46 ಕೋಟಿ ಮತದಾರರು ಅರ್ಜಿ ಭರ್ತಿ ಮಾಡಿ ಆಯೋಗಕ್ಕೆ ಹಿಂದಿರುಗಿಸಿದ್ದಾರೆ.
ಒಟ್ಟು 1.07 ಕೋಟಿ ಎಎಸ್ಡಿಡಿಒ ಪ್ರಕರಣಗಳ ಪೈಕಿ ಶಾಶ್ವತ ಸ್ಥಳಾಂತರ ಹಾಗೂ ಮೃತಪಟ್ಟವರನ್ನು ಹೊರತುಪಡಿಸಿ, ಗೈರು ಹಾಜರಾದವರ 15,17,054 ಪ್ರಕರಣ ದಾಖಲಾಗಿವೆ. ಅಲ್ಲದೆ, ಈಗಾಗಲೇ ಬೇರೆಡೆ ನೋಂದಣಿಯಾಗಿರುವ 7,09,875 ಪ್ರಕರಣ ಹಾಗೂ ಇತರ ಕಾರಣಗಳ 3,83,892 ಪ್ರಕರಣಗಳು ಈ ವರದಿಯಲ್ಲಿ ಸೇರಿವೆ. ಅನ್ಯ ಸ್ಥಳ ಎಂದರೆ ಬೇರೆಡೆಯೂ ಮತದಾರರ ಪಟ್ಟಿಯಲ್ಲಿದ್ದು ಅಲ್ಲಿ ಉಳಿಸಿಕೊಂಡಿರಬಹುದು ಅಥವಾ ಅನ್ಯ ರಾಜ್ಯದಲ್ಲಿ ಸೇರಿಸಿರಬಹುದು.
ಎಎಸ್ಡಿಡಿಒ ಪಟ್ಟಿಯಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ನಿಧನರಾದ ಕಾರಣಕ್ಕೆ ಅರ್ಜಿ ವಿತರಿಸದೆ ಇರುವುದು. 2026ರ ಜೂ.1ರ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಈಗ ನಿಧನರಾಗಿದ್ದಾರೆಂದು ಸ್ಥಳ ಮಹಜರು ಆದ ಪ್ರಕರಣದಲ್ಲಿ ಬೆಂಗಳೂರು ದಕ್ಷಿಣದಲ್ಲಿ 20,426 ಅತೀ ಹೆಚ್ಚು. ಬಳಿಕ ಮಹದೇವಪುರ - 17,016, ಬ್ಯಾಟರಾಯನಪುರ 16,456, ಕೆ.ಆರ್.ಪುರ 16,335, ಯಶವಂತಪುರ- 15,797. ಬೆಂಗಳೂರು ನಗರ ಭಾಗ ಹೊರತುಪಡಿಸಿ ಅತಿ ಹೆಚ್ಚು ನಿಧನರಾದವರ ಪ್ರಕರಣಗಳಿರುವ ಪ್ರಮುಖ ಕ್ಷೇತ್ರಗಳ ಪೈಕಿ ಕೃಷ್ಣರಾಜ, ಲಿಂಗಸುಗೂರು, ಬಳ್ಳಾರಿ ನಗರ, ರಾಯಚೂರು, ಹುಣಸೂರು ಸೇರಿವೆ.