ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ವೆಂಕಟೇಶ ಪೂಜಾರ ಮಾಹಿತಿ
106 ಕೆಜಿ ಶುದ್ಧ ಬೆಳ್ಳಿಯಿಂದ ರಥ
ಬಾದಾಮಿ: ಸಮೀಪದ ಬನಶಂಕರಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಬೆಳ್ಳಿರಥವನ್ನು ಜೂ. 17ರಂದು ದೇವಿಗೆ ಸಮರ್ಪಣೆ ಮಾಡಲಾಗುತ್ತಿದೆ ಎಂದು ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ವೆಂಕಟೇಶ ಪೂಜಾರ ತಿಳಿಸಿದರು.
ಬನಶಂಕರಿ ದೇವಸ್ಥಾನ ಟ್ರಸ್ಟ್ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಕ್ತರು ಮತ್ತು ಅರ್ಚಕರ ಬಹುಕಾಲದ ಆಶಯದಂತೆ ಭಕ್ತರ ದೇಣಿಗೆಯಿಂದ ಈ ರಥ ನಿರ್ಮಾಣಗೊಂಡಿದ್ದು, ನಿಪ್ಪಾಣಿಯ ಸುರೇಶ್ ಶೆಟ್ಟಿಯವರಿಂದ ಬೆಳ್ಳಿ ಲೇಪನ ಕಾರ್ಯ ನೆರವೇರಿಸಲಾಗಿದೆ ಎಂದು ಹೇಳಿದರು.
ಸುಮಾರು 106 ಕೆಜಿ ಶುದ್ಧ ಬೆಳ್ಳಿಯಿಂದ ರಥವನ್ನು ಅಲಂಕರಿಸಲಾಗಿದ್ದು, ಒಟ್ಟು 5ರಿಂದ 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಜೂನ್ 16 ಮತ್ತು 17ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಜೂನ್ 17ರಂದು ಬೆಳಗ್ಗೆ ವಿಶೇಷ ಪೂಜೆಗಳ ನಂತರ ಮಧ್ಯಾಹ್ನ 12.45ಕ್ಕೆ ರಥ ಸಮರ್ಪಣೆ ನೆರವೇರಲಿದೆ. ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವವನ್ನು ಆಚರಿಸಲಾಗುವುದು.
ಈ ರಥದಲ್ಲಿ ಸಿಂಹ ಲಾಂಛನ ಹಾಗೂ ಅಷ್ಟಲಕ್ಷ್ಮಿಯ ಅಲಂಕಾರಿಕ ಶಿಲ್ಪಗಳನ್ನು ಅಳವಡಿಸಲಾಗಿದ್ದು, ವಿವಿಧ ರಾಜ್ಯಗಳ ಸುಮಾರು 25 ಅಕ್ಕಸಾಲಿಗರು ಆರು ತಿಂಗಳ ಕಾಲ ಶ್ರಮಿಸಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪೂಜಾರ ಮನವಿ ಮಾಡಿದರು.
ಪೂಜಾರ ಮನೆತನ ಕುಟುಂಬಸ್ಥರಾದ ಮಹೇಶ, ಮಹಾಂತೇಶ, ವಿದ್ಯಾನಂದ, ಶಂಕರ, ಲಕ್ಷ್ಮಣ, ಚಿದಂಬರ, ಕಿರಣ, ರಮೇಶ, ಶ್ರೀನಿವಾಸ, ಶ್ರೀರಂಗ, ಉದಯ ಸೇರಿ ಇತರರು ಉಪಸ್ಥಿತರಿದ್ದರು.