ದೇವನಹಳ್ಳಿ ಕೋಟೆ ಸಮೀಪದ ಬೈಪಾಸ್​ಗೆ ಸಿಗ್ನಲ್​? / DEVANAHALLI

ದೇವನಹಳ್ಳಿ ಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ ಬೈಪಾಸ್​ ರಸ್ತೆ ದಾಟದಂತೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಮುಂದಾದ ಸಂಚಾರ ವಿಭಾಗದ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ಉಂಟಾಯಿತು.
ದೇವನಹಳ್ಳಿ ಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ ಬೈಪಾಸ್​ ರಸ್ತೆ ದಾಟದಂತೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಮುಂದಾದ ಸಂಚಾರ ವಿಭಾಗದ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ಉಂಟಾಯಿತು.
Published on
ದೇವನಹಳ್ಳಿ : ಬೆಂಗಳೂರು&ಹೈದರಾಬಾದ್​ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 44 ಹಾದುಹೋಗಿರುವ ದೇವನಹಳ್ಳಿ ಕೋಟೆ ಬಳಿಯ ಬೈಪಾಸ್​ನಲ್ಲಿ ನಿತ್ಯ ಸಂಭವಿಸುವ ಅಪಘಾತ ಪ್ರಕರಣಗಳ ತಡೆಗಾಗಿ ಸಿಗ್ನಲ್​ ಅಳವಡಿಸಬೇಕೆಂಬ ಸಾರ್ವಜನಿಕರ ಒತ್ತಾಯಕ್ಕೆ ಸಂಚಾರ ವಿಭಾಗದ ಪೊಲೀಸರು ಸಮ್ಮತಿ ವ್ಯಕ್ತಪಡಿಸಿದ್ದಾರೆ.
ಈ ಬೈಪಾಸ್​ನಲ್ಲಿ ತಿಂಗಳಿಗೆ ಕನಿಷ್ಠ ಮೂರು&ನಾಲ್ಕು ಜೀವ ಬಲಿಯಾಗುತ್ತಿರುವ ಕಾರಣ ಸಂಚಾರ ವಿಭಾಗದ ಪೊಲೀಸರು, ಪಟ್ಟಣ ಮಾರ್ಗವಾಗಿ ಹಕ್ಕುಪೇಟೆ, ಬೊಮ್ಮವಾರದ ಕಡೆ ತೆರಳಲು ಹೆದ್ದಾರಿ ದಾಟುವ ಮಾರ್ಗವನ್ನೇ ಮಂಗಳವಾರ ಬಂದ್​ ಮಾಡಲು ಮುಂದಾದಾಗ ಸುತ್ತಮುತ್ತಲ ಗ್ರಾಮಸ್ಥರು, ಸಾರ್ವಜನಿಕರು ಜಮಾವಣೆಗೊಂಡು ತಡೆವೊಡ್ಡಿದರು. ಈ ವೇಳೆ ಪುರಸಭೆ ಮಾಜಿ ಸದಸ್ಯ ಎಸ್​.ನಾಗೇಶ್​ ಮಾತನಾಡಿ, ಹೆದ್ದಾರಿಯ ಈ ಬೈಪಾಸ್​ ರಸ್ತೆಯು ಅವೈಜ್ಞಾನಿಕವಾಗಿದೆ. ಬೈಪಾಸ್​ ದಾಟುವಾಗ ಸಾಕಷ್ಟು ಅಪಘಾತಗಳು ಸಂಭವಿಸುತ್ತವೆ. ಜೀವ ಹಾನಿಯಾಗುತ್ತಿದೆ. ಇಲ್ಲಿ ಅಂಡರ್​ಪಾಸ್​ ನಿರ್ಮಿಸಿ ಹೆದ್ದಾರಿಯಿಂದ ಸರ್ವೀಸ್​ ರಸ್ತೆಗೆ ಸಂಪರ್ಕ ಕಲ್ಪಿಸುವ ಮೂಲಕ ಸುತ್ತಮುತ್ತಲ ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇದರಿಂದ ಅಪಘಾತಗಳನ್ನು ತಡೆಗಟ್ಟಬಹುದೇ ವಿನಾ ಇನ್ನಾವುದರಿಂದಲೂ ಸಾಧ್ಯವಿಲ್ಲ ಎಂದರು.
ಈ ಮಾರ್ಗದಲ್ಲಿ ಅಟಲ್​ ಬಿಹಾರಿ ವಾಜಪೇಯಿ ವಸತಿ ಶಾಲೆ, ಅರಣ್ಯ ಇಲಾಖೆ, ಇತಿಹಾಸ ಪ್ರಸಿದ್ಧ ಸುಂದರೇಶ್ವರ ದೇವಾಲಯ ಇದ್ದು, ಪಟ್ಟಣದ 23 ನೇ ವಾರ್ಡ್​ನ ಕೋಡಿ ಮಂಚೇನಹಳ್ಳಿ, ಹಕ್ಕುಪೇಟೆ, ಬೊಮ್ಮವಾರ, ಕುಂದಾಣ ಸೇರಿ ಹತ್ತಾರು ಗ್ರಾಮಗಳಿಗೆ ಸುಲಭ ಸಂಪರ್ಕ ರಸ್ತೆಯಾಗಿದೆ. ಈಗ ಈ ರಸ್ತೆ ಮಾರ್ಗವಾಗಿವಾಹನಗಳು ಹಾದುಹೋಗದಂತೆ ತಡೆವೊಡ್ಡಿದರೆ ಹತ್ತಾರು ಕಿ.ಮೀ ಸುತ್ತಿ ಬಳಸಿ ಬರಬೇಕಾಗುತ್ತದೆ. ಇಂಧನ ಬೆಲೆ ದುಬಾರಿಯಾಗಿರುವ ಸಂಕಷ್ಟ ಒಂದೆಡೆಯಾದರೆ, ಸಮಯವೂ ವ್ಯರ್ಥವಾಗುತ್ತದೆ. ಹಾಗಾಗಿ ಇಲ್ಲಿ ಅಂಡರ್​ ಪಾಸ್​ ಅಥವಾ ಸಿಗ್ನಲ್​ ಅಳವಡಿಸಿ ಜೀವ ಉಳಿಸುವ ಕೆಲಸ ಮಾಡಿ ಎಂದರು.
ಪರಸ್ಪರ ವಾಗ್ವಾದ : ಪುರಸಭೆ ಮಾಜಿ ಸದಸ್ಯ ಸೊಸೈಟಿ ಕುಮಾರ್​ ಮಾತನಾಡಿ, ನಿತ್ಯ ಪಟ್ಟಣಕ್ಕೆ ಬಂದು ಹೋಗಲು ಈ ಭಾಗದ ಜನ ಇದೇ ರಸ್ತೆ ಅವಲಂಬಿಸಿದ್ದಾರೆ. ಅಪಘಾತ ತಡೆಯಬೇಕೆಂದರೆ ಮೊದಲು ಇಲ್ಲಿ ಸಿಗ್ನಲ್​ ಹಾಕಿ ಎಂದು ಹಲವಾರು ಬಾರಿ ಮನವಿ ಮಾಡಲಾಗಿದೆ. ಇದು ಸಂಚಾರ ವಿಭಾಗದ ಪೊಲೀಸರಿಗೆ ಅಂತಿಮ ಗಡುವು. ಅವರಿಂದ ಸಿಗ್ನಲ್​ ಹಾಕಿಸಲಾಗದಿದ್ದರೆ ಸಾರ್ವಜನಿಕರೇ ಹಣ ಸಂಗ್ರಹಿಸಿ ಇಲ್ಲಿ ಸಿಗ್ನಲ್​ ದೀಪಗಳನ್ನು ಅಳವಡಿಸಲು ತೀಮಾರ್ನಿಸಿದ್ದೇವೆ ಎಂದರು.
ಈ ವೇಳೆ ಕೆಲ ಹೊತ್ತುಸಂಚಾರ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆದು ಅಂತಿಮವಾಗಿ ಇನ್​ಸ್ಪೆಕ್ಟರ್​ ಮುರಳೀಧರ್​ ರಸ್ತೆ ತಡೆಯುವ ನಿರ್ಧಾರದಿಂದ ಹಿಂದೆ ಸರಿದು, ಆದಷ್ಟು ಬೇಗ ಇಲ್ಲಿ ಸಿಗ್ನಲ್​ ಅಳವಡಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net