ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ನಾಳೆ

ಪರಶುರಾಂ ಶೇಗುರಕರ್​
ಪರಶುರಾಂ ಶೇಗುರಕರ್​
Published on

ಪ್ರಮುಖ ಮುಖ್ಯಾಂಶಗಳು

  • ಶಿವಾಜಿ ಮಹಾರಾಜ ಸೇನಾ ಅಧ್ಯಕ್ಷ ಪರಶುರಾಂ ಮಾಹಿತಿ
  • ಹಿಂದೂ ಸಂಘಟನೆಗಳ ವಿರುದ್ಧ ಟಾರ್ಗೇಟ್​
ಯಾದಗಿರಿ: ಹಿಂದೂ ಸಂಘಟನೆ ಮತ್ತು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಾವು ಆಯೋಜಿಸುವ ಕಾರ್ಯಕ್ರಮಗಳಿಗೆ ಸುಖಾ ಸುಮ್ಮನೆ ಅಡ್ಡಿಪಡಿಸುತ್ತಿರುವ ಮತ್ತು ಕಾನೂನು ಉಲ್ಲಂಘಸಿ ಮಸೀದಿಗಳಲ್ಲಿ ಹೆಚ್ಚಿನ ಶಬ್ದ ಹರಿಬಿಟ್ಟರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸದ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್​ ಇಲಾಖೆ ಕ್ರಮ ಖಂಡಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಛತ್ರಪತಿ ಶಿವಾಜಿ ಮಹಾರಾಜ ಸೇನಾ ಸಂಸ್ಥಾಪಕ ಅಧ್ಯಕ್ಷ ಪರಶುರಾಂ ಶೇಗುರಕರ್​ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮತ್ತು ಕೆಲ ಪುಡಿ ರಾಜಕಾರಣಿಗಳ ಮಾತು ಕೇಳಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್​ ಇಲಾಖೆ ಹೆಜ್ಜೆ ಇಡುತ್ತಿದೆ ಎಂದು ಅವರು ಆರೋಪಿಸಿದರು. ವೀರ ಸಾವರ್ಕರ್​ ಸೇನೆ ಮತ್ತು ಛತ್ರಪತಿ ಶಿವಾಜಿ ಮಹಾರಾಜ್​ ಸೇನಾ ಸಂಘಟನಗಳು ಪ್ರತಿ ವರ್ಷದಂತೆ ಈ ವರ್ಷವೂ ಶಿವಾಜಿ ಜಯಂತಿ ಆಚರಣೆ ನಿಮಿತ್ತ ಮೆರವಣಿಗೆ ಮತ್ತು ಬಹಿರಂಗ ಸಭೆಗೆ ಪರವಾನಿಗೆ ಕೇಳಿದರೆ ಅದನ್ನು ನೀಡಲು ಎಡಬಿಡದೆ ಸತಾಯಿಸಿರುವ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್​ ಇಲಾಖೆ, ಹೋರಾಟ ಮಾಡಿದಾಗ ಕೊನೆಗೆ ನೀಡಿತು. ನಾವು ಹಾಗೆ, ಹೀಗೆ ಮಾಡಿ ತಯಾರಿ ಮಾಡಿಕೊಂಡು ಬಹಿರಂಗ ಸಭೆಗೆ ಮುಖ್ಯ ಭಾಷಣಕಾರರಾಗಿ ಹೈದರಾಬಾದ್​ ನಗರದ ಘೋಷಮಹಲ್​ ಶಾಸಕ ರಾಜಾಸಿಂಗ್​ ಅವರನ್ನು ಆಹ್ವಾನಿಸಿದ್ದೇವು. ಅಲ್ಲೂ ಕಲ್ಲು ಹಾಕಿದ ಜಿಲ್ಲಾಡಳಿತ, ಅವರಿಗೆ ಮುಂಚೆಯೆ ನೋಟಿಸ್​ ನೀಡಿ ಉತ್ತರ ಪಡೆಯದೇ ಅವರನ್ನು ಯಾದಗಿರಿ ಜಿಲ್ಲೆಗೆ ಒಂದು ತಿಂಗಳು ರ್ನಿಬಂಧ ಹೇರಿದ್ದೂ ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ಯಾದಗಿರಿ ಜಿಲ್ಲೆಗೆ ಶಾಸಕ ರಾಜಾಸಿಂಗ್​ ಅವರ ವಿರುದ್ಧ ಹಾಕಲಾಗಿರುವ ರ್ನಿಬಂಧ ಕೂಡಲೇ ಹಿಂಪಡೆಯಬೇಕು. ಕಾರ್ಯಕ್ರಮ ಮಾಡಲು ಪರವಾನಿಗೆ ನೀಡಬೇಕು. ಈ ವಿಷಯದಲ್ಲಿ ಹಿಂದಿನ ಡಿಸಿ ಅವರು ಮಾಡಿದ ತಪ್ಪು ಹೊಸ ಡಿಸಿಯವರು ಮಾಡದೆ ನಮ್ಮ ನೆಲದಲ್ಲಿ ನಮಗೆ ಮುಕ್ತವಾಗಿ ಕಾರ್ಯಕ್ರಮ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮತ್ತೇನಾದರೂ ಹೊಸ ಆಟ ಹೂಡಿದರೆ ಮುಂದೆ ಆಗುವು ಅನಾಹುತಗಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್​ ಇಲಾಖೆಯೆ ಕಾರಣ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವೀರ ಸಾವರ್ಕರ್​ ಸೇನೆ ಜಿಲ್ಲಾಧ್ಯಕ್ಷ ತ್ಯಾಗರಾಜ್​ ತಾಂಡೂರಕರ್​, ಸಂಟನೆಗಳ ಪದಾಧಿಕಾರಿಗಳಾದ ಬನದೇಶ್​, ಪವನ ಲಿಂಗೇರಿ, ಸುರೇಶ ನಾಯಕ ಇತರರಿದ್ದರು.
ಹತ್ತಿಕುಣಿ ರಸ್ತೆ ಪಾಕಿಸ್ತಾನದಲ್ಲಿ ಇದೆಯಾ?
ಹತ್ತಿಕುಣಿ ರಸ್ತೆಯಲ್ಲಿ ಮೆರಣಿಗೆ ಬೇಡ ಎಂದು ಹೇಳಿದ್ದರ ಹಿಂದಿನ ಮರ್ಮವೇನು?. ಅದೇನು ಪಾಕಿಸ್ತಾನದಲ್ಲಿ ಇದೇಯಾ?, ಹಿಂದೆಲ್ಲ ಅದೇ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿದೆ. ಆಗ ಏನು ಆಗಿಲ್ಲ. ಇದೆಲ್ಲದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಶೇಗುರಕರ್​ ಜರಿದರು. ಕೋಮು ಗಲಭೆ ನೆಪವೊಡ್ಡಿ ಅವರನ್ನು ಬರದಂತೆ ತಡೆಯಲಾಗಿದೆ. ಹಾಗಾದರೆ ಕಳೆದ ಮೂರು ವರ್ಷಗಳಲ್ಲಿ ಆಗದ ಗದ್ದಲ, ಕೋಮು ಗಲಭೆ ಈ ವರ್ಷ ಹೇಗಾಗುತ್ತದೆ ಎಂದು ಅವರು ಮರು ಪ್ರಶ್ನಿಸಿದ್ದಾರೆ. 2017ರಲ್ಲಿ ಶಾಸಕ ರಾಜಾಸಿಂಗ್​ ಅವರ ವಿರುದ್ಧ ಆಗಿದ್ದ ಕೇಸ್​ 2022ರಲ್ಲಿಯೇ ಮುಕ್ತಾಯವಾಗಿದ್ದು, ಅದರಲ್ಲಿ ಅವರು ನಿದೋರ್ಶಿ ಎಂದು ನ್ಯಾಯಾಲಯ ಆದೇಶ ನೀಡಿದೆ. ವಸ್ತುಸ್ಥಿತಿ ಹೀಗಿದ್ದರೂ ಇದೇ ನೆಪ ಮುಂದೆ ಮಾಡಿ ಹಿಂದೂಗಳು ಯಾವುದೇ ಕಾರ್ಯಕ್ರಮ ಮಾಡದಂತೆ ಅಡ್ಡಿ ಪಡಿಸಲಾಗುತ್ತಿದೆ ಎಂದು ಅವರು ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net